ಬೆಂಗಳೂರು: ರಾಜಧಾನಿಯ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಯುವಕನೊಬ್ಬ ನಿಗೂಢವಾಗಿ ಸಾವನ್ನಪ್ಪಿದ ಪ್ರಕರಣಕ್ಕೆ ಇದೀಗ ಮರುಜೀವ ಸಿಕ್ಕಿದೆ. ಯುವಕನ ಸಾವಿನ ವಿಚಾರದಲ್ಲಿ ಆಸ್ಪತ್ರೆ ವೈದ್ಯರ ಬಗ್ಗೆಯೇ ಅನುಮಾನ ವ್ಯಕ್ತಪಡಿಸಿ ಮಾನವ ಹಕ್ಕು ಕಾರ್ಯಕರ್ತರು ಹೋರಾಟಕ್ಕೆ ಮುಂದಾಗಿದ್ದಾರೆ. ಈ ಸಂಬಂಧ ಆರೋಗ್ಯ ಸಚಿವರು ಸೇರಿದಂತೆ ಸರ್ಕಾರದ ಪ್ರಮುಖರಿಗೆ ಮಾನವ ಹಕ್ಕುಗಳ ಸಂಘಟನೆ ದೂರು ನೀಡಿದ್ದು ಆ ದೂರಿನ ಪ್ರತಿ ಉದಯ ನ್ಯೂಸ್‌ಗೆ ಲಬ್ಯವಾಗಿದೆ.
ದೂರಿನಲ್ಲಿ ಏನಿದೆ?
ಬೆಂಗಳೂರಿನ ಬಾಣಸವಾಡಿಯ ನಿವಾಸಿ ಮಹಮ್ಮದ್ ವಸೀಮ್ ಎಂಬ 19 ವರ್ಷದ ಯುವಕ 3-12-2020ರಂದು ಜ್ವರ ಹಿನ್ನೆಲೆಯಲ್ಲಿ ಹೆಬ್ಬಾಳ ಸಮೀಪದ ಆಸ್ಪತ್ರೆಗೆ ದಾಖಲಾಗಿದ್ದರು. ಅದಕ್ಕೂ ಮುನ್ನ ಸುಮಾರು 4 ತಿಂಗಳುಗಳಿಂದ ರಿಹಾಬ್ ಸೆಂಟರ್’ನಲ್ಲಿ ವಾಸವಿದ್ದ. ಈ ಯುವಕ ಇದ್ದಕ್ಕಿದ್ದಂತೆ ಅಸ್ವಸ್ಥಗೊಂಡಿದ್ದರಿಂದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ರಿಹಾಬ್ ಸೆಂಟರ್‌ನವರು ಹೇಳಿಕೊಂಡಿದ್ದಾರೆ. ಆಸ್ಪತ್ರೆಗೆ ದಾಖಲಾದ ಸಂದರ್ಭದಲ್ಲಿ ಸುಮಾರು 1 ಲಕ್ಷ ರೂಪಾಯಿಗಳನ್ನು ಮುಂಗಡವಾಗಿ ಪಾವತಿಸಲಾಗಿದ್ದು, ಸುಮಾರು 7 ಲಕ್ಷ ರೂಪಾಯಿಗಳನ್ನು ಔಷಧಿ ಸಂಭಂಧ ಪಾವತಿಸಲಾಗಿದೆ ಎಂದು ರಿಹಾಬ್ ಸೆಂಟರ್’ನವರು ಹೇಳಿಕೊಂಡಿದ್ದಾರೆ. ಈ ನಡುವೆ, 21.01.2021ರಂದು ಮಹಮ್ಮದ್ ವಸೀಮ್’ನ ಆರೋಗ್ಯ ಬಗ್ಗೆ ಸಂಬಂಧಿಕರು ಆಸ್ಪತ್ರೆಯ ವೈದ್ಯರನ್ನು ವಿಚಾರಿಸಿದಾಗ ರೋಗಿಯು ಚೇತರಿಸಿಕೊಂಡಿರುವುದಾಗಿ ಹೇಳಿಕೊಂಡಿದ್ದರು. ಆದರೆ ಮರುದಿನ ಅಂದರೆ 22.01.2021ರಂದು ಮಹಮ್ಮದ್ ವಸೀಮ್ ಮೃತಪಟ್ಟಿರುವುದಾಗಿ ಆಸ್ಪತ್ರೆ ಸಿಬ್ಬಂದಿ ಹೇಳಿದ್ದಾರೆ. ಈ ಬಗ್ಗೆ ಯುವಕನ ಸಂಬಂಧಿಕರು ಮಾನವ ಹಕ್ಕುಗಳ ಸಂಘಟನೆಯ ಪ್ರಮುಖರ ಮುಂದೆ ಹೇಳಿಕೊಂಡಿದ್ದಾರೆ. ಇದೇ ವೇಳೆ, ಯುವಕನ ಚಿಕಿತ್ಸಾ ವೆಚ್ಚ 26 ಲಕ್ಷ ರೂಪಾಯಿ ದಾಟಿದೆ ಎಂದೂ, ಮುಂಗಡ ಹಣ, ಹಾಗೂ ಡಿಸ್ಕೌಂಟ್ ಸೇರಿ ಅಲ್ಪ ಮೊತ್ತವನ್ನು ಕಳೆದು 16 ಲಕ್ಷ ರೂಪಾಯಿಗಳನ್ನು ಪಾವತಿಸುವಂತೆ ಯುವಕನ ಕುಟುಂಬ ಸದಸ್ಯರಿಗೆ ಆಸ್ಪತ್ರೆ ಅಧಿಕಾರಿಗಳು ಸೂಚಿಸಿದ್ದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕುಟುಂಬ ಸದಸ್ಯರು ಪೊಲೀಸರ ಮೊರೆ ಹೋದರು. ಯುವಕ ಕೊನೆಯುಸಿರೆಳೆದು ಸುಮಾರು 2 ದಿನಗಳ ನಂತರ ಬಿಲ್ ಮೊತ್ತವನ್ನು 75 ಸಾವಿರಕ್ಕೆ ಸೀಮಿತಗೊಳಿಸಿದ್ದಾರೆ. ಆ 75 ಸಾವಿರ ರೂಪಾಯಿಗಳ ಬಿಲ್ ಪಾವತಿಸಿದ ನಂತರವಷ್ಟೇ ಮೃತದೇಹವನ್ನು ಕುಟುಂಬ ಸದಸ್ಯರಿಗೆ ಹಸ್ತಾಂತರ ಮಾಡಲಾಗಿದೆ ಎಂಬುದು ದೂರುದಾರರ ಆರೋಪ.
ಈ ಬಗ್ಗೆ ಸಕಲ ಮಾಹಿತಿಯನ್ನು ಸ್ಥಳಕ್ಕೆ ಭೇಟಿ ನೀಡಿದ್ದ ಹೆಬ್ಬಾಳ ಠಾಣೆಯ ಪೊಲೀಸರು ಬರೆದುಕೊಂಡಿದ್ದಾರೆ ಎಂದು ಸರ್ಕಾರದ ಗಮನ ಸೆಳೆದಿರುವ ಭಾರತೀಯ ಮಾನವ ಹಕ್ಕುಗಳ ಸಂಘಟನೆಯ ಉಪಾಧ್ಯಕ್ಷ ಮಹಮ್ಮದ್ ರಫೀಕ್, ಆ ಯುವಕನ ಸಾವಿನ ಬಗ್ಗೆ ತನಿಖೆಯಾಗಬೇಕಿದೆ ಎಂದು ಒತ್ತಾಯಿಸಿದ್ದಾರೆ.
ಕೇವಲ ಜ್ವರ ಸಂಬಂಧಿ ಕಾಯಿಲೆಗೆ ದಾಖಲಾದ ಯುವಕನ ಚಿಕಿತ್ಸೆಗೆ ಅಷ್ಟೊಂದು ಬಿಲ್ ಮಾಡಿರುವುದು ಕಾನೂನುಬಾಹಿರ. ಒಂದು ವೇಳೆ ಉನ್ನತ ಮಟ್ಟದ ಚಿಕಿತ್ಸೆ ನೀಡಿದ್ದೇ ಆಗಿದ್ದಲ್ಲಿ ಬಿಲ್ ಮೇಲೆ 15 ಲಕ್ಷ ರೂಪಾಯಿಗಿಂತಲೂ ಹೆಚ್ಚಿನ ಮೊತ್ತವನ್ನು ಕೈಬಿಡುತ್ತಿರಲಿಲ್ಲ ಎಂದು ಅವರು ಈ ದೂರಿನಲ್ಲಿ ಸರ್ಕಾರದ ಗಮನಸೆಳೆದಿದ್ದಾರೆ.
ರೋಗಿಯೊಬ್ವರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದರೆ ನಿರ್ದಿಷ್ಟ ತಾಸುಗಳೊಳಗಾಗಿ ಸಂಬಂಧಪಟ್ಟ ವಾರಸುದಾರರಿಗೆ ಮೃತದೇಹವನ್ನು ಹಸ್ತಾಂತರಿಸಬೇಕೆಂಬ ಕಾನೂನು ಇದೆ. ಹೀಗಿದ್ದರೂ ಹಣಕ್ಕಾಗಿ ಬೇಡಿಕೆ ಇಟ್ಟು 2 ದಿನಗಳ ಕಾಲ ಶವವನ್ನು ಆಸ್ಪತ್ರೆಯವರು ಒತ್ತೆ ಇರಿಸಿಕೊಂಡಿದ್ದು ಅಮಾನವೀಯ ಎಂದಿರುವ ಮಹಮ್ಮದ್ ರಫೀಕ್, ಈ ಬಗ್ಗೆ ತನಿಖೆ ನಡೆಸುವಂತೆ ಸರ್ಕಾರವನ್ನು ಆಗ್ರಹಿಸಿದ್ದಾರೆ.