ಬೆಂಗಳೂರು: ಕೃಷಿಕಾಯ್ದೆ ವಿರೋಧಿಸಿ ಸುದೀರ್ಘ ಹೋರಾಟ ನಡೆಸುತ್ತಿರುವ ಕೃಷಿ ಸಂಘಟನೆಗಳು ಇಂದು ಭಾರತ್ ಬಂದ್‌ಗೆ ಕರೆ ನೀಡಿವೆ. ಕೇಂದ್ರ ಸರ್ಕಾರದ ವಿರುದ್ದದ ಬಂದ್ ಕರೆ ಇದಾಗಿದ್ದರಿಂದಾಗಿ ವಿರೋಧ ಪಕ್ಷಗಳು ಸಹಜವಾಗಿಯೇ ಬಂದ್ ಬೆಂಬಲಿಸಿವೆ. ಆದರೆ ಈ ಬಂದ್‌ಗೆ ಸಾರ್ವಜನಿಕ ವಲಯದಲ್ಲಿ ಬೆಂಬಲ ವ್ಯಕ್ತವಾಗಿಲ್ಲ. ಹಾಗಾಗಿ ಭಾರತ ಬಂದ್ ಪ್ರತಿಭಟನೆಗಷ್ಟೇ ಸೀಮಿತವಾಗಿದೆ.
ಕಲಬುರ್ಗಿಯಲ್ಲಿ ಸಂಯುಕ್ತ ಕಿಸಾನ್ ಮೋರ್ಚಾಕರೆ ನೀಡಿರುವ ಭಾರತ್ ಬಂದ್‌ಗೆ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಬೆಂಬಲ ಘೋಷಿಸಿದೆ. ಪ್ರತಿಭಟನೆಯಲ್ಲಿ ಎಐಟಿಯುಸಿ, ಸಿಐಟಿಸಿ, ಎಐಯುಟಿಯುಸಿ, ಐಎನ್ಟಿಯುಸಿ, ಎನ್ಸಿಲ್ ಸಂಘಟನೆಗಳ ಕಾರ್ಯಕರ್ತರೂ ಭಾಗಿಯಾಗಿದ್ದಾರೆ. ಎನ್ ಸಿ ಎಲ್ ಜಿಲ್ಲಾ ಘಟಕದ ಅಧ್ಯಕ್ಷ ಶಂಕರ ಕಟ್ಟಿಸಂಗಾವಿ ನೇತೃತ್ವದಲ್ಲಿ ಸರಣಿ ಪ್ರತಿಭಟನೆಗಳು ನಡೆದಿವೆ.
ಒತ್ತಾಯಗಳು
- ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾಯ್ದೆಗಳು, ವಿದ್ಯುತ್ ಕಾಯ್ದೆಗಳನ್ನು ವಾಪಸ್ ಪಡೆಯಬೇಕು.
- ಸಾರ್ವಜನಿಕ ಸಂಸ್ಥೆಗಳನ್ನು ಖಾಸಗೀಕರಣ ಮಾಡುವುದನ್ನು ಕೈಬಿಡಬೇಕು.
- ಕೃಷಿ ಕಾಯ್ದೆಗಳು ಮತ್ತು ವಿದ್ಯುತ್ ಕಾಯ್ದೆ ತಿದ್ದುಪಡಿ ಹಾಗೂ ಸಾರ್ವಜನಿಕ ಸಂಸ್ಥೆಗಳ ಖಾಸಗೀರಣ ವಿರೋಧಿಸಿ ಕಳೆದ 9 ತಿಂಗಳಿಂದ ರೈತರು ಹೋರಾಡುತ್ತಿದ್ದಾರೆ. ಹೋರಾಟದ ನಿರ್ಣಾಯಕ ಘಟ್ಟ ಎನ್ನುವಂತೆ ಭಾರತ ಬಂದ್.
ಎನ್.ಡಿ.ಎ ಎರಡನೇ ಆಡಳಿತಾವಧಿಯಲ್ಲೂ ಜನಸಾಮಾನ್ಯರ ಹಿತವನ್ನು ಸಂಪೂರ್ಣವಾಗಿ ಕಡೆಗಣಿಸಿದೆ. ಕೊರೊನಾದಿಂದ ಇಡೀ ದೇಶದ ಜನ ತತ್ತರಿಸಿದ ಸಂದರ್ಭದಲ್ಲೂ ಸರ್ಕಾರ ಕಾರ್ಪೊರೇಟ್ ಸಂಸ್ಥೆಗಳ ಹಿತ ಕಾಯಲು ನಿಂತಿದೆಯೇ ವಿನಃ ಬಡವರ ಕಷ್ಟಗಳನ್ನು ಪರಿಹರಿಸಲಿಲ್ಲ ಎಂದು ಎನ್ ಸಿ ಎಲ್ ಜಿಲ್ಲಾ ಘಟಕದ ಅಧ್ಯಕ್ಷ ಶಂಕರ ಕಟ್ಟಿಸಂಗಾವಿ ಆರೋಪಿಸಿದರು.
ದೇಶದ ಜನರ ತೆರಿಗೆ ಹಣದಿಂದ ಕಟ್ಟಿದ ಸಾರ್ವಜನಿಕ ಸಂಪನ್ಮೂಲಗಳನ್ನು ತನಗೆ ಬೇಕಾದ ಕಾರ್ಪೊರೇಟ್ ಕುಳಗಳ ಕೈವಶ ಮಾಡುವುದಕ್ಕೆ ನಾವು ಬಿಡುವುದಿಲ್ಲ. ಪ್ರಧಾನಿ ಮೋದಿ ಘೋಷಿಸಿದ ‘ರಾಷ್ಟ್ರೀಯ ನಗದೀಕರಣ ಯೋಜನೆ’ಯನ್ನು ನಮ್ಮ ವೇದಿಕೆ ಉಗ್ರವಾಗಿ ಖಂಡಿಸುತ್ತದೆ’ ಎಂದು ಅವರು ಹೇಳಿದರು.