ವಿಜಯಪುರ: ಸಿಎಂ ಬಿಎಸ್‌ವೈ ವಿರುದ್ದ ವಾಕ್ರಪಹಾರ ಮಾಡುತ್ತಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಯಡಿಯೂರಪ್ಪ ಸಂಪುಟದಲ್ಲಿ ಭಾರೀ ಸ್ಫೋಟ ಸಂಭವಿಸಲಿದೆ ಎಂಬ ಸುಳಿವು ನೀಡಿ ಅಚ್ಚರಿಗೆ ಕಾರಣರಾಗಿದ್ದಾರೆ.
ವಿಜಯಪುರದ ಏಕತಾ ನಗರದಲ್ಲಿ ಸಮುದಾಯ ಭವನದ ಕಾಮಗಾರಿ ಭೂಮಿ ಪೂಜೆಯಲ್ಲಿ ಪಾಲ್ಗೊಂಡ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಯತ್ನಾಳ್, ಸಿಎಂ ಅವರ ಕುಟುಂಬ ರಾಜಕಾರಣದ ಬಗ್ಗೆ ಗಂಭೀರ ಆರೋಪ ಮಾಡಿದರು.
ಯಡಿಯೂರಪ್ಪ ಅವರಂತೆ ಈಶ್ವರಪ್ಪ ಕೂಡ ಪಕ್ಷ ಕಟ್ಡಿದ ಹಿರಿಯ ನಾಯಕ. ಅವರಿಗೆ ಇಲಾಖೆಯಲ್ಲಿ ಸಚಿವರಾಗಿ ಮುಕ್ತ ಸ್ವಾತಂತ್ರ್ಯ ಇಲ್ಲವಾಗಿದ್ದು, ತಾಳ್ಮೆ ಮೀರಿ ಸ್ಫೋಟಗೊಂಡಿದ್ದಾರೆ. ಸಂಪುಟದಲ್ಲಿ ಇನ್ನೂ ಸ್ಪೋಟಗಳಾಗುತ್ತದೆ ನೋಡ್ತಾ ಇರಿ ಎಂದು ಯತ್ನಾಳ್ ಹೇಳಿದ್ದಾರೆ.
ಮೇ 2 ರ ಬಳಿಕ ಯಡಿಯೂರಪ್ಪ ಸಂಪುಟದಲ್ಲಿ ಇನ್ನೂ ದೊಡ್ಡ ಮಟ್ಟದ ಸ್ಫೋಟ ಆಗಲಿದೆ ಎಂದರು. ರಾಜ್ಯದಲ್ಲಿ ಮೋದಿ ಅವರು ಬಯಸಿದ ಬಿಜೆಪಿ ಸರ್ಕಾರ ಇಲ್ಲ, ಅಪ್ಪ-ಮಕ್ಕಳ ಆಡಳಿತದ ಸರ್ಕಾರ ನಡೆಯುತ್ತಿದೆ ಎಂದು ಕಿಡಿಕಾರಿದರು.
ಯಡಿಯೂರಪ್ಪ ಅವರು ತಮ್ಮ ಬೀಗರಿಗರ ಅನುಕೂಲ ಮಾಡಿಕೊಟ್ಟಿದ್ದಾರೆ ಎಂದು ದೂರಿದ ಯತ್ನಾಳ್, ಪಕ್ಷದ ಶಾಸಕರು ದುಂಬಾಲು ಬಿದ್ದು ಗೋಗರೆದರೂ 10 ಕೋಟಿ ಅನುದಾನ ನೀಡದ ಸಿ.ಎಂ ಯಡಿಯೂರಪ್ಪ, ಗ್ರಾಮೀಣಾಭಿವೃದ್ಧಿ ಇಲಾಖೆ ಸಚಿವರಿಗೂ ತಿಳಿಯದಂತೆ ನೂರಾರು ಕೋಟಿ ರೂ. ನೀಡುತ್ತಾರೆ ಎಂದು ವಾಗ್ದಾಳಿ ನಡೆಸಿದರು.