ಬೆಂಗಳೂರು: ರಾಜ್ಯದ ನೂತನ ಬಜೆಟ್‍ನಲ್ಲಿ ವಕೀಲರಿಗೆ ಮತ್ತು ನ್ಯಾಯಾಂಗ ಇಲಾಖೆಗೆ ಹೆಚ್ಚು ಅನುದಾನ ನೀಡುವಂತೆ ಬಿಜೆಪಿ ಕಾನೂನು ಪ್ರಕೋಷ್ಠವು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಕಾನೂನು ಮತ್ತು ಸಂಸದೀಯ ವ್ಯವಹಾರ ಇಲಾಖೆ ಸಚಿವರೂ ಆದ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿದೆ.
ರಾಜ್ಯ ಬಿಜೆಪಿ ಕಾನೂನು ಪ್ರಕೋಷ್ಠದ ಸಂಚಾಲಕ ಎಸ್.ಎಸ್. ಮಿಟ್ಟಲಕೋಡ್, ಪ್ರಕೋಷ್ಠದ ಸಹ ಸಂಚಾಲಕ ಯೋಗೇಂದ್ರ ಹೊಡಾಘಟ್ಟ, ಮಾಜಿ ಸಂಚಾಲಕ ವಿವೇಕ್‍ರೆಡ್ಡಿ ಮತ್ತು ಆರ್. ರಾಜಣ್ಣ, ಪದಾಧಿಕಾರಿಗಳು ಹಾಗೂ ಸದಸ್ಯರ ನಿಯೋಗವು ಈ ಕುರಿತ ಮನವಿಯನ್ನು ಸಲ್ಲಿಸಿತು.
ರಾಜ್ಯದಲ್ಲಿ ಒಟ್ಟು ಒಂದು ಲಕ್ಷದ ಹನ್ನೊಂದು ಸಾವಿರಕ್ಜೂ ಹೆಚ್ಚು ವಕೀಲರು ಇದ್ದು, ಎರಡು ನೂರು ವಕೀಲರ ಸಂಘಗಳಿವೆ. ಸದರಿ ವಕೀಲರ ಹಾಗೂ ವಕೀಲರ ಸಂಘಗಳ ಮೂಲ ಕರ್ನಾಟಕ ರಾಜ್ಯ ವಕೀಲರ ಪರಿಷತ್ ಬೆಂಗಳೂರು, ಸದರಿ ರಾಜ್ಯ ವಕೀಲರ ಪರಿಷತ್ತಿಗೆ ಹಳೆಯ ಚುನಾವಣಾ ಕಟ್ಟಡವನ್ನು ತಾತ್ಕಾಲಿಕವಾಗಿ ನೀಡಿರುತ್ತಾರೆ. ಅದರ ಸಂಪೂರ್ಣ ಸ್ವಾಧೀನತೆಯನ್ನು ರಾಜ್ಯ ವಕೀಲರ ಪರಿಷತ್‍ಗೆ ನೀಡಬೇಕು. ಸದರಿ ಸ್ಥಳದಲ್ಲಿ ಕಾನೂನು ಅಕಾಡೆಮಿ ಮುಖಾಂತರ ಹೊಸ ಹೊಸ ವಿಚಾರ ಸೆಮಿನಾರ್ ಹಾಗೂ ಹೊಸ ವಕೀಲರಿಗೆ ಮಾರ್ಗದರ್ಶನ ಮಾಡಲು ಅನುಕೂಲವಾಗುತ್ತದೆ. ಅದಕ್ಕಾಗಿ ಸದರಿ ಕಟ್ಟಡವನ್ನು ರಾಜ್ಯ ವಕೀಲರ ಪರಿಷತ್ತಿಗೆ ಮಂಜೂರು ಮಾಡಿ ಹಸ್ತಾಂತರ ಮಾಡಬೇಕಾಗಿ ವಿನಂತಿಸಲಾಯಿತು.
ರಾಜ್ಯದ ವಕೀಲರ ಸಂಘಗಳಲ್ಲಿ ಹಾಗೂ ನ್ಯಾಯಾಲಯದ ಆವರಣದಲ್ಲಿ ಮೂಲಭೂತ ಸೌಲಭ್ಯಗಳು ಇಲ್ಲ. ಅವುಗಳಿಗೆ ಅನುದಾನ ಮಂಜೂರು ಮಾಡಬೇಕು. ರಾಜ್ಯದ ವಕೀಲರ ಸಂಘಗಳಿಗೆ ಪ್ರತಿ ವರ್ಷ ತಾಲ್ಲೂಕು ವಕೀಲ ಸಂಘಕ್ಕೆ 40,000, ಜಿಲ್ಲಾ ವಕೀಲ ಸಂಘಕ್ಕೆ 75,000 ರೂ. ಅನುದಾನವಿದ್ದು, ಸದರಿ ಅನುದಾನವನ್ನು ಜಿಲ್ಲಾ ನ್ಯಾಯಧೀಶರ ಮುಖಾಂತರ ವಿತರಣೆ ಬದಲಾಗಿ ರಾಜ್ಯ ವಕೀಲರ ಪರಿಷತ್ತಿನಿಂದ ವಿತರಣೆ ಮಾಡಲು ಮಾರ್ಗಸೂಚಿ ತಯಾರಿಸಬೇಕೆಂದು ಮನವಿ ಮಾಡಲಾಯಿತು.
ರಾಜ್ಯದಲ್ಲಿ ಕೋವಿಡ್ ಸಂದರ್ಭದಲ್ಲಿ ವಕೀಲರ ಸಾವಿನ ಸಂಖ್ಯೆ ಹೆಚ್ಚಿರುತ್ತದೆ. ರಾಜ್ಯದ ವಕೀಲರ ಪರಿಷತ್‍ನಿಂದ ಸುಮಾರು 25 ಕೋಟಿ ರೂಪಾಯಿಗಳನ್ನು ಕೋವಿಡ್ ಸೋಂಕಿತರಿಗೆ ಹಾಗೂ ಮೃತ ವಕೀಲರ ಕುಟುಂಬಗಳಿಗೆ ಹಣ ಸಂದಾಯವಾಗಿರುತ್ತದೆ. ಆದ್ದರಿಂದ ಪ್ರತಿ ವರ್ಷ ಐದು ಕೋಟಿ ರೂಪಾಯಿಗಳನ್ನು ಬಜೆಟ್‍ನಲ್ಲಿ ಮಂಜೂರು ಮಾಡಲು ವಿನಂತಿ ಮಾಡಲಾಯಿತು. ನ್ಯಾಯವಾದಿಗಳಿಗೆ ಹಾಗೂ ಅವರ ಕುಟುಂಬಕ್ಕೆ ಆರೋಗ್ಯ ವಿಮೆ ಕಲ್ಪಿಸಲು ಬಜೆಟ್‍ನಲ್ಲಿ ಅನುದಾನ ಘೋಷಿಸಬೇಕು. ರಾಜ್ಯದಲ್ಲಿ ಸಹಾಯಕ ಸರ್ಕಾರಿ ಅಭಿಯೋಜಕರು ಹಾಗೂ ಸ್ಪೆಷಲ್ ಪಿ.ಪಿ., ಎಜಿಪಿ, ಡಿಜಿಪಿ, ಹಾಗೂ ಜಿಎ, ಜಿಪಿ ಖಾಲಿ ಇದ್ದ ಹುದ್ದೆಗಳನ್ನು ಆದಷ್ಟು ಶೀಘ್ರ ಭರ್ತಿ ಮಾಡಬೇಕು ಎಂದು ಈ ಸಂದರ್ಭದಲ್ಲಿ ಕೋರಲಾಯಿತು.
ರಾಜ್ಯದಲ್ಲಿ ಖಾಲಿ ಇರುವ ನ್ಯಾಯಾಧೀಶರು ಹಾಗೂ ನ್ಯಾಯಾಂಗ ಇಲಾಖಾ ಸಿಬ್ಬಂದಿ ಸಹಾಯಕ ಸರಕಾರಿ ಅಭಿಯೋಜಕರು ಹಾಗೂ ರಾಜ್ಯ ಹೆಚ್ಚುವರಿ ಗ್ರಾಹಕರ ವೇದಿಕೆ ಮತ್ತು ಜಿಲ್ಲೆ ಗ್ರಾಹಕರ ನ್ಯಾಯಾಧೀಶರ ಸಿಬ್ಬಂದಿಯ ಹಾಗೂ ಕರ್ನಾಟಕ ಅಪ್ಲೇಟ್ ಟ್ರಿಬಿನಲ್ ನ್ಯಾಯಾಧೀಶರು ಸಿಬ್ಬಂದಿಗಳನ್ನು ಹೆಚ್ಚಿಸಬೇಕು ಮತ್ತು ಅವುಗಳಿಗೆ ಅನುದಾನವನ್ನು ಬಜೆಟಿನಲ್ಲಿ ಘೋಷಣೆ ಮಾಡಬೇಕು. ನ್ಯಾಯಾಧೀಶರಿಗೆ ಕೊಡುವ ಗಣಕಯಂತ್ರ, ಜೆರಾಕ್ಸ್ ಮಿಷಿನ್, ಇ-ಲೈಬ್ರರಿ ಮತ್ತು ಇತರೆ ಸೌಲಭ್ಯಗಳನ್ನು, ನ್ಯಾಯವಾದಿಗಳಿಗೂ ತಲುಪಿಸುವುದರಿಂದ ಸಾರ್ವಜನಿಕರಿಗೆ ಶೀಘ್ರ ನ್ಯಾಯ ದೊರಕುತ್ತದೆ ಎಂದು ವಿವರಿಸಲಾಯಿತು.
ರಾಜ್ಯದ ಪ್ರತಿಯೊಂದು ನ್ಯಾಯಲಯದ ಆವರಣದಲ್ಲಿ ವಕೀಲರ ಕಛೇರಿ ತೆರೆಯಲು ಸಂಕೀರ್ಣ ಕಟ್ಟಡಕ್ಕೆ ಅನುಧಾನವನ್ನು ಬಜೆಟ್‍ನಲ್ಲಿ ಅನುದಾನವನ್ನು ಬಿಡುಗಡೆ ಮಾಡಬೇಕು ಮತ್ತು ಎಲ್ಲಾ ವಕೀಲರ ಸಂಘಕ್ಕೆ ಇ-ಲೈಬ್ರರಿ ಸೌಲಭ್ಯ ಕಲ್ಪಿಸಬೇಕು. ರಾಜ್ಯದಲ್ಲಿಯ ಪ್ರತಿಯೊಂದು ನ್ಯಾಯಲಯದ ಆವರಣದಲ್ಲಿ ಸಿ.ಸಿ. ಕ್ಯಾಮರ ಹಾಗೂ ಕ್ಯಾಂಟೀನ್ ಸೌಲಭ್ಯವನ್ನು ಒದಗಿಸಬೇಕು. ನಿರುಪಯುಕ್ತ ಕಾನೂನುಗಳನ್ನು ತೆಗೆದು, ಆಧುನಿಕ ತಂತ್ರಜ್ಞಾನಕ್ಕೆ ತಕ್ಕಂತೆ ಕಾಯ್ದೆಗಳನ್ನು ರೂಪಿಸಬೇಕು. ಯುವ ನ್ಯಾಯಾವಾದಿಗಳಿಗೆ ಕೊಡುವ ಗೌರವಧನ ಸಹಾಯಧನವನ್ನು ಬಜೆಟಿನಲ್ಲಿ ಹೆಚ್ಚಿಸಬೇಕು ಮತ್ತು ಅನುದಾನವನ್ನು ಬಿಡುಗಡೆ ಮಾಡಬೇಕು ಎಂದು ಪ್ರಕೋಷ್ಠದ ಪದಾಧಿಕಾರಿಗಳು ವಿನಂತಿಸಿದರು.