ಬೆಂಗಳೂರು: ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ತಂದಿರುವ ವಿದ್ಯುತ್ ತಿದ್ದುಪಡಿ ಮಸೂದೆ ೨೦೨೧ ಅನ್ನು ವಿರೋಧಿಸಿ ಬೆಂಗಳೂರಿನ ಮೈಸೂರು ಬ್ಯಾಂಕ್ ವೃತ್ತ ಬಳಿ ಎಸ್‌ಯುಸಿಐ(ಸಿ) ವತಿಯಿಂದ ಪ್ರತಿಭಟನೆ ನಡೆಯಿತು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಎಸ್‌ಯುಸಿಐ(ಸಿ) ಬೆಂಗಳೂರು ಜಿಲ್ಲಾ ಕಾರ್ಯದರ್ಶಿ ಎಂ.ಎನ್.ಶ್ರೀರಾಮ್, “ಹಿಂದೆ ಇದ್ದಂತಹ ಕ್ರಾಸ್ – ಸಬ್ಸಿಡಿ ವ್ಯವಸ್ಥೆಯನ್ನು ಈಗಿನ ಕೇಂದ್ರ ಬಿಜೆಪಿ ಸರ್ಕಾರ ಸಂಪೂರ್ಣ ವಾಪಸ್ ಪಡೆದಿದೆ. ಅಂದರೆ, ಯಾವ ಸಬ್ಸಿಡಿಯನ್ನು ಬಡತನದ ರೇಖೆಗಿಂತ ಕೆಳಗಿರುವ ಗ್ರಾಹಕರು, ಕಡಿಮೆ ಮಟ್ಟದ ವಸತಿ ಗ್ರಾಹಕರು, ಕೃಷಿ ಗ್ರಾಹಕರು ಅಥವಾ ಪಾವತಿಸಲು ಸಾಮರ್ಥ್ಯ ಇಲ್ಲದ ಜನರ ಅನುಕೂಲಕ್ಕಾಗಿ ಮಾಡಲಾಗಿತ್ತು ಈಗ ಆ ಸಬ್ಸಿಡಿಯನ್ನು ವಾಪಸ್ ಪಡೆದಿದ್ದಾರೆ. ಇದರಿಂದಾಗಿ, ಈಗಾಗಲೇ ಅತ್ಯಂತ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಇರುವ ದೇಶದ ದೊಡ್ಡ ಸಂಖ್ಯೆಯ ಬಡಜನರ ಮೇಲೆ ಸುಲಿಗೆಯ ಪ್ರಹಾರವಾಗಿ, ವಿದ್ಯುತ್ ಸುಂಕವು ಗಗನಕ್ಕೇರುತ್ತದೆ ಎಂದರು.
ಜನಸಾಮಾನ್ಯರ ದೈನಂದಿನ ಬದುಕಿಗೆ ಸಹಕಾರಿ ಆಗಬೇಕಿರುವ ವಿದ್ಯುತ್ ವಲಯವು, ಈ ಮಸೂದೆಯ ಮೂಲಕ ದೊಡ್ಡ ಲಾಭಕೋರ ಕಾರ್ಪೊರೇಟ್ ಸಂಸ್ಥೆಗಳ ಹಿಡಿತಕ್ಕೆ ಬಂದರೆ, ಸಾರ್ವಜನಿಕ ವಲಯವಾಗಿರುವ ವಿದ್ಯುತ್ ಸಂಪೂರ್ಣ ಕಾರ್ಪೊರೇಟೀಕರಣವಾಗುತ್ತದೆ ಮತ್ತು ಲಕ್ಷಾಂತರ ಮಂದಿ ರೈತರು, ಕಾರ್ಮಿಕರು, ಜನಸಾಮಾನ್ಯರು ವಿದ್ಯುತ್ ಬಳಕೆಯಿಂದ ಸಂಪೂರ್ಣ ಹೊರಗುಳಿಯುವಂತಾಗುತ್ತದೆ ಎಂದವರು ಆತಂಕ ವ್ಯಕ್ತಪಡಿಸಿದರು.
ಎಸ್‌ಯುಸಿಐ(ಸಿ) ರಾಜ್ಯ ಸಮಿತಿ ಸದಸ್ಯ ಕಾ.ವಿ.ಜ್ಞಾನಮೂರ್ತಿ ಮಾತನಾಡಿ, “ದೇಶದಲ್ಲಿ ಬಿಜೆಪಿಯು ಸಾರ್ವಜನಿಕ ವಲಯ ಮತ್ತು ರಾಜ್ಯ ಚಾಲನೆಯಲ್ಲಿ ಬರುವ ವಿದ್ಯುತ್ ಮೇಲೆ ಸಂಪೂರ್ಣ ಹಿಡಿತವನ್ನು ಸಾಧಿಸಿ, ಅದನ್ನು ಕಾರ್ಪೋರೇಟ್ ವ್ಯವಹಾರಗಳ ಅಡಿಯಲ್ಲಿ ತರುವ ನೀತಿಗಳನ್ನು ಅನುಷ್ಠಾನಕ್ಕೆ ತರಲು ಸಜ್ಜಾಗುತ್ತಿದೆ ಎಂದು ದೂರಿದರು.
ಈಗ ಬಿಜೆಪಿಯು ವಿದ್ಯುತ್ ಒಳಗೊಂಡಂತೆ ಇನ್ನಿತರ ಸಾರ್ವಜನಿಕ ವಲಯಗಳನ್ನು ಖಾಸಗೀಕರಣ ಗೊಳಿಸುವ ಕುತಂತ್ರಕ್ಕೆ ಕೈ ಹಾಕುತ್ತಿದೆ. ಯಾವ ವಲಯಗಳು ಜನಸಾಮಾನ್ಯರ ಬೆವರು ಮತ್ತು ರಕ್ತದಿಂದ ಅಭಿವೃಧ್ಧಿ ಆಗಿತ್ತೋ, ಈಗ ಅವನ್ನು ಶ್ರೀಮಂತ ಕಾರ್ಪೊರೇಟ್ ಗಳ ಬಾಯಿಗೆ ಹಾಕಲಾಗುತ್ತಿದೆ. ಯಾವ ರೀತಿ ದೇಶದ ರೈತರು ತಮ್ಮ ಅವಿಶ್ರಾಂತ ಹೋರಾಟದಿಂದ, ನೂರಾರು ರೈತರ ಬಲಿದಾನದಿಂದ ಮೂರು ಕರಾಳ ಕೃಷಿ ಕಾಯ್ದೆಗಳು ಹಿಂಪಡೆಯುವಂತೆ ಮಾಡಿದರೋ, ಆ ಹೋರಾಟದಿಂದ ನಾವು ಸ್ಫೂರ್ತಿ ಪಡೆದು ಈಗ ತಂದಿರುವ ವಿದ್ಯುತ್ ತಿದ್ದುಪಡಿ ಮಸೂದೆ-೨೦೨೧ ಅನ್ನು ವಿರೋಧಿಸಬೇಕು ಎಂದು ಕರೆ ಕೊಟ್ಟರು.
ಈ ಹಿನ್ನೆಲೆಯಲ್ಲಿ, ಎಲ್ಲಾ ಜನರು ಒಂದಾಗಿ ಈ ಕರಾಳ ವಿದ್ಯುತ್ ತಿದ್ದುಪಡಿ ಮಸೂದೆ -೨೦೨೧ರ ವಿರೋಧಿಸಿ, ಬಿಜೆಪಿಯು ಈ ಮಸೂದೆಯನ್ನು ಹಿಂಪಡೆಯಲು ಒತ್ತಾಯಿಸಿ ಬಲಿಷ್ಠ ಹೋರಾಟವನ್ನು ಕಟ್ಟಲು ಸಜ್ಜಾಗಬೇಕು ಎಂದು ಕರೆ ನೀಡಿದರು.