ಬೆಂಗಳೂರು: ಸಿಲಿಕಾನ್ ಸಿಟಿ ಹಾಗೂ ಸಾಂಸ್ಕೃತಿಕ ನಗರಿಯನ್ನು ಸಂಪರ್ಕಸುವ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇನಲ್ಲಿ ಸಂಭವಿಸುತ್ತಿರುವ ಅಪಘಾತಗಳು ವ್ಯವಸ್ಥೆಗೆ ಸವಾಲೆಂಬಂತಾಗಿದೆ. ಈ ನಿಟ್ಟಿನಲ್ಲಿ, ಅಪಘಾತ ನಿಯಂತ್ರಣ ಉದ್ದೇಶದಿಂದ ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್ ವೇನಲ್ಲಿ ವಾಹನಗಳ ವೇಗದ ಮಿತಿಯನ್ನು ಗಂಟೆಗೆ 80ರಿಂದ 100 ಕಿಲೋಮೀಟರ್‌ಗೆ ಸೀಮಿತಗೊಳಿಸಲಾಗಿದೆ.
ಈ ವೇಗದ ಮಿತಿ ನಿಯಮ ಜಾರಿಗೆ ಬಂದಿದ್ದರೂ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇನಲ್ಲಿ ವಾಹನಗಳ ವೇಗಕ್ಕೆ ಅಂಕುಶ ಹಾಕಲು ಸಾಧ್ಯವಾಗುತ್ತಿಲ್ಲ. ಈ ನಡುವೆ ಕಾರ್ಯಾಚರಣೆಯ ಅಖಾಡಕ್ಕೆ ಧುಮುಕಿರುವ ಪೊಲೀಸರು, ಈ ತಿಂಗಳಲ್ಲಿ ಅತಿವೇಗದ ಚಾಲನೆ ಆರೋಪದಲ್ಲಿ 2,000ಕ್ಕೂ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ.
ಈ ಮಧ್ಯೆ ಇದೀಗ, ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇನಲ್ಲಿ ಲಘು ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ. ಬೈಕ್, ಆಟೋ ಸೇರಿ ಕೆಲವು ವಾಹನಗಳ ಸಂಚಾರವನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಿಷೇಧಿಸಿ ಆದೇಶಿಸಿದೆ.
ಜುಲೈ 12ರಂದೇ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಬೈಕ್, ಆಟೋ, ಟ್ರಾಕ್ಟರ್ ಹಾಗೂ ಇತರ ಸಣ್ಣ ವಾಹನಗಳ ಸಂಚಾರ ನಿರ್ಬಂಧಿಸಿ ಅಧಿಸೂಚನೆ ಹೊರಡಿಸಿದೆ.