ಬೆಂಗಳೂರು: ರಾಜ್ಯದಲ್ಲಿ ಮೂಡಾ ಹಗರಣ ಮುಂದಿಟ್ಟು ಪ್ರತಿಪಕ್ಷಗಳು ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಹೋರಾಟಕ್ಕಿಳಿದಿದ್ದಾರೆ, ಇದಕ್ಕೆ ಪ್ರತಿಯಾಗಿ ‘ಭಾರತ್ ಅಕ್ಕಿ’ ವಿವಾದವನ್ನು ಕಾಂಗ್ರೆಸ್ ಪಕ್ಷ ಮುಂದಿಟ್ಟಿದೆ.
ರಾಜ್ಯಕ್ಕೆ ಎಂಆರ್‌ಪಿ ದರದಲ್ಲಿ 29 ರೂ.ಗೆ ಕೆಜಿ ಭಾರತ್ ಅಕ್ಕಿ ಮಾರಾಟವನ್ನು ಕೇಂದ್ರ ಸರ್ಕಾರ ಸ್ಥಗಿತಗೊಳಿಸಿದೆ ಎಂದು ಆರೋಪಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರದ ಈ ನಿಲುವಿನ ವಿರುದ್ಧ ಪ್ರತಿಭಟನೆ ನಡೆಸಲಾಗುವುದು ಎಂದು ಟೀಕಿಸಿದ್ದಾರೆ.
ವಿಧಾನಸೌಧದಲ್ಲಿ ಮಾಜಿ ಉಪಪ್ರಧಾನಿ ಬಾಬು ಜಗಜೀವನ್ ರಾಂ ಅವರ ಪುಣ್ಯತಿಥಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಕೇಂದ್ರ ಸರ್ಕಾರ ಭಾರತ್ ಅಕ್ಕಿ ಮಾರಾಟ ಸ್ಥಗಿತಗೊಳಿಸಿದೆ. ಅಕ್ಕಿ ದಾಸ್ತಾನು ಇದ್ದರೂ ನೀಡುತ್ತಿಲ್ಲ ಎಂದರೆ ಅದು ರಾಜಕೀಯ ಎಂದು ಆರೋಪಿಸಿದರು.
ಚುನಾವಣೆ ಕಾರಣಕ್ಕಾಗಿ ಭಾರತ್ ಅಕ್ಕಿ ಮಾರಾಟ ಮಾಡಿ, ಚುನಾವಣೆ ನಂತರ ನಿಲ್ಲಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದ ಅವರು, ನಾವು ಅಕ್ಕಿ ಖರೀದಿಸಲು ಸಿದ್ಧರಿದ್ದರೂ ಕೇಂದ್ರ ಸರ್ಕಾರ ಉದ್ದೇಶಪೂರ್ವಕವಾಗಿ ಕರ್ನಾಟಕಕ್ಕೆ ಅಕ್ಕಿ ನೀಡುತ್ತಿಲ್ಲ. ಕೇಂದ್ರ ಸರ್ಕಾರ ದಲಿತರು, ಬಡವರು ಮತ್ತು ಹಿಂದುಳಿದವರ ಜೊತೆ ಇಲ್ಲ ಎಂಬುದು ಸ್ಪಷ್ಟವಾಗಿದೆ ಎಂದರು.