ಬೆಂಗಳೂರು: ನವೆಂಬರ್ 26ರಂದು ಬಿಜೆಪಿಯಿಂದ ರಾಷ್ಟ್ರಾದ್ಯಂತ ಸಂವಿಧಾನ ಗೌರವ ಅಭಿಯಾನವನ್ನು ಹಮ್ಮಿಕೊಂಡಿದೆ. ರಾಜ್ಯದಲ್ಲೂ ಎಸ್‍ಸಿ ಮೋರ್ಚಾ ಮಾತ್ರವಲ್ಲದೆ ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರು ಸೇರಿ ಅಭಿಯಾನ ಮಾಡಲಿದ್ದೇವೆ ಎಂದು ಬಿಜೆಪಿ ರಾಜ್ಯ ವಕ್ತಾರರು ಮತ್ತು ಎಸ್.ಸಿ. ಮೋರ್ಚಾ ರಾಜ್ಯ ಅಧ್ಯಕ್ಷರಾದ ಛಲವಾದಿ ನಾರಾಯಣಸ್ವಾಮಿ ಅವರು ತಿಳಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇದು ಡಿ.6ರವರೆಗೆ ಅಂದರೆ, ಅಂಬೇಡ್ಕರ್ ಪರಿನಿರ್ವಾಣ ದಿನದವರೆಗೆ ನಡೆಯಲಿದೆ. 26ರಂದು ನಮ್ಮ ಸಂಘಟನಾತ್ಮಕ 37 ಜಿಲ್ಲೆಗಳಲ್ಲಿ ಪಾದಯಾತ್ರೆ ಮೂಲಕ ಸಂವಿಧಾನದ ಕರಡು ಮತ್ತು ಡಾ. ಅಂಬೇಡ್ಕರ್ ಅವರ ಭಾವಚಿತ್ರದೊಂದಿಗೆ ನಮ್ಮ ಕಾರ್ಯಕರ್ತರು ತೆರಳಲಿದ್ದಾರೆ. ಅಂಬೇಡ್ಕರರ ಪುತ್ಥಳಿಗಳಿಗೆ ಮಾಲಾರ್ಪಣೆ ಮಾಡಲಾಗುವುದು ಎಂದರು. ಇದೇವೇಳೆ ಸಭೆಗಳನ್ನೂ ನಡೆಸಿ ಸಂವಿಧಾನಕ್ಕೆ ಗೌರವ ಸಮರ್ಪಿಸಲಾಗುವುದು ಎಂದು ವಿವರಿಸಿದರು. ಸಂವಿಧಾನದ ಪೀಠಿಕೆಯ ಕರಡನ್ನು ಓದಿ ಕಾರ್ಯಕರ್ತರು ಪ್ರತಿಜ್ಞಾವಿಧಿ ಸ್ವೀಕರಿಸಲಿದ್ದಾರೆ ಎಂದರು.
ರಾಜ್ಯದ 310 ಮಂಡಲಗಳಲ್ಲಿ ಡಿಸೆಂಬರ್ 6ರವರೆಗೆ ನಿರಂತರ ಕಾರ್ಯಕ್ರಮಗಳು ನಡೆಯಲಿವೆ. ಮಂಡಲಗಳಲ್ಲಿ ಪರಿಶಿಷ್ಟ ಜಾತಿ, ವರ್ಗದ ಎಂಜಿನಿಯರ್‍ಗಳು, ವೈದ್ಯರು, ಶಿಕ್ಷಕರು, ಕಲಾವಿದರು ಸೇರಿ ಸಾಧನೆ ಮಾಡಿ ಜನಮನ ಗೆದ್ದ ಅನೇಕರನ್ನು ಪಕ್ಷದಿಂದ ಗೌರವಿಸಲಾಗುವುದು. ಅವರನ್ನು ಮನೆಗಳಲ್ಲೇ ಗೌರವಿಸಲಾಗುತ್ತದೆ ಎಂದು ತಿಳಿಸಿದರು.
5 ಕೇಂದ್ರಗಳಲ್ಲಿ ದೊಡ್ಡ ಸಭೆಗಳನ್ನೂ 27ರಿಂದ ಡಿ.6ರವರೆಗೆ ನಡೆಯಲಿವೆ. ಈ ಸಭೆಗಳು ಹುಬ್ಬಳ್ಳಿ- ಧಾರವಾಡ, ಕಲಬುರ್ಗಿ, ಮೈಸೂರು, ಶಿವಮೊಗ್ಗದಲ್ಲಿ ನಡೆಯಲಿವೆ. ನಂತರ 5ನೇ ಸಭೆಯನ್ನು ಬೆಂಗಳೂರಿನಲ್ಲಿ ಡಿಸೆಂಬರ್ 6ರಂದು ಸಭೆ ಏರ್ಪಡಿಸಲಾಗುವುದು. ಅವತ್ತು ಸಂವಿಧಾನವನ್ನು ಗೌರವಿಸುವುದು ಮತ್ತು ಡಾ. ಅಂಬೇಡ್ಕರರ ಪರಿನಿರ್ವಾಣ ದಿನವನ್ನು ಏರ್ಪಡಿಸಲಾಗುತ್ತದೆ ಎಂದರು.
ಬೆಂಗಳೂರಿನಲ್ಲಿ ಡಿ.6ರ ಸಭೆಯಲ್ಲಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ದಲಿತ ಸಮುದಾಯದ ಸಚಿವರು, ಶಾಸಕರು, ಪಕ್ಷದ ಮುಖಂಡರು ಭಾಗವಹಿಸಲಿದ್ದಾರೆ. ಡಾ. ಅಂಬೇಡ್ಕರ್ ಹಾಗೂ ಸಂವಿಧಾನಕ್ಕೆ ಗೌರವ ಕೊಡಲು 12 ದಿನಗಳ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.
ಸುಮಾರು 60 ವರ್ಷ ದೇಶವನ್ನಾಳಿದ ಕಾಂಗ್ರೆಸ್ ಪಕ್ಷದಿಂದ ದಲಿತ ವಿರೋಧಿತನ ಆಗಿಂದಾಗ್ಗೆ ಪ್ರಕಟಗೊಳ್ಳುತ್ತದೆ. ದಲಿತರು ಹೊಟ್ಟೆಪಾಡಿಗಾಗಿ ಬಿಜೆಪಿಗೆ ಹೋಗುತ್ತಾರೆ ಎಂದು ಕಾಂಗ್ರೆಸ್‍ನ ಸಿದ್ದರಾಮಯ್ಯ ಹೇಳಿದ್ದರು. ತಳಸಮುದಾಯ ಹೊಟ್ಟೆಪಾಡಿಗಾಗಿ ಸಮಸ್ಯೆ ಅನುಭವಿಸುವಂತೆ ಮಾಡಿದ್ದೇ ಕಾಂಗ್ರೆಸ್ ಎಂದರು. ಕಾಂಗ್ರೆಸ್ಸಿಗರು ದಲಿತರನ್ನು ಮತಬ್ಯಾಂಕ್‍ಗೆ ಸೀಮಿತಗೊಳಿಸಿದ್ದರು. ಅವರೆಲ್ಲರೂ ಬಿಜೆಪಿಗೆ ಬಂದ ಬಳಿಕ ಕಾಂಗ್ರೆಸ್ ಸೋಲುತ್ತಲೇ ಸಾಗಿದೆ ಎಂದು ತಿಳಿಸಿದರು.
ಅಂಬೇಡ್ಕರ್ ಅವರು ಬರೆದ ಸಂವಿಧಾನದಿಂದಲೇ ಚಹಾ ಮಾರಾಟ ಮಾಡುತ್ತಿದ್ದ ಮೋದಿಜಿ ಅವರು ಪ್ರಧಾನಿಯಾಗಿದ್ದಾರೆ. ಮೀಸಲಾತಿ ವಿಷಯಕ್ಕೆ ನಾನಿಲ್ಲ ಎಂದ ಮೋದಿಯವರು 10 ವರ್ಷಕ್ಕೆ ಮೀಸಲಾತಿ ಮುಂದುವರಿಸಿದ್ದಾರೆ. ಅಂಬೇಡ್ಕರರ ಸಂವಿಧಾನಕ್ಕೆ ತಲೆಬಾಗಿ ನಮಸ್ಕರಿಸಿ, ಪ್ರಜಾಪ್ರಭುತ್ವದ ದೇಗುಲದ ಮೆಟ್ಟಿಲಿಗೆ ನಮಸ್ಕರಿಸಿ ನರೇಂದ್ರ ಮೋದಿ ಅವರು ಅಧಿಕಾರ ಸ್ವೀಕರಿಸಿದ್ದರು ಎಂದು ವಿವರಿಸಿದರು.
ಡಾ.ಅಂಬೇಡ್ಕರರ ಜನ್ಮಸ್ಥಳ, ವ್ಯಾಸಂಗ ಮಾಡಿದ ಸ್ಥಳ ಸೇರಿ 5 ಪ್ರಮುಖ ಕ್ಷೇತ್ರಗಳನ್ನು ಬಿಜೆಪಿಯ ಕೇಂದ್ರ ಸರಕಾರ ಅಭಿವೃದ್ಧಿ ಮಾಡಿದೆ. ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಕೊಟ್ಟಿದೆ ಎಂದರಲ್ಲದೆ, ಜಮ್ಮ ಕಾಶ್ಮೀರಕ್ಕೆ ವಿಶೇóಷ ಸ್ಥಾನಮಾನ ಕೊಡುವ 370ನೇ ವಿಧಿಯನ್ನು ಅಂಬೇಡ್ಕರ್ ಅವರು ವಿರೋಧಿಸಿದ್ದರು. 370 ವಿಧಿ ಒಡಲಿನ ಬೆಂಕಿ ಎಂದೂ ತಿಳಿಸಿದ್ದರು. ಆ ವಿಧಿಯನ್ನು ನಾವು ಈಚೆಗಷ್ಟೇ ರದ್ದುಪಡಿಸಿದ್ದೇವೆ ಎಂದು ತಿಳಿಸಿದರು.
ಕಾಂಗ್ರೆಸ್ ಪಕ್ಷವು ದಲಿತರನ್ನು ದಾರಿ ತಪ್ಪಿಸಿ ಮತ ಬ್ಯಾಂಕಾಗಿ ಮಾಡಿಕೊಂಡಿತ್ತು. ಆದರೆ, ಬಿಜೆಪಿ ಸರಕಾರಗಳು ಅವರ ಅಭಿವೃದ್ಧಿಗಾಗಿ ಸದಾ ಪ್ರಯತ್ನ ಮಾಡುತ್ತಿದೆ ಎಂದು ತಿಳಿಸಿದರು. ಕಾಂಗ್ರೆಸ್ ಪಕ್ಷದ ಗೋಸುಂಬೆತನಕ್ಕೆ ಜನರು ಪಾಠ ಕಲಿಸಿದ್ದಾರೆ ಎಂದರು. ದಲಿತರಿಗೆ ಬಿಜೆಪಿ ಬಾಗಿಲು ತೆರೆದಿದೆ. ಅವರ ಶ್ರೇಯೋಭಿವೃದ್ಧಿಗೆ ಬಿಜೆಪಿ ಸದಾ ಶ್ರಮಿಸುತ್ತದೆ ಎಂದರು.
ಎಸ್.ಸಿ. ಮೋರ್ಚಾ ರಾಜ್ಯ ಉಪಾಧ್ಯಕ್ಷರು ಮತ್ತು ಮಾಜಿ ಶಾಸಕರಾದ ಜಿ.ಎನ್. ನಂಜುಂಡಸ್ವಾಮಿ, ಎಸ್.ಸಿ. ಮೋರ್ಚಾ ರಾಜ್ಯ ಉಪಾಧ್ಯಕ್ಷರಾದ ಎಮ್. ವೆಂಕಟೇಶ್, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಜಗದೀಶ್ ಅವರು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.