(ದೆಹಲಿ ಪ್ರತಿನಿಧಿ ವರದಿ)
ದೆಹಲಿ: ಮುಖ್ಯಮಂತ್ರಿ ಯಡಿಯೂರಪ್ಪ ಅವರು ನಿರ್ಗಮನ ಬೆನ್ನಲ್ಲೇ, ಇತ್ತ ದೆಹಲಿಯಲ್ಲಿ ಅಚ್ಚರಿಯ ಬೆಳವಣಿಗೆಗೆ ಹೈಕಮಾಂಡ್ ಮುನ್ನುಡಿ ಬರೆದಿದೆ. ಬಿಎಸ್‌ವೈ ಅವರ ಉತ್ತರಾಧಿಕಾರಿ ಆಯ್ಕೆಗೆ ರಹಸ್ಯ ಕಸರತ್ತಿನಲ್ಲಿ ತೊಡಗಿರುವ ಹೈಕಮಾಂಡ್, ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹಾಗೂ ಅರವಿಂದ್ ಬೆಲ್ಲದ್ ಹೆಸರುಗಳನ್ನು ಆಯ್ಕೆ ಮಾಡಿದೆ. ಹೈಕಮಾಂಡ್‌ನ ಈ ನಡೆಯಿಂದಾಗಿ 2012ರ ವಿದ್ಯಮಾನ ಈಗ ಮತ್ತೊಮ್ಮೆ ಮರುಕಳಿಸಲಿದೆಯೇ ಎಂಬ ಕುತೂಹಲ ವ್ಯಕ್ತವಾಗಿದೆ.
2012ರಲ್ಲಿ ಯಡಿಯೂರಪ್ಪ ಅವರು ರಾಜೀನಾಮೆ ನೀಡಿದ ಬಳಿಕ ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾಗಿದ್ದರು. ಈ ಬಾರಿಯೂ ಬಿಎಸ್‌ವೈ ರಾಜೀನಾಮೆ ನಂತರ ಸಿಎಂ ಹುದ್ದೆಗೆ ಶೆಟ್ಟರ್ ಆಯ್ಕೆಯಾಗಬಹುದೇ ಎಂಬ ಕುತೂಹಲ ಕೆರಳುವಂತಾಗಿದೆ.
ಬೆಲ್ಲದ್ ಅವರೇ ಇದೀಗ ಲಿಂಗಾಯತ ಬ್ರಾಂಡ್..
ಇದೀಗ ರಾಜೀನಾಮೆ ನಂತರ ಬಿಎಸ್‌ವೈ ಅವರು ಉಸ್ತುವಾರಿ ಸಿಎಂ ಆಗಿ ಮುಂದುವರಿಯಲಿದ್ದಾರೆ. ನೂತನ ಸಿಎಂ ಸ್ಥಾನಕ್ಕೆ ಜಗದೀಶ್ ಶೆಟ್ಟರ್ ಹಾಗೂ ಅರವಿಂದ್ ಬೆಲ್ಲದ್ ಹೆಸರಿಗಳಷ್ಟೇ ಇವೆ. ಈ ಇಬ್ಬರೂ ಲಿಂಗಾಯತ ಸಮುದಾಯವನ್ನ ಪ್ರತಿನಿಧಿಸುತ್ತಿರುವ ನಾಯಕರು.
ಈ ವರೆಗೂ ಯಡಿಯೂರಪ್ಪ ರಾಜೀನಾಮೆ ನೀಡಿದರೆ ಬೆಲ್ಲದ್ ಅವರನ್ನು ಸಿಎಂ ಮಾಡಬೇಕೆಂದು ಲಿಂಗಾಯತ ಮಠಗಳ ಶ್ರೀಗಳ ಸಮೂಹ ಒತ್ತಾಯಿಸುತ್ತಾ ಬಂದಿವೆ. ಈ ಕುರಿತಂತೆ ಪಂಚಮಸಾಲಿ ಮಠಗಳ ಶ್ರೀಗಳು ಬಿಜೆಪಿ ಹೈಕಮಾಂಡ್‌ವರೆಗೂ ತಮ್ಮ ಆಗ್ರಹದ ಸಂದೇಶವನ್ನು ತಲುಪಿಸಿದೆ. ಹಾಗಾಗಿ ಹೈಕಮಾಂಡ್ ಯಾರನ್ನು ಅಂತಿಮವಾಗಿ ಪರಿಗಣಿಸುತ್ತದೆ ಎಂಬುದೇ ಮುಂದೆ ಇರುವ ಕುತೂಹಲ.