ಶಿವಮೊಗ್ಗ: ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟವಾಗಿದ್ದು ಈ ಬಾರಿ ರಾಜ್ಯದಲ್ಲಿ ಶೇ.83.89 ರಷ್ಟು ಫಲಿತಾಂಶ ಬಂದಿದೆ. ಈ ಬಾರಿ ಗ್ರಾಮೀಣ ವಿದ್ಯಾರ್ಥಿಗಳು ಹೆಚ್ಚಿನ ಅಂಕಗಳೊಂದಿಗೆ ತೇರ್ಗಡೆಯಾಗಿದ್ದು ಬಹುಪಾಲು Rankಗಳೂ ಗ್ರಾಮೀಣ ಪ್ರತಿಭೆಗಳ ಪಾಲಾಗಿವೆ. ಇವರ ಪೈಕಿ ಭದ್ರಾವತಿಯ ಎಸ್.ಜೆ. ಶೈನೀ ಆಂಜೆಲ್ ಇಡೀ ರಾಜ್ಯಕ್ಕೆ ಐದನೇ ಸ್ಥಾನ ಗಿಟ್ಟಿಸಿಕೊಂಡಿದ್ದು, ಈಕೆಗೆ ಅಭಿನಂದನೆಯ ಮಹಾಮಳೆಯಾಗುತ್ತಿದೆ.
ರಾಜ್ಯದ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲೂ ವಿದ್ಯಾರ್ಥಿನಿಯರದ್ದೇ ಮೇಲುಗೈ. ಶೇ.87.87ರಷ್ಟು ವಿದ್ಯಾರ್ಥಿನಿಯರು ತೇರ್ಗಡೆಯಾಗಿದ್ದು, ಅಗ್ರ ಸ್ಥಾನಗಳಲ್ಲಿ ಉತ್ತೀರ್ಣರಾಗಿರುವ ಮಕ್ಕಳ ಪಾಳಯದಲ್ಲಿ ಸಂಭ್ರಮ ಮನೆಮಾಡಿದೆ. ಈ ಪೈಕಿ ಹಳ್ಳಿ ಹುಡುಗಿಯರನೇಕರು ರ್ಯಾಂಕ್ ಗಳಿಸಿರುವುದು ಅಚ್ಚರಿಯ ಸಂಗತಿ. ಪ್ರತಿಭಾನ್ವಿತ ವಿದ್ಯಾರ್ಥಿನಿಯರ ಪೈಕಿ ಭದ್ರಾವತಿಯ ಎಸ್.ಜೆ. ಶೈನೀ ಆಂಜೆಲ್ ಅವರ ಅಂಕ ಗಳಿಕೆ ಗಮನಾರ್ಹ.
ಭದ್ರಾವತಿ ಪೇಪರ್ ಟೌನ್ ನಿವಾಸಿಗಳಾದ ಜಾನಿ ಎಸ್ ಹಾಗೂ ಲಿಲ್ಲಿ ಗ್ರೇಸ್ ಅವರ ಪುತ್ರಿಯಾಗಿರುವ ಎಸ್.ಜೆ.ಶೈನೀ ಆಂಜೆಲ್, ಭದ್ರಾವತಿ ನ್ಯೂ ಟೌನ್‌ನಲ್ಲಿರುವ ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್‌ನ ಎಸ್.ಎ.ವಿ.ಹೈಸ್ಕೂಲ್‌ನ ವಿದ್ಯಾಥಿನಿ. ಈ ಬಾರಿಯ ಎಸ್ಸೆಸ್ಸೆಲ್ಸಿಯಲ್ಲಿ ಈಕೆ ಒಟ್ಟು 621 ಅಂಕಗಳಿಸಿ ರಾಜ್ಯದಲ್ಲಿ 5ನೇ Rank ಪಡೆದಿದ್ದಾಳೆ. ಪ್ರಥಮ ಭಾಷೆಯಲ್ಲಿ 125 ಅಂಕ ಗಳಿಸಿದರೆ, ಮೂರು ವಿಷಯಗಳಲ್ಲಿ ತಲಾ 100 ಅಂಕಗಳನ್ನು ಪಡೆದಿದ್ದಾಳೆ. ಎರಡು ವಿಷಯಗಳಲ್ಲಿ 99 ಅಂಕ ಪಡೆದಿದ್ದಾಳೆ.
ಎಸ್.ಜೆ. ಶೈನೀ ಆಂಜೆಲ್ ಐದನೇ Rank ಪಡೆದಿರುವ ಹಿನ್ನೆಲೆಯಲ್ಲಿ ಭದ್ರಾವತಿಯ ಎಸ್.ಎ.ವಿ.ಹೈಸ್ಕೂಲ್‌ನಲ್ಲಿ ಸಂಭ್ರಮದ ವಾತಾವರಣ ಕಂಡುಬರುತ್ತಿದೆ. ರಾಂಕ್ ವಿಜೇತ ಎಸ್.ಜೆ. ಶೈನೀ ಆಂಜೆಲ್‌ಗೆ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ.
ಈ ಕುರಿತಂತೆ ಸಂತಸ ಹಂಚಿಕೊಂಡಿರುವ ಶಾಲೆಯ ಶಿಕ್ಷಕರು, ಎಸ್.ಜೆ.ಶೈನೀ ಆಂಜೆಲ್ ತಮ್ಮ ಶಾಲೆಯ ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದಾಳೆ ಎಂದಿದ್ದಾರೆ.