ಬೆಳ್ತಂಗಡಿ: ನಮ್ಮನ್ನು ನಾವು ಅರಿತುಕೊಳ್ಳಲು ಮತ್ತು ಮನಸ್ಸಿನ ಮೇಲೆ ಹತೋಟಿ ಸಾಧಿಸಲು ಪ್ರಕೃತಿ ಚಿಕಿತ್ಸಾ ವಿಧಾನ ಅತ್ಯಂತ ಅನುಕೂಲಕಾರಿ ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾl ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ.
ಶಾಂತಿವನದಲ್ಲಿರುವ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃ ತಿ ಚಿಕಿತ್ಸಾ ಆಸ್ಪತ್ರೆಯಲ್ಲಿ ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ಪಂಚದಶ ವರ್ಷಾಚರಣೆಯ ಅಂಗವಾಗಿ ಸದಸ್ಯರಿಗಾಗಿ ಶನಿವಾರ ನಡೆದ ಪ್ರಕೃತಿಯ ಮಡಿಲಲ್ಲಿ ಎಂಬ ವಿಶೇಷ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ದೇವರು ನಮಗೆ ಸುಂದರವಾದ ದೇಹವನ್ನು ನೀಡಿದ್ದಾನೆ. ಅದನ್ನು ಯಾವ ರೀತಿ ಇಟ್ಟುಕೊಳ್ಳಬೇಕು ಎಂಬ ಬಗ್ಗೆಯೂ ನಮಗೆ ಮಾಹಿತಿ, ಮಾರ್ಗದರ್ಶನ ಇರಬೇಕಾಗುತ್ತದೆ. ಪರಿವರ್ತನಾ ಶೀಲವಾಗಿರುವ ನಮ್ಮ ದೇಹವನ್ನು ಅದರೊಳಗಿನ ಚೈತನ್ಯದ ಜಾಗೃತಿಗಾಗಿ ಪ್ರಕೃತಿ ಚಿಕಿತ್ಸೆಯನ್ನು ಪಡೆದುಕೊಳ್ಳಬೇಕಾದ ಅವಶ್ಯಕತೆ ಎಂದರು.
ಅತಿಥಿಗಳಾಗಿದ್ದ ದ.ಕ.ಜಿ.ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಅವರು, ಮುಂದಿನ ದಿನಗಳಲ್ಲಿ ಜಿಲ್ಲೆಯಾದ್ಯಂತ ಪ್ಲಾಸ್ಟಿಕ್ ಜಾಗೃತಿ ಕಾರ್ಯಕ್ರಮ ನಡೆಸುವ ಬಗ್ಗೆ ಮಾಹಿತಿ ನೀಡಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ಸಂಘದ ಅಧ್ಯಕ್ಷ ಧನಕೀರ್ತಿ ಆರಿಗ ಅವರು ಮುಂದಿನ ಒಂದು ವರ್ಷದಲ್ಲಿ ಪತ್ರಕರ್ತರ ಸಂಘದಿಂದ ನಡೆಸುವ15 ವಿಶೇಷ ಕಾರ್ಯಕ್ರಮಗಳ ಬಗ್ಗೆ ವಿವರ ನೀಡಿದರು.
ವೇದಿಕೆಯಲ್ಲಿ ಶಾಂತಿವನ ಟ್ರಸ್ಟ್ ಕಾರ್ಯದರ್ಶಿ ಸೀತಾರಾಮ ತೋಳ್ಪಡಿತ್ತಾಯ, ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆಯ ನಿರ್ದೇಶಕ ಡಾl ಐ.ಶಶಿಕಾಂತ ಜೈನ್, ಸ್ಥಾನೀಯ ವೈದ್ಯಾಧಿಕಾರಿ ಡಾl ಶಶಿಕಿರಣ್, ಆಡಳಿತಾಧಿಕಾರಿ ಜಗನ್ನಾಥ ಉಪಸ್ಥಿತರಿದ್ದರು.
ಪತ್ರಕರ್ತರ ಸಂಘದ ಕಾರ್ಯದರ್ಶಿ ಚೈತ್ರೇಶ್ ಇಳಂತಿಲ ಸ್ವಾಗತಿಸಿದರು. ಜೊತೆಕಾರ್ಯದರ್ಶಿ ಅಶ್ರಫ್ ಆಲಿಕುಂಞ ಪ್ರಾಸ್ತಾವಿಸಿದರು, ಕೋಶಾಧಿಕಾರಿ ಪುಷ್ಪರಾಜ ಶೆಟ್ಟಿ ವಂದಿಸಿದರು. ಉಪಾಧ್ಯಕ್ಷ ಗಣೇಶ್ ಬಿ.ಶಿರ್ಲಾಲು ಕಾರ್ಯಕ್ರಮ ನಿರ್ವಹಿಸಿದರು.