ಬಿಎಸ್‌ವೈ ಸರ್ಕಾರದ ವಿರುದ್ದ 20 ಸಾವಿರ ಕೋಟಿ ರೂ ಹಗರಣದ ಬಾಂಬ್.. ಈ ಆರೋಪ ಮಾಡಿರುವುದು ಆಡಳಿತ ಪಕ್ಷದ್ದೇ ಶಾಸಕ ಹೆಚ್.ವಿಶ್ವನಾಥ್.. ಯಡಿಯೂರಪ್ಪ ಕುಟುಂಬದ ಹಗರಣಗಳ ಆರೋಪ ಕುರಿತು ದಾಖಲೆ ಬಿಡುಗಡೆ
ಬೆಂಗಳೂರು: ಯಡಿಯೂರಪ್ಪ ನಾಯಕತ್ವ ಬದಲಾವಣೆ ಕುರಿತಂತೆ ಬಿಜೆಪಿಯಲ್ಲಿ ಭಾರೀ ಬೆಳವಣಿಗೆ ನಡೆಯುತ್ತಿದೆ. ಶಾನಕರ ಅಸಮಾಧಾನ ಹಾಗೂ ನೋವನ್ನು ತಣಿಸಲು ವರಿಷ್ಠ ಅರುಣ್ ಸಿಂಗ್ ಅವರು ಮುಲಾಂ ಹಚ್ಚುತ್ತಿರುವಂತೆಯೇ ಇನ್ನೊಂದೆಡೆ ಅತೃಪ್ತ ಶಾಸಕ ಹೆಚ್.ವಿಶ್ವನಾಥ್ ಮತ್ತೊಂದು ಬಾಂಬ್ ಸಿಡಿಸಿದ್ದಾರೆ.
ಬೆಂಗಳೂರಿನಲ್ಲಿಂದು ಸುದ್ದಿಗೋಷ್ಠಿ ನಡೆಸಿದ ಅವರು, ನೀರಾವರಿ ಯೋಜನೆಗಳಲ್ಲಿ ಭಾರೀ ಹಗರಣ ನಡೆದಿದೆ. ಭದ್ರಾ ಮೇಲ್ದಂಡೆ ಯೋಜನೆ ಹಾಗೂ ಕಾವೇರಿ ನೀರಾವರಿ ಯೋಜನಾ ವ್ಯಾಪ್ತಿಯಲ್ಲಿ ಗೋಲ್‌ಮಾಲ್ ನಡೆದಿದೆ ಎಂದು ಆರೋಪಿಸಿದರು.
ಹಣಕಾಸು ಇಲಾಖೆಯ ಅನುಮೋದನೆ ಪಡೆಯದೆ ಟೆಂಡರ್ ಕರೆಯಲಾಗಿದೆ. ನೀರಾವರಿ ಇಲಾಖೆಯಲ್ಲಿ ಸುಮಾರು 20 ಸಾವಿರ ಕೋಟಿ ರೂಪಾಯಿ ಟೆಂಡರ್ ಕರೆಯಲಾಗಿದೆ. ತರಾತುರಿಯಲ್ಲಿ ಟೆಂಡರ್ ಕರೆಯಲಾಗಿದ್ದು ಈಮೂಲಕ ಅಕ್ರಮ ನಡೆದಿದೆ ಎಂದು ಆರೋಪಿಸಿ ಅವರು ದಾಖಲೆಗಳನ್ನು ಬಿಡುಗಡೆ ಮಾಡಿದರು.
ಕಿಕ್ ಬ್ಯಾಕ್ ಉದ್ದೇಶದಿಂದ ಈ ಟೆಂಡರ್ ಅಕ್ರಮ ನಡೆದಿದೆ ಎಂದ ಅವರು ಇದು ಗುತ್ತಿಗೆದಾರರ ಆಧಾರಿತ ಸರ್ಕಾರವಾಗಿದೆ ಎನ್ನುತ್ತಾ, ಸಿಎಂ ಪುತ್ರ ವಿಜಯೇಂದ್ರ ವಿರುದ್ದವೇ ಈ ಕಿಕ್ ಬ್ಯಾಕ್ ಆರೋಪ ಮಾಡಿದರು.
ಎಲ್ಲಾ ಇಲಾಖೆಗಳಲ್ಲೂ ಬಿಎಸ್‌ವೈ ಪುತ್ತ ವಿಜಯೇಂದ್ರರ ಹಸ್ತಕ್ಷೇಪ ಇದೆ. ಇದು ಒಬ್ಬಿಬ್ಬರ ಆರೋಪವಲ್ಲ. ರಾಜ್ಯದ ಜನರೇ ಹೇಳುತ್ತಿದ್ದಾರೆ. ಸಚಿವರನೇಕರು ಹೇಳುತತಿದ್ದಾರೆ. ಯಾರಿಗೂ ನರಮ್ಮದಿ ಇಲ್ಲ ಎಂದ ವಿಶ್ವನಾಥ್, ವಿಜಯೇಂದ್ರರ ಮೇಲೆ ಇಡಿ ಕೇಸ್ ಕೂಡಾ ಇದೆ. ಆ ಕಾರಣಕ್ಕಾಗಿಯೇ ಅವರು ಪದೇ ಪದೇ ದೆಹಲಿಗೆ ಭೇಟಿ ನೀಡುತ್ತಿದ್ದಾರೆ ಎಂದು ದೂರಿದರು.
ಮನೆಯವರಿಂದಲೇ ಯಡಿಯೂರಪ್ಪ ಈ ಹಿಂದೆ ಜೈಲಿಗೆ ಹೋಗಿದ್ದರು. ಇದೀಗ ಮತ್ತೊಮ್ಮೆ ಜೈಲಿಗೆ ಹೋಗ್ತಾರ ಎಂಬ ಭಯ ನಮ್ಮನ್ನು ಕಾಡುತ್ತಿದೆ ಎಂದ ವಿಶ್ವನಾಥ್, ಈ ಸರ್ಕಾರ ಒಂದು ಕುಟುಂಬದ್ದಲ್ಲ. ಸರ್ಕಾರ ಜನರದ್ದು ಹಾಗೂ ಪಕ್ಷದ್ದು ಎಂದೂ ಗುಡುಗಿದರು.
ಯಡಿಯೂರಪ್ಪ ಅವರಿಗೆ ವಯಸ್ಸಾಗಿದೆ. 75 ವರ್ಷ ಮೇಲ್ಪಟ್ಟವರಿಗೆ ಅಧಿಕಾರ ಬೇಡ ಎಂಬುದು ಪಕ್ಷದ ಸಿದ್ದಾಂತವಾಗಿದೆ. ಆದರೂ ಯಡಿಯೂರಪ್ಪ ಅವರಿಗೆ 2 ವರ್ಷ ವಿನಾಯಿತಿ ನೀಡಲಾಗಿದೆ ಎಂದರು. ಈ ಮೂಲಕ ವಯಸ್ಸಿನ ಆಧಾರದಲ್ಲಿ ಯಡಿಯೂರಪ್ಪ ಅವರನ್ನು ಬದಲಾಯಿಸುವ ಅನಿವಾರ್ಯತೆ ಇದೆ ಎಂಬುದನ್ನು ಒತ್ತಿ ಹೇಳಿದರು.
ಈಶ್ವರಪ್ಪ ವಿರುದ್ದವೂ ವಾಗ್ದಾಳಿ ನಡೆಸಿದ ಹೆಚ್.ವಿಶ್ವನಾಥ್, ಈಶ್ವರಪ್ಪ ಕೂಡಾ ಕುಟುಂಬ ರಾಜಕಾರಣದ ಗಿರಾಕಿ. ಅವರು ಮತ್ತು ಮಗನ ಬಗ್ಗೆ ಶಿವಮೊಗ್ಗದಲ್ಲೇ ಕೇಳಿ ಎಂದು ಅವರು ಪತ್ರಕರ್ತರಿಗೆ ಮನವರಿಕೆ ಮಾಡಿದರು. ಅವರು ರಾಜ್ಯಪಾಲರಿಗೆ ದೂರು ನೀಡಿದ್ದೀರಲ್ವಾ? ಈಗ ಏಕೆ ಮೌನವಾಗಿದ್ದಾರೆ? ಎಂದು ಪ್ರಶ್ನಿಸಿದ ಅವರು, ಈಶ್ವರಪ್ಪ ಕೂಡಾ ಈಗ ಅಧಿಕಾರ ಅನುಭವಿಸುತ್ತಿರುವುದು ನಮ್ಮಿಂದಾಗಿ ಎಂದು ಹೇಳಿದರು.
ಜಿಂದಾಲ್ ಜಮೀನು ವಿವಾದ ವಿಚಾರದಲ್ಲಿ ಸಿದ್ದರಾಮಯ್ಯ ಅವರ ಮೌನವೇಕೆ? ಕಿಕ್ ಬ್ಯಾಕ್ ಪಡೆದವರೆಲ್ಲರೂ ಸುಮ್ಮನಿದ್ದಾರೆ. ಯೋಗೇಶ್ವರ್ ಹೇಳಿರುವಂತೆ ಇದು ಮೂರೂ ಪಕ್ಷಗಳ ಸರ್ಕಾರ ಎಂದು ಅವರು ವಿಶ್ಲೇಷಿಸಿದರು.