ಮಂಗಳೂರು: ಬಿಲ್ಲವ ಸಮುದಾಯದವರು, ಸಾಮಾಜಿಕವಾಗಿ ಆರ್ಥಿಕವಾಗಿ ಹಿಂದುಳಿದಿದ್ದರೂ ಸಾಂಪ್ರದಾಯಿಕ ಆಚರಣೆಗಳಲ್ಲಿ, ಸಾಂಸ್ಕೃತಿಕ ಪರಂಪರೆಯಲ್ಲಿ ಮುಂಚೂಣಿಯಲ್ಲಿದ್ದಾರೆ. ಆದರೆ ಸಂಘನಾತ್ಮಕ ಶಕ್ತಿಯಿಂದ ಈ ಸಮುದಾಯ ವಂಚಿತವಾಗಿದೆ ಎಂಬ ಮಾತುಗಳು ಆಗಾಗ್ಗೆ ಕೇಳಿಬರುತ್ತಿವೆ. ಇದೀಗ ಸಮುದಾಯದಲ್ಲಿ ಒಗ್ಗಟ್ಟು ಪ್ರದರ್ಶಿಸುವ ವೇದಿಕೆಯೊಂದು ಗಮನಸೆಳೆದಿದೆ.
ಕರ್ನಾಟಕದಲ್ಲಿ ಬಿಲ್ಲವ ಸಮುದಾಯದವರದ್ದೇ ಪ್ರಾಬಲ್ಯ. ಆದರೆ, ಈ ಸಮುದಾಯದೊಳಗೆ ಅನೇಕ ಸಂಘಟನೆಗಳಿದ್ದು, ಈ ಸಂಗಹಟನೆಗಳು ಒಗ್ಗೂಡಿ ಸಮುದಾಯದ ಚಟುವಟಿಕೆಗಳಲ್ಲಿ ಭಾಗಿಯಾಗುವ ಅವಕಾಶವೂ ಕಡಿಮೆ ಇತ್ತು. ಹಾಗಾಗಿ ಈ ಸಮುದಾಯಕ್ಕೆ ರಾಜಕೀಯ ಅವಕಾಶಗಳೂ ನಿರೀಕ್ಷಿತ ಮಟ್ಟದಲ್ಲಿ ಸಿಗಲಿಲ್ಲ. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ಮುಖಂಡರು, ತಮ್ಮ ಸಮುದಾಯದ ಸಂಘ ಸಂಸ್ಥೆಗಳ ನಡುವೆ ಸಮಾನ್ವಯದ ಕಾರ್ಯಗಳಿಗೆ ಮುನ್ನುಡಿ ಬರೆದಿದ್ದಾರೆ. ಈ ಸಂಬಂಧ ಫೆಬ್ರವರಿ ತಿಂಗಳಲ್ಲಿ ನಡೆಯಲಿರುವ ‘ಶ್ರೀ ಗುರು ಸಮಾವೇಶ’ ವೇದಿಕೆಯಾಗಿ ಗಮನಸೆಳೆಯಲಿದೆ. ಬ್ರಹ್ಮಶ್ರೀ ನಾರಾಯಣಗುರು ಅನುಯಾಯಿಗಳಿಂದ ಈ ಕಾರ್ಯಕ್ರಮ ನೆರವೇರಲಿದ್ದು, ಈ ಕೈಂಕರ್ಯ ಮೂಲಕ ‘ಯುವಜನ ಶಕ್ತಿ’ ಅನಾವರಣಗೊಳ್ಳಲಿದೆ ಎಂದು ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಖಜಾಂಚಿ ಪದ್ಮರಾಜ ಆರ್ ಪೂಜಾರಿ ತಿಳಿಸಿದ್ದಾರೆ.

ಏನಿದು ‘ಶ್ರೀ ಗುರು ಸಮಾವೇಶ’?
ದಾರ್ಶನಿಕ, ಮಾನವತಾವಾದಿ ಬ್ರಹ್ಮಶ್ರೀ ನಾರಾಯಣಗುರುಗಳು 1912ರ ಫೆ.21ರಂದು ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ದೇವರ ಮೂರ್ತಿ ಪ್ರತಿಷ್ಠಾಪನೆ ಮಾಡುವ ಮೂಲಕ ಸಾಮಾಜಿಕ ಧಾರ್ಮಿಕ ಕ್ರಾಂತಿಗೆ ನಾಂದಿ ಹಾಡಿದ್ದರು. ಆ ಐತಿಹಾಸಿಕ, ಅಪೂರ್ವ ದಿನವನ್ನು ನೆನೆಪಿಸುವ ಕೈಂಕರ್ಯಕ್ಕೆ ಮಂಗಳೂರು ಸಜ್ಜಾಗುತ್ತಿದೆ. 2026ರ ಫೆ.21ರಂದು ಮಂಗಳೂರಿನಲ್ಲಿ ಬ್ರಹ್ಮಶ್ರೀ ನಾರಾಯಣಗುರು ಅನುಯಾಯಿಗಳಿಂದ ಶ್ರೀ ಗುರು ಸಮಾವೇಶ ಆಯೋಜಿಸಲು ನಿರ್ಧರಿಸಲಾಗಿದೆ ಎಂದು ಪದ್ಮರಾಜ ಆರ್ ಪೂಜಾರಿ ತಿಳಿಸಿದ್ದಾರೆ.
ಬ್ರಹ್ಮಶ್ರೀ ನಾರಾಯಣಗುರುಗಳು ಹಿಂದುಳಿದ ವರ್ಗದವರ ಬದುಕಿಗೆ ಹೊಸತನದ ಹಾದಿಯನ್ನು ತೋರಿಸಿಕೊಟ್ಟವರು. ಗುರುಗಳ ಕ್ರಾಂತಿಕಾರಿ ನಿರ್ಧಾರದಿಂದ ಇಂದು ಹಿಂದುಳಿದ ವರ್ಗದ ಜನರು ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯವಾಗಿದೆ. ಇದನ್ನು ನೆನಪು ಸ್ಮರಿಸುವುದರೊಂದಿಗೆಮಾಡುವುದರೊಂದಿಗೆ ಫೆಬ್ರವರಿಯಲ್ಲಿ ನಡೆಯುವ ಸಮಾವೇಶ ಐತಿಹಾಸಿಕ ಕಾರ್ಯಕ್ರಮ ವಾಗಲಿದೆ. ದೇಶ-ವಿದೇಶದಿಂದ ಬ್ರಹ್ಮಶ್ರೀ ನಾರಾಯಣಗುರುಗಳ ಅನುಯಾಯಿಗಳು ಇದರಲ್ಲಿ ಭಾಗವಹಿಸಲಿದ್ದಾರೆ ಎಂದವರು ತಿಳಿಸಿದ್ದಾರೆ.

ಹತ್ತಾರು ಸಂಘ-ಸಂಸ್ಥೆಗಳಿಗೆ ಒಂದೇ ವೇದಿಕೆ!
ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ, ಗೆಜ್ಜೆಗಿರಿ ಕ್ಷೇತ್ರ, ಕಟಪಾಡಿ ವಿಶ್ವನಾಥ ದೇವಸ್ಥಾನ, ಕಂಕನಾಡಿ ಗರಡಿ ಕ್ಷೇತ್ರ,ರಾಷ್ಟ್ರೀಯ ಬಿಲ್ಲವರ ಮಹಾಮಂಡಲ, ಅಖಿಲ ಭಾರತ ಬಿಲ್ಲವರ ಯೂನಿಯನ್, ಗೋಕರ್ಣನಾಥ ಬ್ಯಾಂಕ್, ಭಾರತ್ ಬ್ಯಾಂಕ್, ಗುರು ದೇವ ಬ್ಯಾಂಕ್, ಆತ್ಮಶಕ್ತಿ ಬ್ಯಾಂಕ್, ಮೂರ್ತೆದಾರರ ಸಹಕಾರಿ ಸಂಘ, ಯುವವಾಹಿನಿ, ನಾರಾಯಣ ಗುರು ಯುವವೇದಿಕೆ ಮಂಗಳೂರು, ಯುವವೇದಿಕೆ ಉಡುಪಿ, ನಾರಾಯಣ ಗುರು ವಿಚಾರ ವೇದಿಕೆ, ಬಿರುವೆರ್ ಕುಡ್ಲ, ಕರ್ನಾಟಕ, ಮಹಾರಾಷ್ಟ್ರ, ಗುಜರಾತ್,ಕೇರಳ ಸೇರಿ ದೇಶ ಮತ್ತು ವಿದೇಶಗಳ ಶೀ ನಾರಾಯಣ ಗುರು ಸಂಘ, ಬಿಲ್ಲವ ಸಂಘಗಳು, ಬಿಲ್ಲವ ಮಹಿಳಾ ಸಂಘಟನೆಗಳು, ಮತ್ತಿತರ ಸಂಘಟನೆಗಳು ಈ ಸಮಾವೇಶದ ಮುಂದಾಳುತ್ವವನ್ನು ವಹಿಸಲಿದೆ.
ಶ್ರೀ ನಾರಾಯಣ ಗುರುಗಳು ಪ್ರತಿಷ್ಠಾಪಿಸಿರುವ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರವು, ಅವರ ಆಶಯದಂತೆ ಜಾತಿ ಭೇಧ, ಮತ ದ್ವೇಷ ಏನೂ ಇಲ್ಲದೆ ಸರ್ವರೂ ಸಹೋದರತ್ವ ದಿಂದ ಬಾಳುವ ಮಾತೃಕ ಸ್ಥಾನವಾಗಿ ರೂಪುಗೊಂಡಿದೆ. ಪ್ರತಿಯೊಬ್ಬರೊಳಗಿನ ದೈವೀಕತೆಯ ಅರಿವನ್ನು ಮೂಡಿಸುವ ಧಾರ್ಮಿಕ ಕೇಂದ್ರವಾಗಿರುವ ಈ ಕ್ಷೇತ್ರದ ಆಶಯವನ್ನು ಮುಂದುವರಿಸುತ್ತಾ, ಈ ಮೂಲಕ ಜನ ಸಾಮಾನ್ಯರು ಮಾನಸಿಕ, ಧಾರ್ಮಿಕ, ಆರ್ಥಿಕ, ಔದ್ಯೋಗಿಕ, ಶೈಕ್ಷಣಿಕ ಮತ್ತು ಸಾಂಸ್ಕೃತಿಕವಾಗಿ ಶಕ್ತಿ ಸಂಪನ್ನರಾದರೆ ಅವರ ಜೀವನ ಮೌಲ್ಯಯುತವಾಗುವುದು ಎನ್ನುವ ಸತ್ಯವನ್ನು ಮನಗಂಡು ದೇವಸ್ಥಾನದ ಮೂಲಕ ಸಮಾಜಕ್ಕೆ ಹೊಸ ಚೇತನ ಮತ್ತು ಆಯಾಮಗಳನ್ನು ಒದಗಿಸಲು ಶ್ರೀ ನಾರಾಯಣ ಗುರುಗಳ ಅನುಯಾಯಿಗಳ ಸಮಾವೇಶವನ್ನು ಸಂಘಟಿಸಲಾಗುತ್ತಿದೆ. ಸಮಾಜದಲ್ಲಿ ಬ್ರಹ್ಮಶ್ರೀ ನಾರಾಯಣಗುರುಗಳ ಚಿಂತನೆ, ಸಂಘಟನೆ, ಗುರುಗಳ ಮೂಲತತ್ವದ ಅನುಷ್ಠಾನದ ಜಾಗೃತಿ ಈ ಕಾರ್ಯಕ್ರಮದ ಹಿಂದಿನ ಆಶಯವಾಗಿದೆ. ಹಿಂದುಳಿದ ವರ್ಗದ ಎಲ್ಲ ಗಣ್ಯರು, ನಾಯಕರು, ಸಂಘಟನೆಗಳು, ಪ್ರಮುಖರು ಭಾಗವಹಿಸಲಿದ್ದಾರೆ. ಸಮಾವೇಶದಲ್ಲಿ ಗುರುಗಳ ಅನುಯಾಯಿಗಳು 1ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಸೇರುವ ನಿರೀಕ್ಷೆಯಿದೆ ಎಂದು ಪದ್ಮರಾಜ್ ತಿಳಿಸಿದ್ದಾರೆ.
ಈ ಕುರಿತಂತೆ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಅಧ್ಯಕ್ಷ – ಜೈರಾಜ್ ಸೋಮಸುಂದರಂ ಹಾಗೂ ಕೋಶಾಧಿಕಾರಿ ಪದ್ಮರಾಜ್ ಆರ್ ಪೂಜಾರಿ ಅವರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಕುದ್ರೋಳಿ ದೇವಸ್ಥಾನದ ಟ್ರಸ್ಟಿ ಸಂತೋಶ್ ಪೂಜಾರಿ, ರಾಷ್ಟ್ರೀಯ ಬಿಲ್ಲವರ ಮಹಾ ಮಂಡಲದ ಅಧ್ಯಕ್ಷ ಸೂರ್ಯಕಾಂತ್ ಜೆ ಸುವರ್ಣ, ಅಖಿಲ ಭಾರತ ಬಿಲ್ಲವರ ಯೂನಿಯನ್ ಅಧ್ಯಕ್ಷ ನವೀನ್ ಚಂದ್ರ ಡಿ ಸುವರ್ಣ, ರಾಷ್ಟ್ರೀಯ ಬಿಲ್ಲವರ ಮಹಾ ಮಂಡಲ ಉಪಾಧ್ಯಕ್ಷ ಶಂಕರ್ ಪೂಜಾರಿ ಬಿ.ಎನ್. ಬಿಲ್ಲವ ಸಮಾಜ ಸೇವಾ ಸಂಘ ಅಧ್ಯಕ್ಷ ಅಶೋಕ್ ಪೂಜಾರಿ ಬೀಜಾಡಿ, ಕಂಕನಾಡಿ ಗರಡಿ ಕ್ಷೇತ್ರದ ಅಧ್ಯಕ್ಷ ಚಿತ್ತರಂಜನ್ ಕಂಕನಾಡಿ, ಗೆಜ್ಜೆಗಿರಿ ಕ್ಷೇತ್ರದ ಅಧ್ಯಕ್ಷ ರವಿಪೂಜಾರಿ ಚಿಲಿಂಬಿ, ನಾರಾಯಣ ಗುರು ನಿಗಮದ ಅಧ್ಯಕ್ಷ ಮಂಜುನಾಥ ಪೂಜಾರಿ, ಯುವವಾಹಿನಿ(ರಿ) ಕೇಂದ್ರ ಸಮಿತಿ ಅಧ್ಯಕ್ಷ ಲೋಕೇಶ್ ಕೋಟ್ಯಾನ್, ಬಿರುವೆರ್ ಕುಡ್ಲ ಅಧ್ಯಕ್ಷ ಉದಯ ಪೂಜಾರಿ, ಪುತ್ತೂರು ಬಿಲ್ಲವ ಸಂಘ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿ, ಬಂಟ್ವಾಳ ಬಿಲ್ಲವ ಸಂಘದ ಅಧ್ಯಕ್ಷ ಭುವನೇಶ್ ಪಚ್ಚಿನಡ್ಕ, ರಾಜ್ಯ ಧಾರ್ಮಿಕ ಪರಿಷತ್ ಮಾಜಿ ಸದಸ್ಯ ಪದ್ಮನಾಭ ಕೋಟ್ಯಾನ್, ಗೋಕರ್ಣನಾಥ ಬ್ಯಾಂಕ್ ಅಧ್ಯಕ್ಷ ಚಂದ್ರ ಶೇಖರ್ ಕಾವೂರು, ಆತ್ಮಶಕ್ತಿ ಬ್ಯಾಂಕ್ ಅಧ್ಯಕ್ಷ ಚಿತ್ತರಂಜನ್ ಬೋಳಾರ್, ದೇವಸ್ಥಾನದ ಅಭಿವೃದ್ಧಿ ಸಮಿತಿಯ ಲೀಲಾಕ್ಷ ಕರ್ಕೇರ ಮುಂತಾದ ಪ್ರಮುಖರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.





























































