ಬೆಂಗಳೂರು: ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹಿರಿಯ ವಿದ್ವಾಂಸ, ಬನ್ನಂಜೆ ಗೋವಿಂದಾಚಾರ್ಯ ವಿಧಿವಶರಾಗಿದ್ದಾರೆ. ವಯೋಸಹಜ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಭಾನುವಾರ ಮುಂಜಾನೆ ಉಡುಪಿ ಜಿಲ್ಲೆಯ ಅಂಬಲಪಾಡಿಯಲ್ಲಿ ನಿಧನರಾಗಿದ್ದಾರೆ.
ಮಾಧ್ವ ತತ್ವದಲ್ಲಿ ಅಪಾರ ಪಾಂಡಿತ್ಯ ಹೊಂದಿದ್ದ ಬನ್ನಂಜೆ ಗೋವಿಂದಾಚಾರ್ಯರು, ತಮ್ಮ ಪ್ರವಚನದ ಮೂಲಕ ದೇಶ ವಿದೇಶಗಳಲ್ಲಿ ಮನೆಮಾತಾಗಿದ್ದರು.
1936ರಲ್ಲಿ ಉಡುಪಿಯ ಅಂಬಲಪಾಡಿಯಲ್ಲಿ ಹುಟ್ಟಿದ ಗೋವಿಂದಾಚಾರ್ಯರು ಕನ್ನಡ ಮತ್ತು ಸಂಸ್ಕೃತ ಭಾಷೆಯಲ್ಲಿ ಅನೇಕ ಕೃತಿಗಳನ್ನೂ ರಚಿಸಿದ್ದಾರೆ. ವಿದ್ಯಾವಾಚಸ್ಪತಿ ಎಂದೇ ಗುರುತಾಗಿರುವ ಇವರನ್ನು 2009ರಲ್ಲಿ ಕೇಂದ್ರ ಸರ್ಕಾರ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತ್ತು.
ಕೆಲವು ದಿನಗಳ ಹಿಂದಷ್ಟೇ ಗೋವಿಂದಾಚಾರ್ಯರು ಪುತ್ರವಿಯೋಗಕ್ಕೊಳಗಾಗಿದ್ದರು. ಇದೀಗ ಬನ್ನಂಜೆ ಗೋವಿಂದಾಚಾರ್ಯರು ಕೂಡಾ 84ರ ಹರೆಯದಲ್ಲಿ ನಾಲ್ವರು ಪುತ್ರಿಯರನ್ನು ಅಗಲಿದ್ದಾರೆ.
ಗೋವಿಂದಾಚಾರ್ಯರ ನಿಧನಕ್ಕೆ
ಸಾಹಿತಿಗಳು, ಅಭಿಮಾನಿಗಳು ಸೇರಿದಂತೆ ಗಣ್ಯರನೇಕರು ಸಂತಾಪ ಸೂಚಿಸಿದ್ದಾರೆ.