ಜೈಪುರ: ಕರ್ನಾಟಕ ರಾಜಕಾರಣದಲ್ಲಿ ವಿಪ್ಲವದ ಸನ್ನಿವೇಶ ಕಂಡುಬಂದರೆ, ಅತ್ತ ಬಿಜೆಪಿ ರಾಷ್ಟ್ರೀಯ ನಾಯಕರು ತಮ್ಮದೇ ಶೈಲಿಯಲ್ಲಿ ಸಂಘಟನೆಯಲ್ಲಿ ನಿರತರಾಗಿದ್ದಾರೆ. ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳ ತಂಡಗಳಂತೂ ಹೊಸತನದ ಪ್ರಯೋಗದಲ್ಲಿ ಗಮನಸೆಳೆಯುತ್ತಿದ್ದಾರೆ. ಅದರಲ್ಲೂ ಸಿ.ಟಿ.ರವಿ ಇದೀಗ ಎಲ್ಲರ ಕುತೂಹಲದ ಕೇಂದ್ರಬಿಂದುವಾಗಿದ್ದಾರೆ.
ರಾಜಸ್ಥಾನ ಪ್ರವಾಸ ಕೈಗೊಂಡ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ರಾಜರ ನಾಡಿನಲ್ಲಿ ಕೇಸರಿ ಮೇನಿಯಾ ಸೃಷ್ಟಿಸಿ ರಾಷ್ಟ್ರ ರಾಜಕೀಯದಲ್ಲಿ ಸಂಚಲನ ಉಂಟುಮಾಡಿದ್ದಾರೆ. ಎರಡು ದಿನಗಳ ಅವರ ಸವಾರಿಯು ಕಮಲ ಪಾಳಯದ ರಾಷ್ಟ್ರೀಯ ವರಿಷ್ಠರಲ್ಲೂ ಕುತೂಹಲಕ್ಕೆ ಎಡೆಮಾಡಿಕೊಟ್ಟಿತು.
ಜೋದ್‌ಪುರ್, ಜೈಪುರ್ ಸಹಿತ ರಾಜಸ್ಥಾನದ ಹಲವೆಡೆ ಭೇಟಿ ನೀಡಿದ ಸಿ.ಟಿ.ರವಿ ಅವರಿಗೂ ಅಚ್ಚರಿಯ ಪ್ರಸಂಗಗಳು ಎದುರಾಯಿತು. ಅವರು ಹೋದಲ್ಲೆಲ್ಲಾ ರೋಡ್ ಶೋ ರೀತಿಯ ದೃಶ್ಯಧಾರೆ ಹರಿದದ್ದು ಹೇಗೆ ಎಂಬುದು ಸ್ಥಳೀಯ ಬಿಜೆಪಿ ನಾಯಕರಿಗೂ ಅಚ್ಚರಿ.
ಮೊದಲ ದಿನ ಅವರು ಜೋದ್‌ಪುರಕ್ಕೆ ಭೇಟಿ ನೀಡಿ ಹಲವಾರು ಸಭೆ-ಸಮಾರಂಭಗಳಲ್ಲಿ ಭಾಗಿಯಾದರು. ಅವರು ನಗರಕ್ಕೆ ಆಗಮಿಸುತ್ತಿದಂತೆಯೇ ಗ್ರ್ಯಾಂಡ್ ಎಂಟ್ರಿ ಸನ್ನಿವೇಶ ಸೃಷ್ಟಿಯಾಯಿತು. ಹೋದ ಕಡೆಯೆಲ್ಲಾ ಯುವಕರ ಸಮೂಹ ಭಾರೀ ಸಂಖ್ಯೆಯಲ್ಲಿ ಜಮಾಯಿಸಿ ಅದ್ಧೂರಿ ಸ್ವಾಗತ ಕೋರುತ್ತಿತ್ತು. ಇದು ಒಂದೆರಡು ಸ್ಥಳಕ್ಕೆ ಸೀಮಿತವಿರಲಿಲ್ಲ, ಹತ್ತಾರು ಕಡೆ ಸಿ.ಟಿ.ರವಿ ಅವರನ್ನು ಜನಜಾತ್ರೆ, ರೋಡ್ ಶೋ ರೀತಿ ಸನ್ನಿವೇಶದ ನಡುವೆ ಸ್ವಾಗತಿಸಿದ್ದು ವಿಶೇಷ.
ಏನಿದು ಇಷ್ಟೊಂದು ಅಭಿಮಾನ? ಎಂಬ ಪ್ರಶ್ನೆ ಸಿ.ಟಿ.ರವಿ ಅವರಲ್ಲೇ ಮೂಡಿದೆ. ಇದಕ್ಕೆ ಕಾರಣವೂ ಇತ್ತು. ವಾಟ್ಸಪ್ ಸಂದೇಶ ಸೃಷ್ಟಿಸಿದ ಅಭಿಮಾನದ ತರಂಗ ಇಂಥದ್ದೊಂದು ತಯಾರಿಗೆ ಕಾರಣವಾಗಿತ್ತಂತೆ. ಈ ಸುಸ್ವಾಗತ ವೈಖರಿಯಿಂದಾಗಿ ಪ್ರತೀ ಸ್ಥಳದಲ್ಲಿ ಕನಿಷ್ಠ 10-15 ನಿಮಿಷ ಸಮಯ ವ್ಯವಾಯಿತು. ಎಲ್ಲಾ ಕಡೆ ಆಯೋಜಿತ ಕಾರ್ಯಕ್ರಮಗಳೂ ತಡವಾಯಿತು. ತಡ ರಾತ್ರಿಯಾದರೂ ಕಾರ್ಯಕರ್ತರ ಉತ್ಸಾಹ ಕಡಿಮೆಯಾಗಿರಲಿಲ್ಲ.
ಏನಿದು ಮ್ಯಾಜಿಕ್..?
ಆರೆಸ್ಸೆಸ್ ಮೂಲದಿಂದ ಬಂದಿರುವ ಸಿ.ಟಿ.ರವಿ ಒಬ್ಬ ಸಂಘಟನಾ ಚತುರ. ಯುವಜನರನ್ನು ಸೂಜಿಗಲ್ಲಿನಂತೆ ಸೆಳೆಯುವ ವ್ಯಕ್ತಿತ್ವ. ಸಂಘದ ಚಿಂತನೆ, ಸಂಘ ತೋರಿಸಿದ ನಡೆಗಿಂತ ಮೀರಿ ಅವರದ್ದು ಮಾತಿಲ್ಲ-ಕಥೆಯಿಲ್ಲ. ಅಷ್ಟೇ ಅಲ್ಲ, ತಮಿಳುನಾಡು, ಪಾಂಡಿಚೇರಿಯಲ್ಲಿ ಬಿಜೆಪಿಯನ್ನು ಗೆಲ್ಲಿಸಿದ ಸಮರ್ಥ ಸೇನಾನಿ ಎಂಬ ಖ್ಯಾತಿಯಿಂದಾಗಿಯೇ ಸಿ.ಟಿ. ರವಿ ರಾಷ್ಟ್ರೀಯ ಮಟ್ಟದಲ್ಲಿ ಬಿಜೆಪಿ ಯುವಕರ ಪಾಲಿಗೆ ಐಕಾನ್ ಅನ್ನಿಸಿದ್ದಾರೆ. ಹಾಗಾಗಿ ರಾಜಸ್ಥಾನಕ್ಕೆ ಭೇಟಿ ನೀಡಿದಾಗ ಅವರನ್ನು ಸ್ವಾಗತಿಸಲು ಯುವ ಸೈನ್ಯ ಈ ರೀತಿಯಲ್ಲಿ ಮುಗಿಬಿದ್ದಿರುವುದು.
ಕರುನಾಡಿನ ಆತಿಥ್ಯದ ಪ್ರತಿಧ್ವನಿ:
ರಾಜಸ್ಥಾನದಲ್ಲಿನ ಈ ಅಚ್ಚರಿ ಕುರಿತು ಸುದ್ದಿಗಾರರ ಜೊತೆ ಅನುಭವ ಹಂಚಿಕೊಂಡ ಸಿ.ಟಿ.ರವಿ, ಇದು ರಾಜಸ್ಥಾನ ಜನರಿಗೆ ಕರುನಾಡಿನ ಮೇಲಿರುವ ಅಭಿಮಾನ ಎಂದರು. ತಾವು ಹೋದಲ್ಲೆಲ್ಲಾ ಜನ ಕರುನಾಡಿನೊಂದಿಗಿನ ನಂಟಿನ ಬಗ್ಗೆ ಮಾತನಾಡುತ್ತಾರೆ. ‘ತಾನು ಬಹಳಷ್ಟು ಸಮಯ ಕರ್ನಾಟಕದಲ್ಲಿದ್ದೆ’ ಎಂದವರೇ ಹೆಚ್ಚು ಮಂದಿ. ‘ನನ್ನವರು ಧಾರವಾಡದಲ್ಲಿದ್ದಾರೆ, ಸಂಬಂಧಿ ಬೆಳಗಾವಿಯಲ್ಲಿದ್ದಾರೆ, ನಮ್ಮ ಫ್ಯಾಮಿಲಿ ಮೈಸೂರು-ಬೆಂಗಳೂರಿನಲ್ಲಿದೆ’ ಎಂದವರು ಮತ್ತಷ್ಟು ಮಂದಿ. ಹೀಗೆ ಬಗೆ ಬಗೆಯಲ್ಲಿ ಕರುನಾಡಿನ ಜೊತೆಗಿನ ಸಂಬಂಧವನ್ನು ಹೇಳಿಕೊಳ್ಳುತ್ತಾರಂತೆ. ಸಿ.ಟಿ.ರವಿ ಹೇಳುವಂತೆ ರಾಜಸ್ಥಾನದ ಬಹುತೇಕ ಕಟುಂಬಗಳ ಸದಸ್ಯರು ಕರುನಾಡಿನ ಬಂಧುಗಳ ಜೊತೆ ನಂಟು ಇಟ್ಟುಕೊಂಡಿದ್ದಾರೆ. ಮಠಗಳಿಗೆ, ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡಿದಾಗ ಅಲ್ಲಿನ ಪೂಜ್ಯರುಗಳ ಮಾತುಗಳಲ್ಲೂ ಅದೇ ರೀತಿಯ ನಂಟಿನ ಸಂಗತಿ ಪ್ರತಿಧ್ವನಿಸುತ್ತಿತ್ತಂತೆ.
ರಾಜಸ್ಥಾನದ ವಿವಿಧ ನಗರಗಳಲ್ಲಿ ಬಜೆಪಿ ಪ್ರಾಂತ್ಯ ಪದಾಧಿಕಾರಿಗಳ ಸಭೆ, ಪ್ರಕೋಷ್ಠ ಸಭೆ, ಜನಪ್ರತಿನಿಧಿಗಳ ಬೈಠಕ್ ಸಹಿತ ರವಿ ಭಾಗವಹಿಸಿದ ಕಾರ್ಯಕ್ರಮಗಳಲ್ಲಿ ನಿರೀಕ್ಷೆ ಮೀರಿ ಕಾರ್ಯಕರ್ತರು ಭಾಗವಹಿಸಿದ್ದು ವಿಶೇಷ.
ಆರೆಸ್ಸೆಸ್ ಹಿರಿಯರ ಮಾರ್ಗದರ್ಶನದಂತೆ ಬಿಎಲ್.ಸಂತೋಷ್ ಅವರು ಬಿಜೆಪಿಯ ರಾಷ್ಟ್ರೀಯ ಜವಾಬ್ಧಾರಿ ವಹಿಸಿಕೊಂಡನಂತರ ಪಕ್ಷ ಸಂಘಟನೆಗೂ ಹೊಸ ಸೂತ್ರ ನೀಡಿದ್ದಾರೆ. ಪ್ರಧಾನ ಕಾರ್ಯದರ್ಶಿಗಳು ತಮ್ಮ ಉಸ್ತುವಾರಿ ರಾಜ್ಯಗಳಲ್ಲದೆ ಎರಡು ಹೆಚ್ಚುವರಿ ಪ್ರಾಂತ್ಯಗಳಿಗೆ ಪ್ರವಾಸ ಕೈಗೊಳ್ಳಬೇಕೆಂದು ಸೂಚಿಸಿದ್ದಾರೆ. ಈ ಸಂಘಟನಾ ಚತುರನ ಈ ಸೂತ್ರವು ಪಕ್ಷ ಬಲವರ್ಧನೆಗೂ ಅನುಕೂಲ ಕಲ್ಪಿಸಿದೆ. ಸಂಘಟನೆ ನಿರತ ನಾಯಕರಿಗೆ ಬಾಷಾ ಪ್ರಾವಿಣ್ಯ ಹಾಗೂ ಪ್ರಾದೇಶಿಕ ನಂಟಿನ ಪರಿಪೂರ್ಣತೆಗೂ ಸಹಕಾರಿಯಾಗಿದೆ.