ಹುಬ್ಬಳ್ಳಿ: ವಿಧಾನಸಭಾ ಚುನಾವಣಾ ಅಖಾಡ ಸಜ್ಜಜಾಗಿರುವಂತೆಯೇ ಕಮಲ ಪಾಳಯದಲ್ಲಿ ತಳಮಳ ಉಂಟಾಗಿದೆ. ಈ ಬಾರಿ ಟಿಕೆಟ್ ನೀಡದಿರುವ ಸಂದೇಶ ಹಲವು ಶಾಸಕರಿಗೆ ಹೈಕಮಾಂಡ್ನಿಂದ ರವಾನೆಯಾಗಿದ್ದು ನಾಯಕರ ಬೆಂಬಲಿಗರು ಕಂಗಾಲಾಗಿದ್ದಾರೆ.
ಇದೇ ವೇಳೆ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರಿಗೂ ಟಿಕೆಟ್ ನಿರಾಕರಿಸಲಾಗಿದೆ ಎಂಬ ಸುದ್ದಿ ಹುಬ್ಬಳ್ಳಿಯಲ್ಲಿನ ಬಿಜೆಪಿ ಕಾರ್ಯಕರ್ತರಲ್ಲಿ ಅಸಮಾಧಾನ ತಂದಿದೆ. ಈ ಬಗ್ಗೆ ಜಗದೀಶ್ ಶೆಟ್ಟರ್ ಕೂಡಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ
ಜಗದೀಶ್ ಶೆಟ್ಟರ್, ನಾನು ಪಾರ್ಟಿ ಕಟ್ಟಿ ಬೆಳೆಸಿದ್ದೇನೆ. ನೂರಾರು ಜನರಿಗೆ ಟಿಕೆಟ್ ಕೊಟ್ಟಿದ್ದೇನೆ. ಆರು ಸಾರಿ ಸ್ಪರ್ಧಿಸಿ ಗೆದ್ದು ಬಂದಿದ್ದೇನೆ. ಹೀಗಿರುವಾಗ ನನಗೆ ಟಿಕೆಟ್ ನಿರಾಕರಿಸಲು ಕಾರಣ ಏನು ಎಂದು ಪ್ರಶ್ನಿಸಿದ್ದಾರೆ,
ಟಿಕೆಟ್ ನೀಡಲಾಗುವುದಿಲ್ಲ. ಬೇರೆಯವರಿಗೆ ಅವಕಾಶ ಕೊಡಿ ಎಂದು ಹೈಕಮಾಂಡ್ ಹೇಳಿದೆ. ಆಗ, ನನ್ನ ಮೈನಸ್ ಪಾಯಿಂಟ್ ಏನು? ಅಂತಾ ಕೇಳಿದೆ. ಸರ್ವೇಯಲ್ಲಿ ಪಾಜಿಟಿವ್ ಬಂದಿದೆ. ನನ್ನ ರಾಜಕೀಯ ಜೀವನದಲ್ಲಿ ಕಪ್ಪು ಚುಕ್ಕೆ ಇಲ್ಲಪಕ್ಷ ನಿಷ್ಠನಾಗಿ ಲಾಯಲ್ ಆಗಿ ಕೆಲಸ ಮಾಡಿದೆ. ಲಾಯಲ್ ಆಗಿ ಕೆಲಸ ಮಾಡಿದವರಿಗೆ ಗೌರವ ಇಲ್ಲವೇನೋ ಅನ್ನೊ ಪ್ರಶ್ನೆ ಕೇಳಿದೆ ಎಂದ ಶೆಟ್ಟರ್, ಅವರ ಮಾತು ಕೇಳಿ ಮನಸ್ಸಿಗೆ ಬೇಜಾರಾಯ್ತು. ಇಷ್ಟು ವರ್ಷ ಪಕ್ಷ ಕಟ್ಟಿದ್ದಕ್ಕೆ ಬೆಲೆಯೇ ಇಲ್ವಾ ಅನಿಸ್ತು ಎಂದು ಬೇಸರ ವ್ಯಕ್ತಪಡಿಸಿರು.
ಟಿಕೆಟ್ ಕೊಡಬಾರದು ಅನ್ನೋ ವಿಚಾರ ಇದ್ರೆ ಎರಡು ಮೂರು ತಿಂಗಳ ಹಿಂದೆ ಹೇಳ್ಬೇಕಿತ್ತು. ನಾಮಿನೇಷನ್ಗೆ ಎರಡು ದಿನ ಇರುವಾಗ ಹೇಳಿದ್ದು ಬಹಳ ಬೇಸರವಾಗಿದೆ. ಹೀಗಾಗಿ ಸ್ಪರ್ಧೆ ಮಾಡೇ ಮಾಡುತ್ತೇನೆ ಅಂತಾ ಹೇಳಿದ್ದೇನೆ. ವಿಚಾರ ಮಾಡಿ ತಿಳಿಸುವುದಾಗಿ ವರಿಷ್ಠರು ಹೇಳಿದ್ದಾರೆ. ಮತ್ತೆ ಚರ್ಚೆ ಮಾಡಿ ಟಿಕೆಟ್ ಕೊಡ್ತಾರೆ ಅನ್ನೋ ವಿಶ್ವಾಸವಿದೆ ಎಂದು ಶೆಟ್ಟರ್ ಹೇಳಿದ್ದಾರೆ.
ವರಿಷ್ಠರ ತೀರ್ಮಾನ ನೋಡಿ ಮುಂದಿನ ನಿರ್ಧಾರ ತಿಳಿಸುತ್ತೇನೆ ಎಂದಿರುವ ಜಗದೀಶ್ ಶೆಟ್ಟರ್, ನನ್ನ ಮೈನಸ್ ಪಾಯಿಂಟ್ ಏನು ತಿಳಿಸಲಿ. ಜನರ ಆಶಿರ್ವಾದವಿದೆ, ನಾನು ಸ್ಪರ್ಧಿಸ್ತೇನೆ ಎಂದರು. ನಿನ್ನೆಮೊನ್ನೆ ಕನ್ಫರ್ಮ್ ಆಗಿದೆ ಅಂತಾ ಹೈಕಮಾಂಡ್ ಕಡೆಯಿಂದ ಸುದ್ದಿ ಬಂತು. ಇವತ್ತು ಟಿಕೆಟ್ ಡಿನೈ ಮಾಡಿದ್ದಾರೆ. ಈಗಾಗಲೇ ಕ್ಯಾಂಪೇನ್ ಶುರು ಮಾಡಿದ್ದೇನೆ. ಜನ ಪ್ರೀತಿ, ಗೌರವ ತೋರಿಸ್ತಿದ್ದಾರೆ ಎಂದವರು ಹೇಳಿದರು.
ನಾನು ಸ್ಪರ್ಧೆ ಮಾಡುತ್ತೇನೆ, ಅತಿ ಹೆಚ್ಚು ಮತಗಳ ಅಂತರದಿಂದ ಗೆದ್ದು ಬರುತ್ತೇನೆ. ಶೆಟ್ಟರ್ ರಾಜಕಾರಣದಿಂದ ಹಿಂದೆ ಸರಿಯುವ ಮಾತೇ ಇಲ್ಲ. ನಾನೂ ಇನ್ನೂ ಹತ್ತು ವರ್ಷಗಳ ಕಾಲ ಸಕ್ರೀಯ ರಾಜಕಾರಣದಲ್ಲಿ ಇರುತ್ತೇನೆ ಎಂದು ಜಗದೀಶ್ ಶೆಟ್ಟರ್ ತಿಳಿಸಿದರು.
ತಾವು ರಾಜೀನಾಮೆ ನೀಡಿಲ್ಲ ಎಂದೂ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಸ್ಪಷ್ಟನೆ ನೀಡಿದ್ದಾರೆ. ಬಿಜೆಪಿಗೆ ರಾಜಿನಾಮೆ ಕೊಟ್ಟಿರುವ ಪತ್ರ ಹರಿದಾಡುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜಗದೀಶ್ ಶೆಟ್ಟರ್, ಅದು ಫೇಕ್ ಪತ್ರ. ನಾನು ರಾಜಿನಾಮೆ ಕೊಟ್ಟಿಲ್ಲ, ಅದು ನಾನು ಬರೆದ ಪತ್ರವಲ್ಲ. ಪತ್ರ ಬರೆಯುವುದಿದ್ದರೆ ಅದು ಇಂಗ್ಲೀಷ್ನಲ್ಲಿ ಇರುತ್ತಿತ್ತು. ಪ್ರೈಮಾಫಸಿ ಪ್ರಕಾರ ಅದು ಫೇಕ್ ಪತ್ರ ಅನ್ನೋದು ಕಾಣಿಸುತ್ತೆ. ಯಾರೋ ಕುತಂತ್ರದಿಂದ ಹೀಗೆ ಮಾಡಿದ್ದಾರೆ ಎಂದವರು ಸ್ಪಷ್ಟಪಡಿಸಿದರು.
ನನಗೆ ಈ ಕ್ಷಣದವರೆಗೂ ಟಿಕೆಟ್ ಸಿಗುವ ನಿರೀಕ್ಷೆಯಿದೆ ಎಂದ ಶೆಟ್ಟರ್, ನಾಳೆಯವರೆಗೆ ಕಾಯ್ದು ನೋಡೋಣ ಎಂದರು.