ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಅಧಿಕಾರದಿಂದ ನಿರ್ಗಮಿಸುವ ಬಗ್ಗೆ ನಿರ್ಧಾರ ಕೈಗೊಂಡಿದ್ದಾರೆ. ಇಂದು ಮಧ್ಯಾಹ್ನ ನಂತರ ರಾಜೀನಾಮೆ ನೀಡುವುದಾಗಿ ಸಿಎಂ ಯಡಿಯೂರಪ್ಪ ಪ್ರಕಟಿಸಿದ್ದಾರೆ.
ರಾಜ್ಯ ಬಿಜೆಪಿ ಸರ್ಕಾರದ ಎರಡು ವರ್ಷಗಳ ಸಾಧನಾ ಸಮಾರಂಭದಲ್ಲಿ ಮಾತನಾಡಿದ ಅವರು ತಮ್ಮ ರಾಜೀನಾಮ ತೀರ್ಮಾನವನ್ನು ಪ್ರಕಟಿಸಿದರು.
ತಮಗೆ ಬಿಜೆಪಿ ವರಿಷ್ಠರು ಮುಖ್ಯಮಂತ್ರಿಯಾಗಿ ಕೆಲಸ ಮಾಡಲು ಅವಕಾಶ ಕೊಟ್ಟಿದ್ದಾರೆ. ಅವರಿಗೆ ನಾನು ಚಿರ ಋಣಿ ಎಂದ ಅವರು, ಮಧ್ಯಾಹ್ನದ ಊಟ ಮುಗಿಸಿದ ಬಳಿಕ ರಾಜಭವನಕ್ಕೆ ತೆರಳಿ ರಾಜೀನಾಮೆ ಸಲ್ಲಿಸುವುದಾಗಿ ಗದ್ಗದಿತರಾಗಿ ನ ಹೇಳಿದರು.
ಏನಿದು ಅಚ್ಚರಿಯ ಬೆಳವಣಿಗೆ..?
ಈ ಹಿಂದೆ, ಜುಲೈ 25ರಂದು ಬಿಜೆಪಿ ಹೈಕಮಾಂಡ್ ಬಿಎಸ್‌ವೈ ರಾಜೀನಾಮೆಗೆ ಸೂಚಿಸಲಿದೆ ಎಂದೇ ಸುದ್ದಿಯಾಗಿತ್ತು. ಆದರೆ ನಿನ್ನೆ ಸಂಜೆಯವರೆಗೂ ಯಾವುದೇ ಮಾಹಿತಿ ದೆಹಲಿ ವರಿಷ್ಠರಿಂದ ಬಂದಿಲ್ಲ ಎಂದು ಯಡಿಯೂರಪ್ಪ ಅವರೇ ಹೇಳಿಕೊಂಡಿದ್ದರು.
ಈ ನಡುವೆ ನಿನ್ನೆ ಸಂಜೆ ಕರ್ನಾಟಕದ ಬೆಳವಣಿಗೆ ಕುರಿತಂತೆ ಗೋವಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಕೂಡಾ ಯಡಿಯೂರಪ್ಪ ಅವರಿಂದ ರಾಜೀನಾಮೆ ಕೊಡಿಸುವ ಸುದ್ದಿಯನ್ನು ತಳ್ಳಿಹಾಕಿದ್ದರು. ಅಷ್ಟೇ ಅಲ್ಲ ಬಿಎಸ್‌ವೈ ಅವರ ಸಾಧನೆಯನ್ನು ಕೊಂಡಾಡಿದ್ದರು. ರಾತ್ರಿ ವೇಳೆ, ಬಿಜೆಪಿ ಕೇಂದ್ರ ಕಚೇರಿಯಿಂದ ಬಂದ ಸುದ್ದಿಯೊಂದು ಎಲ್ಲಾ ಬೆಳವಣಿಗೆಗಳಿಗೆ ಅಚ್ಚರಿಯ ತಿರುವನ್ನೂ ನೀಡಿತು. ಸದ್ಯ ಕರ್ನಾಟಕದಲ್ಲಿ ಪ್ರವಾಹ ಪರಿಸ್ಥಿತಿ ಇರುವ ಹಿನ್ನೆಲೆಯಲ್ಲಿ ನಾಯಕತ್ವ ಬದಲಾವಣೆ ಪ್ರಕ್ರಿಯೆ ಒಂದೆರಡು ವಾರಗಳ ಮಟ್ಟಿಗೆ ಮುಂದಕ್ಕೆ ಹೋಗಲಿದೆ ಎಂದು ಪಕ್ಷದ ದೆಹಲಿ ಮೂಲಗಳು ಸ್ಪಷ್ಟನೆ ನೀಡಿದವು.
ಈ ಮಧ್ಯೆಯೂ, ಯಡಿಯೂರಪ್ಪ ಅವರು ಪದತ್ಯಾಗದ ತೀರ್ಮಾನ ಕೈಗೊಂಡಿದ್ದಾರೆ ಎನ್ನಲಾಗಿದೆ. ಇಂದಲ್ಲ ನಾಳೆ ನಾಯಕತ್ವ ಬಿಟ್ಟು ಕೊಡಲೇ ಬೇಕಿದೆ. ಹಾಗಾಗಿ ಯಾವುದೇ ವಿವಾದಕ್ಕೆ ಅವಕಾಶ ಸಿಗಬಾರದೆಂಬ ಉದ್ದೇಶದಿಂದ ಅವರು ರಾಜೀನಾಮೆ ನಿರ್ಧಾರ ಕೈಗೊಂಡಿದ್ದಾರೆನ್ನಲಾಗಿದೆ.