ಮಂಗಳೂರು: ಬಂಟ್ವಾಳ ತಾಲೂಕಿನ ಬರಿಮಾರ್ ಸಂತ ಜೋಸೆಫ್ ಚರ್ಚ್‌ನಲ್ಲಿ ಭ್ರಾತೃತ್ವದ ಭಾನುವಾರ ಹಾಗೂ ಪರಮಪ್ರಸಾದದ ಭವ್ಯ ಮೆರವಣಿಗೆ ಭಕ್ತಿಭಾವದಿಂದ ನಡೆಯಿತು.

ಈ ಸಂದರ್ಭದಲ್ಲಿ ನಡೆದ ಪವಿತ್ರ ಬಲಿ ಪೂಜೆಯನ್ನು ಮಂಗಳೂರು ಧರ್ಮಪ್ರಾಂತ್ಯದ ಎಸ್ಟೇಟ್ ವ್ಯವಸ್ಥಾಪಕರಾದ ವಂದನೀಯ ಸ್ವಾಮಿ ಮ್ಯಾಕ್ಸಿಮ್ ರೊಸಾರಿಯೊ ಅವರು ಪ್ರದಾನ ಧರ್ಮಗುರುಗಳಾಗಿ ನೆರವೇರಿಸಿದರು. ಬರಿಮಾರ್ ಚರ್ಚ್‌ನ ಧರ್ಮಗುರು ವಂದನೀಯ ಸ್ವಾಮಿ ಪ್ಯಾಟ್ರಿಕ್ ಸಿಕ್ವೇರಾ, ಹೈದರಾಬಾದ್ ಧರ್ಮಪ್ರಾಂತ್ಯದ ಸ್ವಾಮಿ ಸಿರಿಲ್ ಡಯಾಸ್ ಅವರು ಸಹ ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಬಲಿಪೂಜೆಯ ನಂತರ, ಪ್ರದಾನ ಧರ್ಮಗುರುಗಳು ಪವಿತ್ರ ಪ್ರಸಾದದ ಮಹತ್ವ ಹಾಗೂ ಭ್ರಾತೃತ್ವದ ಜೀವನ ಮೌಲ್ಯಗಳ ಕುರಿತು ಭಕ್ತರಿಗೆ ಮಾರ್ಮಿಕ ಸಂದೇಶ ನೀಡಿದರು. ಅವರು ಕ್ರೈಸ್ತ ಸಹೋದರತ್ವದ ಆಧ್ಯಾತ್ಮಿಕ ಅರ್ಥ ಹಾಗೂ ಸಾಮಾಜಿಕ ಏಕತೆಯ ಅಗತ್ಯವನ್ನು ವಿವರಿಸಿದರು.

ಈ ಭಕ್ತಿಪೂರ್ಣ ಕಾರ್ಯಕ್ರಮದ ಯಶಸ್ಸಿಗಾಗಿ ತಮ್ಮ ತನು, ಮನ, ಧನದ ಸೇವೆಯನ್ನು ನೀಡಿದ ಎಲ್ಲ ಭಕ್ತರಿಗೆ ಧನ್ಯವಾದಗಳನ್ನು ಅರ್ಪಿಸಲಾಯಿತು. ಧಾನಿಗಳಾದ ಸಹಾಯಕನ್ನು ಸನ್ಮಾನಿಸಿದ ಸನ್ನಿವೇಶ ಗಮನಸೆಳೆಯಿತು. ಚರ್ಚ್ ಆವರಣದಲ್ಲೇ ಪರಮಪ್ರಸಾದದ ಮೆರವಣಿಗೆ ನಡೆಯಿತು. ಕ್ಷೇತ್ರದ ಭಕ್ತರು ಶ್ರದ್ಧಾ-ಭಾವನೆಗಳಿಂದ ಭಾಗವಹಿಸಿದರು.



























































