ಬೆಂಗಳೂರು: ರಾಜ್ಯದ ಆರೋಗ್ಯ ಕ್ಷೇತ್ರದಲ್ಲಿ ಮುಂಚೂಣಿ ಸೇವೆ ಸಲ್ಲಿಸುತ್ತಿರುವ ಆಶಾ ಕಾರ್ಯಕರ್ತೆಯರ ಸೇವೆ ಅಪಬಳಕೆ ಬಗ್ಗೆ ಸಂಘಟನೆಗಳಿಂದ ಆಕ್ರೋಶ ವ್ಯಕ್ತವಾಗಿದೆ. ಅಧಿಕಾರಿಗಳ ನಡೆ ವಿರುದ್ದ ಸಿಡಿದೆದ್ದಿರುವ ಆಶಾ ಪರ ಸಂಘಟನೆ ಬಿಬಿಎಂಪಿ ವಿಶೇಷ ಆಯುಕ್ತರಿಗೆ ಸಲ್ಲಿಸಿರುವ ಮನವಿ ಪತ್ರವೊಂದು ಸಂಚಲನ ಸೃಷ್ಟಿಸಿದೆ.
ಆಶಾಗಳನ್ನು ಬಿಎಲ್‌ಒ ಕಾರ್ಯಗಳಿಗೆ ಒತ್ತಾಯಿಸುತ್ತಿರುವ ಬಗ್ಗೆ ವಿಶೇಷ ಆಯುಕ್ತರಾದ ಉಜ್ವಲ್ ಕುಮಾರ್ (ಚುನಾವಣೆ) ಅವರಿಗೆ ಮನವಿ ಪತ್ರ ಸಲ್ಲಿಸಿದ AIUTUC ನಾಯಕರನ್ನೊಳಗೊಂಡ ನಿಯೋಗ, ಮುಖ್ಯವಾಗಿ ಬಹುಪಾಲು ಘಟಕಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆಯರಿಗೆ ಚುನಾವಣಾ ಅಧಿಕಾರಿಗಳಿಂದ ಬಿಎಲ್‌ಒ (ಬ್ಲಾಕ್ ಲೆವೆಲ್ ಆಫೀಸರ್) ಗಳಾಗಿ ನೇಮಕ ಮಾಡಿ ಅವರಿಂದ ಕೆಲಸ ಮಾಡಿಸಿಕೊಳ್ಳುವಂತೆ ನಿರ್ದೇಶನಗಳು ಬಂದಿರುತ್ತದೆ. ಇಂತಹ ಕೆಲಸಗಳನ್ನು ವಹಿಸಬಾರದೆಂದು ಮನವಿ ಮಾಡಿದೆ.
ಈ ಕುರಿತಂತೆ ಮಾಧ್ಯಮಗಳಿಗೆ ಮಾಹಿತಿ ಹಂಚಿಕೊಂಡಿರುವ AIUTUC ಮುಖಂಡ ಶ್ರೀಕಾಂತ್, ಈಗಾಗಲೇ ಆಶಾಗಳು ತಮ್ಮ ತಮ್ಮ ಮುಖ್ಯ ಜವಾಬ್ದಾರಿಗಳಾದ ತಾಯಿ ಶಿಶು ಆರೈಕೆ, ಕಾಯಿಲೆಗಳ ಹರಡುವಿಕೆಯನ್ನು ತಡೆಗಟ್ಟುವುದು, ದಿನ ನಿತ್ಯದ ಸರ್ವೆಗಳ ಮಧ್ಯದಲ್ಲಿ ಕಾರ್ಯಪ್ರವೃತ್ತರಾಗಿರುತ್ತಾರೆ. ಈಗಾಗಲೇ ಮುಂಗಾರಿನ ಪ್ರಭಾವದಿಂದ ಹಲವಾರು ಕಾಯಿಲೆಗಳಯ ಜನ ಸಮುದಾಯದಲ್ಲಿ ಉಲ್ಬಣಗೊಂಡು ಹರಡುತ್ತಿವೆ. ಇದರ ಜವಾಬ್ದಾರಿಯೂ ಆಶಾಗಳ ಮೇಲೆ ಇರುವುದರಿಂದ ಆಶಾಗಳು ತೀವ್ರ ಒತ್ತಡದಲ್ಲಿರುತ್ತಾರೆ ಎಂಬ ಬಗ್ಗೆ ಬಿಬಿಎಂಪಿ ವಿಶೇಷ ಆಯುಕ್ತರ ಗಮನಸೆಳೆಯಲಾಗಿದೆ ಎಂದು ತಿಳಿಸಿದರು.
ಬಿಬಿಎಂಪಿ ವ್ಯಾಪ್ತಿಯಲ್ಲಿ ಕಾರ್ಯಪ್ರವೃತ್ತರಾಗಿರುವ ಆಶಾಗಳಿಗೆ ಚುನಾವಣಾ ಅಧಿಕಾರಿಗಳು ಬಿಎಲ್‌ಒ ಕೆಲಸಗಳಿಗೆ ಒತ್ತಾಯ ಮಾಡುತ್ತಿರುತ್ತಾರೆ. ಹಾಗೆಯೇ ಪ್ರತಿಕ್ರಯಿಸದ ಆಶಾಗಳಿಗೆ ಸುಮಾರು ಕಡೆ ವಿವಿಧ ರೀತಿಯಲ್ಲಿ ಬೆದರಿಕೆಯನ್ನು ಕೂಡ ಹಾಕಿರುತ್ತಾರೆ. ಎಷ್ಟೋ ಆಶಾಗಳಿಗೆ ಪೋಲೀಸ್ ಠಾಣೆಯಲ್ಲಿ ಎಫ್‌ಐಆರ್ ಹಾಕುವ ಬೆದರಿಕೆ ಕೂಡ ಬಂದಿರುತ್ತದೆ. ಈಗಾಗಲೇ ಆರೋಗ್ಯ ಇಲಾಖೆಯ ನಾಲ್ಕು ಪ್ರಮುಖ ಸರ್ವೆಗಳನ್ನು ನಿರ್ವಹಿಸುವ ಜವಾಬ್ದಾರಿ ಆಶಾ ಕಾರ್ಯಕರ್ತೆಯರ ಮೇಲಿದೆ ಎಂಬ ಸಂಗತಿಯನ್ನು ಅಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದು ತಿಳಿಸಿರುವ ಅವರು, ಆಶಾ ಕಾರ್ಯಕರ್ತೆಯರ ವಿವಿಧ ಬೇಡಿಕೆಗಳನ್ನು ಸರ್ಕಾರದ ಮುಂದಿಡಲಾಗಿದೆ ಎಂದು ವಿವರಿಸಿದ್ದಾರೆ.
ಆಶಾ ಕಾರ್ಯಕರ್ತೆಯರ ಪ್ರಮುಖ ಬೇಡಿಕೆಗಳು:
-
ಬಿಎಲ್‌ಒ ಕೆಲಸದ ಒತ್ತಾಯವನ್ನು ಈ ಕೂಡಲೇ ನಿಲ್ಲಿಸಬೇಕು.
-
ಯಾವ ಆಶಾ ಕಾರ್ಯಕರ್ತೆ ಈ ಚಟುವಟಿಕೆಗೆ ತಯಾರಿರುತ್ತಾರೋ ಅವರನ್ನು ಮಾತ್ರ ಒತ್ತಾಯವಿಲ್ಲದೇ ನೇಮಿಸಬೇಕು.
-
ಬಿಎಲ್‌ಒ ಕೆಲಸಕ್ಕೆ ಒಪ್ಪಿರುವ ಆಶಾಗಳಿಗೆ ಕಾರ್ಯನಿರ್ವಹಿಸಲು ಕಾಲಾವಕಾಶ ಕಲ್ಪಿಸಬೇಕುಈ ಸಮಸ್ಯೆಗಳನ್ನು ಆಲಿಸಿ ಗಂಭೀರವಾಗಿ ಪರಿಶೀಲಿಸಿ ಇದರ ಬಗ್ಗೆ ಶೀಘ್ರ ಕ್ರಮ ತೆಗೆದುಕೊಳ್ಳಬೇಕು.
ಈ ನಡುವೆ ಆಶಾ ಕಾರ್ಯಕರ್ತೆಯರ ಪರವಾಗಿ ಸಲ್ಲಿಸಲಾಗಿರುವ ಮನವಿ ಮನವಿ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆಯನ್ನು ವಿಶೇಷ ಆಯುಕ್ತ ಉಜ್ವಲ್ ಕುಮಾರ್ ಅವರು ಭರವಸೆ ನೀಡಿದ್ದಾರೆ ಎಂದು ಶ್ರೀಕಾಂತ್ ತಿಳಿಸಿದ್ದಾರೆ.