ಬೆಳಗಾವಿ: ತೀವ್ರ ಕುತೂಹಲ ಕೆರಳಿಸಿದ್ದ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ರೋಚಕ ಜಯ ಸಾಧಿಸಿದೆ.
ಬೆಳಿಗ್ಗೆಯಿಂದಲೇ ಭಾರೀ ಪೈಪೋಟಿಯಲ್ಲಿದ್ದ ಬಿಜೆಪಿಯ ಮಂಗಳ ಅಂಗಡಿ ಹಾಗೂ ಕಾಂಗ್ರೆಸ್‌ನ ಸತೀಶ್ ಜಾರಕಿಹೊಳಿ ಮತಣಿಕೆಯ ಅಂತಿಮ ಕ್ಷಣದವರೆಗೂ ಎಲ್ಲರ ಗಮನ ಕೇಂದ್ರೀಕರಿಸುವಂತಿದ್ದರು. ಅಂತಿಮ ಹಂತದವರೆಗೂ ಹಾವು ಏಣಿಯಾಟದಂತೆ ಕಂಡುಬಂದ ಈ ಮತ ಎಣಿಕೆಯ ಪ್ರಕ್ರಿಯೆಯಲ್ಲಿ ಕ್ಲೈಮ್ಯಾಕ್ಸ್‌ನಲ್ಲಿ ವಿಜಯಮಾಲೆ ಬಿಜೆಪಿ ಅಭ್ಯರ್ಥಿಯ ಕೊರಳಿಗೆ ಬಿದ್ದಿದೆ.
ಆರಂಭದಲ್ಲಿ ಬಿಜೆಪಿ ಹುರಿಯಾಳು ಮಂಗಳ ಅಂಗಡಿ ಮುಂದಿದ್ದರು. ಅನಂತರ ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ ಮುನ್ನಡೆ ಸಾಧಿಸಿದರು. ಆದರೆ ಸುಮಾರು 50 ಸುತ್ತುಗಳು ಕ್ರಮಿಸುವಷ್ಟರಲ್ಲಿ ಸತೀಶ್ ಜಾರಕಿಹೊಳಿ ಭಾರೀ ಮುನ್ನಡೆ ಕಾಯ್ದುಕೊಳ್ಳುತ್ತಾ ಬಂದರು. ಆದರೆ ಬರಬರುತ್ತಾ ಅಂತರ ಕಡಿಮೆಯಾಗುತ್ತಾ ಬಂತು. ಈ ರೋಚಕ ಹಣಾಹಣಿ 75ನೇ ಸುತ್ತು ತಲುಪುವಷ್ಟರಲ್ಲಿ ಅಂತರ ಎರಡು ಸಾವಿರದ ಆಸುಪಾಸಿನಲ್ಲೇ ಸಾಗಿತು.ಅದಾಗಲೇ ಈ ಹಾವು-ಏಣಿಯಾಟಕ್ಕೆ ರೋಚಕತೆ ಬಂದದ್ದು.
- 81ನೇ ಸುತ್ತು ತಲುಪಿದಾಗ ಸತೀಶ್ ಜಾರಕಿಹೊಳಿ ಕೇವಲ 488 ಮತಗಳ ಮುನ್ನಡೆಯಷ್ಟೇ ಇದ್ದರು. ಅದಾಗಲೇ ಸುಮಾರು 26 ಸಾವಿರ ಮತಗಳ ಎಣಿಕೆ ಮಾತ್ರ ಬಾಕಿ ಇತ್ತು.
- 82ನೇ ಸುತ್ತಿನ ಎಣಿಕೆ ಮುಗಿಯುವ ಹೊತ್ತಿಗೆ ಈ ಅಂತರ 293ಕ್ಕೆ ಇಳಿಯಿತು.
- 83ನೇ ಸುತ್ತಿನ ಎಣಿಕೆ ಮುಗಿಯುವ ಹೊತ್ತಿಗೆ ಸತೀಶ್ ಜಾರಕಿಹೊಳಿ ಅವರು ಹಿನ್ನಡೆ ಕಂಡರು. ಆವರೆಗೂ ಭಾರೀ ಪೈಪೋಟಿ ನೀಡಿದ ಮಂಗಳ ಅಂಗಡಿ ಅವರು ದೀಢೀರನೆ ಬಾರಿ ಮತಗಳ ಮುನ್ನಡೆ ಸಾಧಿಸಿದರು. ಈ ಅಂತರ 3101ಕ್ಕೆ ತಲುಪಿತು.
- 84ನೇ ಸುತ್ತಿನ ಅಂತ್ಯದಲ್ಲಿ ಮಂಗಳಾ ಅಂಗಡಿಯವರ ಮುನ್ನಡೆ 3530ಕ್ಕೆ ತಲುಪಿತು.
- ಇನ್ನೇನು ಕೆಲವೇ ಸಾವಿರ ಮತಗಳ ಎಣಿಕೆ ಬಾಕಿ ಇರುವಾಗ ಮಂಗಳ ಅವರು 4123 ಮತಗಳ ಮುನ್ನಡೆ ಕಾಯ್ದುಕೊಂಡರು.
- ಮಂಗಳ ಅವರ ಮುನ್ನಡೆ ಮತಗಳು 86ನೇ ಸುತ್ತಿನ ಎಣಿಕೆ ಮುಗಿಯುವಷ್ಟರಲ್ಲಿ 2941ಕ್ಕೆ ಕುಸಿದು ಹಣಾಹಣಿಗೆ ಮತ್ತಷ್ಟು ರೋಚಕತೆ ಬಂತು.
ಆದರೆ ಅಂತಿಮ ಹಂತದಲ್ಲಿ ಸತೀಶ್ ಜಾರಕಿಹೊಳಿ ಸೋಲೊಪ್ಪಿಕೊಳ್ಳಲೇಬೇಕಾಯಿತು. ಟ್ವಿಸ್ಟ್ ಮೇಲೆ ಟ್ವಿಸ್ಟ್ ಸಿಗುತ್ತಲೇ ಸಾಗಿದ ರಣರೋಚಕ ಸ್ಪರ್ದೆಯಲ್ಲಿ ಬಿಜೆಪಿಯ ಮಂಗಳಾ ಅಂಗಡಿಯವರು ದಿಗ್ವಿಜಯದ ನಗೆ ಬೀರಿದರು.