ಬೆಂಗಳೂರು: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರ ಕುರಿತಂತೆ ವರಿಷ್ಠ ಅರುಣ್ ಸಿಂಗ್ ಜೊತೆ ನಡೆದಿರುವುದೇ ಬೇರೆ.. ಬಹಿರಂಗವಾಗಿರುವ ಸಂಗತಿಗಳೇ ಬೇರೆ..
ಬಿಜೆಪಿಯೊಳಗೆ ಹಾಗೂ ಅರುಣ್ ಸಿಂಗ್ ಮುಂದಿರುವ ಬೇಗುದಿಯ ಕಹಿ ಸತ್ಯ ಇದೀಗ ಅನಾವರಣಗೊಂಡಿದೆ. ಶಾಸಕರು ಹಾಗೂ ಮುಖಂಡರು ಸೇರಿ ಸುಮಾರು 80 ಮಂದಿ ಬಿಎಸ್‌ವೈ ಬದಲಾವಣೆಯೇ ಸೂಕ್ತ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಈ ಸಂಗತಿಯನ್ನು ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಕೂಡಾ ಇಂದು ಸುದ್ದಿಗೋಷ್ಠಿಯಲ್ಲಿ ಹೇಳಿಕೊಂಡಿದ್ದಾರೆ.
ಮುಖ್ಯಮಂತ್ರಿ ಯಡಿಯೂರಪ್ಪ ಅವರ ಕಾರ್ಯವೈಖರಿ ಹಾಗೂ ಅವರ ಪುತ್ರ ವಿಜಯೇಂದ್ರರ ಹಸ್ತಕ್ಷೇಪದ ಬಗ್ಗೆ ಬಹುತೇಕ ಶಾಸಕರು ಅರುಣ್ ಸಿಂಗ್ ಬಳಿ ಅಸಮಾಧಾನ ಹೊರಹಾಕಿದ್ದಾರೆ. ಆದರೆ ಹೊರಗೆ ಬಂದು ಮಾಧ್ಯಮಗಳಿಗೆ ಬೇರೆಯೇ ರೀತಿಯ ಹೇಳಿಕೆಗಳನ್ನು ನೀಡಿದ್ದಾರೆ ಎನ್ನಲಾಗಿದೆ. ಅರುಣ್ ಸಿಂಗ್ ಅವರ ಬಳಿ ಒಬ್ಬಬ್ಬರಾಗಿ ತೆರಳಿ ಮಾತುಕತೆ ನಡೆಸಿದ್ದರಿಂದಾಗಿ ಕಹಿ ಸತ್ಯ ಬಯಲಾಗಿಲ್ಲ. ಪಕ್ಷದ ಹಿತದೃಷ್ಟಿಯಿಂದ ಗೌಪ್ಯತೆ ಕಾಪಾಡಿಕೊಂಡಿರುವುದಾಗಿ ಹಲವರು ಹೇಳಿಕೊಂಡಿದ್ದಾರೆ.
ಈ ವಿಚಾರವನ್ನು ಎಂಎಲ್‌ಸಿ ವಿಶ್ವನಾಥ್ ಕೂಡಾ ಇಂದು ಸುದ್ದಿಗೋಷ್ಠಿಯಲ್ಲಿ ಹೇಳಿಕೊಂಡಿದ್ದಾರೆ.
ಹಾಗಾದರೆ ರಾಜ್ಯ ಬಿಜೆಪಿಯಲ್ಲಿ ಭಿನ್ನಮತ ಇಲ್ಲ ಎಂದು ಅರುಣ್ ಸಿಂಗ್ ಹೇಳಿಕೊಂಡಿರುವುದು, ನಾಯಕತ್ವ ಬದಲಾವಣೆಯ ಪ್ರಶ್ನೆಯೇ ಇಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಪ್ರತಿಕ್ರಿಯೆ ನೀಡಿರುವುದರಲ್ಲಿ ಸತ್ಯಾಂಶ ಇಲ್ಲವೇ ಎಂಬ ಗೊಂದಲ ಬಿಜೆಪಿಯ ಕಾರ್ಯಕರ್ತರಲ್ಲಿದೆ.
ಈ ನಡುವೆ ರಾಜ್ಯದ ಬೆಳವಣಿಗೆ ಬಗ್ಗೆ ದೆಹಲಿ ವರಿಷ್ಠರು ಗಮನಿಸುತ್ತಲೇ ಇದ್ದಾರೆ. ಅರುಣ್ ಸಿಂಗ್ ನೀಡುವ ವರದಿಯ ನಂತರ ಸತ್ಯಾಸತ್ಯತೆಯನ್ನು ಪರಿಶೀಲಿಸಿ ಸೂಕ್ತ ತೀರ್ಮಾನ ಕೈಗೊಳ್ಳುವ ಸಾಧ್ಯತೆಗಳಿವೆ ಎಂದು ಬಿಜೆಪಿ ಅಧ್ಯಕ್ಷರ ಸಮೀಪವರ್ತಿಗಳು ತಿಳಿಸಿದ್ದಾರೆ.