ಬೆಂಗಳೂರು:ಕಮೀಷನ್ ಆಸೆಗಾಗಿ ರಾಜ್ಯದಲ್ಲಿ ಜನೌಷಧಿ ಕೇಂದ್ರಗಳು ಬಲಿಯಾಗುತ್ತಿವೆಯೇ? ರಾಜ್ಯ ಸರ್ಕಾರದ ನಡೆ ಬಗ್ಗೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಅನುಮಾನ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅಶೋಕ್, ಜನ ಔಷಧಿ ಯೋಜನೆ ಕೇಂದ್ರ ಸರ್ಕಾರದ್ದು. ಇದರಿಂದ ಅತಿ ಕಡಿಮೆ ದರದಲ್ಲಿ ಔಷಧಿಗಳು ದೊರೆಯುತ್ತವೆ. ಕಾಂಗ್ರೆಸ್ ಸರ್ಕಾರ ಹಾಗೂ ಸಚಿವರಿಗೆ ಲಾಬಿಗಳು ತಲೆ ಸವರಿದೆ. ಆದ್ದರಿಂದ ಇಂತಹ ಕೆಲಸ ಮಾಡಲು ಹೊರಟಿದ್ದಾರೆ. ಇವರಿಗೆ ಕಮಿಶನ್ ಸಿಗಲಿದೆ ಎಂಬ ಕಾರಣಕ್ಕೆ ಜನರಿಗೆ ದ್ರೋಹ ಬಗೆಯಲು ಮುಂದಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಳ್ಳಾರಿ ಪಾದಯಾತ್ರೆಗೆ ಕೇಂದ್ರದ ನಾಯಕರು ಒಪ್ಪಿಗೆ ನೀಡಿದರೆ ನಾವು ಕೂಡ ಅದರಲ್ಲಿ ಭಾಗವಹಿಸುತ್ತೇವೆ. ಸಣ್ಣ ಪುಟ್ಟ ವ್ಯತ್ಯಾಸ ಇರುವುದು ನನ್ನ ಗಮನಕ್ಕೂ ಬಂದಿದೆ. ಬಸನಗೌಡ ಪಾಟೀಲ್ ಯತ್ನಾಳ್, ರಮೇಶ್ ಜಾರಕಿಹೊಳಿ ಮೊದಲಾದವರನ್ನು ಕೇಂದ್ರದ ನಾಯಕರು ಕರೆಸಿ ಈ ಹಿಂದೆಯೂ ಚರ್ಚೆ ಮಾಡಿದ್ದಾರೆ. ಈ ಭಿನ್ನಾಭಿಪ್ರಾಯ ಬಿಟ್ಟು ಒಟ್ಟಾಗಿ ವಿರೋಧ ಪಕ್ಷವಾಗಿ ನಮ್ಮ ಕರ್ತವ್ಯ ಮಾಡುತ್ತೇವೆ. ಜನರು ಕೂಡ ನಮ್ಮಿಂದ ಅದನ್ನೇ ನಿರೀಕ್ಷೆ ಮಾಡುತ್ತಾರೆ ಎಂದು ಅಶೋಕ್ ತಿಳಿಸಿದರು.
ಸಿ.ಪಿ.ಯೋಗೇಶ್ವರ್ ಅವರ ಮನೆಗೆ ಹೋಗಿ ಚರ್ಚೆ ಮಾಡಲಾಗಿದೆ. ಅವರಿಗೆ ಟಿಕೆಟ್ ನೀಡುವ ಬಗ್ಗೆ ಎನ್‌ಡಿಎ ನಿರ್ಧಾರ ಮಾಡಬೇಕಿದ್ದು, ಆ ಬಗ್ಗೆಯೂ ಮನವರಿಕೆ ಮಾಡಿಕೊಡುತ್ತೇವೆ. ಬಂಡಾಯ ಸ್ಪರ್ಧೆ ಮಾಡುವುದು ಸರಿಯಲ್ಲ. ಏಕ ಅಭ್ಯರ್ಥಿ ಸ್ಪರ್ಧಿಸುವಂತೆ ಮಾಡಲು ಎಲ್ಲ ಪ್ರಯತ್ನ ಮಾಡುತ್ತೇವೆ ಎಂದರು.