ದೊಡ್ಡಬಳ್ಳಾಪುರ: ಮೇ.10 ರಂದು ನಡೆಯಲಿರುವ ಮತದಾನ ಪ್ರಕ್ರಿಯೆಗೆ ತಾಲ್ಲೂಕು ಚುನಾವಣಾಧಿಕಾರಿ ಕಾರ್ಯಾಲಯದದಿಂದ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಸದ್ಯ ಯಾವುದೇ ಸಮಸ್ಯೆ, ದೂರುಗಳಾಗಲಿ ಇಲ್ಲ ಎಂದು ಚುನಾವಣಾಧಿಕಾರಿ ತೇಜಸ್ ಕುಮಾರ್ ತಿಳಿಸಿದ್ದಾರೆ.
ದೊಡ್ಡಬಳ್ಳಾಪುರದ ಚುನಾವಣಾಧಿಕಾರಿ ಕಾರ್ಯಾಲಯದಲ್ಲಿ ಸುದ್ದಿಗಾರರಿಗೆ ಮಾಹಿತಿ ಒದಗಿಸಿದ ಅವರು, ಶಾಂತಿಯುತ, ನ್ಯಾಯಸಮ್ಮತ, ಪಾರದರ್ಶಕ ಚುನಾವಣೆ ನಡೆಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 2,14,182 ಮತದಾರರು ಇದ್ದು, ಅದರಲ್ಲಿ ಪುರುಷರ ಮತದಾರರ ಸಂಖ್ಯೆ 1,06,621, ಮಹಿಳಾ ಮತದಾರರ ಸಂಖ್ಯೆ 1,07,559, ಇತರೆ ಮತದಾರರು ಇಬ್ಬರು ಇದ್ದಾರೆ ಎಂದರು.
ಕ್ಷೇತ್ರದಲ್ಲಿ ಒಟ್ಟು 276 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಕಣದಲ್ಲಿ ಒಟ್ಟು 12 ಅಭ್ಯರ್ಥಿಗಳು ಸ್ಪರ್ಧೆಗಿಳಿದಿದ್ದಾರೆ. ಕ್ಷೇತ್ರಕ್ಕೆ 359 ವಿವಿಪ್ಯಾಟ್ ಗಳನ್ನು ತರಿಸಲಾಗಿದೆ. ಮಂಗಳವಾರ ಮಧ್ಯಾಹ್ನ 3 ಗಂಟೆ ಬಳಿಕ ಆಯಾ ಮತಗಟ್ಟೆಗಳ ನಿಯೋಜಿತ ಸಿಬ್ಬಂದಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸ್ಟ್ರಾಂಗ್ ರೂಂ ಬಳಿಗೆ ಆಗಮಿಸಿ ವಿವಿಪ್ಯಾಟ್ ಸೇರಿದಂತೆ ಇತರ ಚುನಾವಣಾ ಸಾಮಗ್ರಿಗಳನ್ನು ತೆಗೆದುಕೊಂಡು ಹೋಗಲಿದ್ದಾರೆ ಎಂದವರು ವಿವರಿಸಿದರು.
ಒಟ್ಟು 58 ಸೇವಾ ಮತದಾರರಿದ್ದು , ಈ ಮತದಾರರಿಗೆ ಇಟಿಪಿಬಿಎಸ್ ತಂತ್ರಾಂಶದ ಮುಖಾಂತರ ವಿದ್ಯುನ್ಮಾನ ಮತಪತ್ರಗಳನ್ನು ರವಾನಿಸಲಾಗಿರುತ್ತದೆ. ತಂತ್ರಾಂಶ ಮೂಲಕ ಮತ ಚಲಾಯಿಸಲಿದ್ದಾರೆ. ಸಾರಿಗೆ ವ್ಯವಸ್ಥೆಗಾಗಿ ಒಟ್ಟು 58 ರೂಟ್ ಗಳನ್ನು ಗುರುತಿಸಲಾಗಿದ್ದು, ಬಸ್ ವ್ಯವಸ್ಥೆ ಮಾಡಲಾಗಿದೆ. ನಿಯೋಜಿತ 1,254 ಮಂದಿ ಸಿಬ್ಬಂದಿಗಳಿಗೆ ಯಾವುದೇ ಸಮಸ್ಯೆ ಇಲ್ಲದಂತೆ ಪ್ರತಿಯೊಂದನ್ನು ಒದಗಿಸಲಾಗಿದೆ. ಆಯಾ ಬೂತ್ ಗಳ ಮಾಹಿತಿಯನ್ನು ಬಿಎಲ್ ಓಗಳು ನೀಡಲಿದ್ದಾರೆ ಎಂದರು.
ಮನೆಯಿಂದ ಮತದಾನ ಮಾಡಿದ 80 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಹಾಗೂ ವಿಕಲಚೇತನರು 220 ಮಂದಿ ನೋಂದಾಯಿಸಿಕೊಂಡಿದ್ದರು. 215 ಮಂದಿ ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ ಎಂದು ತಿಳಿಸಿದರು. ಕ್ಷೇತ್ರದಲ್ಲಿ 5 ಸಖಿ ಬೂತ್, 2 ಮಾದರಿ ಮತಗಟ್ಟೆ, ಒಂದು ಪಿಡಬ್ಲೂಡಿ ಮತಗಟ್ಟೆ, ಒಂದು ಎಥ್ನಿಕ್ ಮತಗಟ್ಟೆಯನ್ನು ರಚಿಸಲಾಗಿದೆ. ಮೇ.10ರಂದು ಬೆಳಗ್ಗೆ 5:30ಕ್ಕೆ ಅಣಕು ಮತದಾನ ಆರಂಭಿಸಲಾಗುವುದು, ಮತದಾನ ಕಾರ್ಯವನ್ನು ಬೆಳಗ್ಗೆ 7ರಿಂದ ಸಂಜೆ 6ಗಂಟೆಯವರೆಗೆ ನಿಗದಿಪಡಿಸಲಾಗಿದೆ ಎಂದರು.
ಮೇ.13ರಂದು ಮತ ಎಣಿಕೆ ಪ್ರಕ್ರಿಯೆ ನಡೆಯಲಿದ್ದು, ಮತದಾನ ಎಣಿಕೆ ಕಾರ್ಯವನ್ನು ದೇವನಹಳ್ಳಿ ಟೌನಿನ ಆಕಾಶ್ ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿ ಮಾಡಲಾಗುವುದು. ಮತ ಎಣಿಕೆ ಕೇಂದ್ರದಲ್ಲಿ ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಮತ ಎಣಿಕೆ ಕಾರ್ಯಕ್ಕಾಗಿ ಒಟ್ಟು 14 ಟೇಬಲ್ ಗಳನ್ನು ನಿಗದಿಪಡಿಸಲಾಗಿದ್ದು ಪ್ರತಿ ಟೇಬಲ್ ಗೆ ಒಬ್ಬರಂತೆ ಮತ ಎಣಿಕೆ ಏಜೆಂಟರನ್ನು ನೇಮಿಸಲಾಗಿದೆ ಎಂದರು.
ಚುನಾವಣಾ ಪ್ರಚಾರ ಸಂಜೆ ಅಂತ್ಯಗೊಂಡಿದೆ. ಕಡ್ಡಾಯವಾಗಿ ನೀತಿ ಸಂಹಿತೆ ಪಾಲನೆಗೆ ರಾಜಕೀಯ ಪಕ್ಷಗಳ ಎಲ್ಲಾ ನಾಯಕರಿಗೆ ತಿಳಿಸಲಾಗಿದೆ. ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳ ಮೇಲೆ ಚುನಾವಣಾ ಸಿಬ್ಬಂದಿ ಹದ್ದಿನ ಕಣ್ಣು ಇರಿಸಿದ್ದಾರೆ ಎಂದರು.
ಇದೇ ವೇಳೆ, ಎರಡು ದಿನಗಳ ಹಿಂದೆ ಕ್ಷೇತ್ರಾದ್ಯಂತ ಸದ್ದು ಮಾಡಿದ್ದ ಕ್ಯೂಆರ್ ಕೋಡ್ ಪ್ರಕರಣ ಸೈಬರ್ ಠಾಣೆಗೆ ವರ್ಗಾವಣೆ ಆಗಿದೆ. ತನಿಖೆ ಪ್ರಗತಿಯಲ್ಲಿದೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಸಹಾಯಕ ಚುನಾವಣಾಧಿಕಾರಿ ಮೋಹನಕುಮಾರಿ ಇದ್ದರು.