ಬೆಂಗಳೂರು: ರಾಜಧಾನಿಯ ಪರಪ್ಪನ ಅಗ್ರಹಾರ ಜೈಲಿನ ವಾಸ್ತವ ಸ್ಥಿತಿ ಬಗ್ಗೆ ಬಿಜೆಪಿ ಕಟು ಟೀಕೆ ಮಾಡಿದೆ. ಜೈಲಿನಲ್ಲಿ ಇರುವ ಒಟ್ಟು ಕೈದಿಗಳು: 4,834, ಭದ್ರತಾ ಸಿಬ್ಬಂದಿ ಸಂಖ್ಯೆ 571, ಖಾಲಿ ಹುದ್ದೆಗಳು 388. ಇಂತಹಾ ಸ್ಥಿತಿಯಲ್ಲಿ ಜೈಲು ಸುಧಾರಣೆ ಹೇಗೆ ಸಾಧ್ಯ ಎಂದು ಬಿಜೆಪಿ ಪ್ರಶ್ನಿಸಿದೆ.
ಈ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಬರೆದುಕೊಂಡಿರುವ ಬಿಜೆಪಿ, ‘ಭ್ರಷ್ಟ ಕಾಂಗ್ರೆಸ್ ಸರ್ಕಾರದ ದುರಾಡಳಿತದ ಮತ್ತೊಂದು ಕರಾಳ ಮುಖ ಬಯಲಾಗಿದೆ. ಸಿಬ್ಬಂದಿ ಕೊರತೆ, ಹಳೆಕಾಲದ ಜಾಮರ್ ವ್ಯವಸ್ಥೆ, ಭದ್ರತಾ ಲೋಪಗಳಿಂದ ಪರಪ್ಪನ ಅಗ್ರಹಾರ ಜೈಲು ಬಳಲುತ್ತಿದೆ ಎಂಬ ವರದಿಯನ್ನು ಎಡಿಜಿಪಿ ಆರ್. ಹೀತೇಂದ್ರ ನೇತೃತ್ವದ ಉನ್ನತ ಮಟ್ಟದ ಸಮಿತಿ ವರದಿ ಹೇಳಿದೆ. ಈ ಮೂಲಕ ಸರ್ಕಾರದ ವೈಫಲ್ಯ ಬಹಿರಂಗಪಡಿಸಿದೆ’ ಎಂದು ಬೊಟ್ಟು ಮಾಡಿದೆ.
ನಿಯಮಗಳ ಪ್ರಕಾರ, 6 ಕೈದಿಗಳಿಗೆ 1 ಸಿಬ್ಬಂದಿ ಇರಬೇಕು. ಸದ್ಯ ಇರುವುದು
30 ಕೈದಿಗಳಿಗೆ 1 ಸಿಬ್ಬಂದಿ. ದೆಹಲಿಯ ತಿಹಾರ್ ಜೈಲಿನಲ್ಲಿ 8,600 CCTV ಕ್ಯಾಮರಾಗಳಿವೆ. ಆದರೆ, ಪರಪ್ಪನ ಅಗ್ರಹಾರ ಜೈಲಿನಲ್ಲಿ ಇರುವುದು ಕೇವಲ 332 ಸಿಸಿ ಕ್ಯಾಮರಾ. ಜೈಲಿನೊಳಗೆ ಏನು ನಡೆಯುತ್ತಿದೆ ಎಂಬುದೇ ಸರ್ಕಾರಕ್ಕೆ ಗೊತ್ತಿಲ್ಲ ಎಂದು ಬಿಜೆಪಿ ಟೀಕಿಸಿದೆ.
ಈ ದುಸ್ಥಿತಿ ಬಗ್ಗೆ ಟೀಕಿಸಿರುವ ಬಿಜೆಪಿ, ಇದು ‘ತಮ್ಮ ದುರಾಡಳಿತ ಭದ್ರತೆಗೆ ಮಾಡಿದ ದ್ರೋಹ.! ಅಪರಾಧಿಗಳಿಗೆ ನೀಡಿದ ಮುಕ್ತಾವಕಾಶ. ಕೂಡಲೇ ಅಸಮರ್ಥ ಗೃಹ ಸಚಿವ ಪರಮೇಶ್ವರ್ ಅವರ ರಾಜೀನಾಮೆ ಪಡೆಯಿರಿ ಇಲ್ಲವೇ ರಾಜ್ಯದಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಿ’ ಎಂದು ಸಿಎಂ ಸಿದ್ದರಾಮಯ್ಯ ಅವರನ್ನು ತರಾಟೆಗೆ ತೆಗೆದುಕೊಂಡಿದೆ.

























































