ಬೆಂಗಳೂರು: ‘ಬೆಂಗಳೂರು ಅಭಿವೃದ್ದಿ ವಿಚಾರವಾಗಿ ವಿರೋಧ ಪಕ್ಷಗಳು ಚರ್ಚೆಗೆ ಬರಲಿ ಎಂದು ಮುಖ್ಯಮಂತ್ರಿಗಳು ಪಂಥಾಹ್ವಾನ ನೀಡಿದ್ದು, ಈ ಸವಾಲನ್ನು ನಾನು ಸ್ವೀಕರಿಸಲು ಸಿದ್ಧನಿದ್ದೇನೆ. ಆದರೆ ಅದಕ್ಕೂ ಮೊದಲು ಮುಖ್ಯಮಂತ್ರಿಗಳು ನನ್ನ ಕೆಲವು ಪ್ರಶ್ನೆಗಳಿಗೆ ಉತ್ತರ ನೀಡಲಿ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾ ರೆಡ್ಡಿ ಅವರು ಸಿಎಂಗೆ ಪ್ರತಿ ಸವಾಲು ಹಾಕಿದ್ದಾರೆ.
ಮತದಾರರ ಓಲೈಸಲು ಬಿಜೆಪಿ ನಾಯಕರ ಅಕ್ರಮಗಳ ವಿರುದ್ಧ ಕೆ.ಆರ್ ಸರ್ಕಲ್ ಬಳಿಯ ಚುನಾವಣಾ ಆಯೋಗದ ಕಚೇರಿಯಲ್ಲಿ ಸೋಮವಾರ ದೂರು ನೀಡಿದ ರಾಮಲಿಂಗಾ ರೆಡ್ಡಿ ಅವರು ಈ ಸಂದರ್ಭಗಳಲ್ಲಿ ಮಾಧ್ಯಮಗಳ ಜತೆ ಮಾತನಾಡುತ್ತಾ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪ್ರಶ್ನೆಗಳನ್ನು ಕೇಳಿದರು.
ರಾಮಲಿಂಗಾ ರೆಡ್ಡಿ ಅವರ ಪ್ರಶ್ನೆಗಳು..
-
‘ಮುಖ್ಯಮಂತ್ರಿಗಳು ಪ್ರತಿಪಕ್ಷಗಳಿಗೆ ಸವಾಲು ಹಾಕಿದ್ದಾರೆ. ರಾಜಕೀಯ ಪಕ್ಷವಾಗಿ ನಾವು ಆ ಸವಾಲು ಸ್ವೀಕರಿಸಲು ಸಿದ್ಧ. ಅವರು ಯಾವ ದಿನ ಚರ್ಚೆಗೆ ಕರೆದರೂ ನಾನು ಸಿದ್ಧನಿದ್ದೇನೆ.
-
ಸಿಲಿಕಾನ್ ಸಿಟಿ ಎನಿಸಿಕೊಂಡಿದ್ದ ಬೆಂಗಳೂರು ಈಗ ರಸ್ತೆ ಗುಂಡಿ ಸಿಟಿ ಆಗಿದೆ. ಇದೇನಾ ನಿಮ್ಮ ಅಭಿವೃದ್ಧಿ?
-
ರಸ್ತೆ ಗುಂಡಿಗಳಿಗೆ 20 ಕ್ಕೂ ಹೆಚ್ಚು ಪ್ರಾಣ ಬಲಿಯಾಗಿವೆ, ನೂರಾರು ಮಂದಿ ಗಂಭೀರ ಗಾಯಗೊಂಡಿದ್ದಾರೆ, ಸಾವಿರಾರು ಅಪಘಾತವಾಗಿವೆ. ಇದೇನಾ ನೀವು ಹೇಳುವ ಅಭಿವೃದ್ಧಿ?
-
ಪ್ರಧಾನಮಂತ್ರಿ ಭೇಟಿ ಸಮಯದಲ್ಲಿ ಹಾಕಿದ್ದ ಡಾಂಬರ್ ರಸ್ತೆ 2 ದಿನದಲ್ಲಿ ಮಾಯವಾದವು. ಬೆಂಗಳೂರು ಅಭಿವೃದ್ಧಿಗೆ ಇದೇನಾ ನಿಮ್ಮ ಕೊಡುಗೆ?
-
ರಾಪಿಡ್ ರಸ್ತೆಗಳು ಉದ್ಘಾಟನೆಯಾದ 1 ತಿಂಗಳಲ್ಲಿ ಕಿತ್ತು ಹೋದವು ಇದೆ ಅಲ್ಲವೇ ನಿಮ್ಮ ಅಭಿವೃದ್ಧಿ?
-
ಬಿಬಿಎಂಪಿ ವ್ಯಾಪ್ತಿ ಕಾಮಗಾರಿಗಳಲ್ಲಿ 40% ಕಮಿಷನ್ ಪಡೆದಿರುವುದು ನಿಮ್ಮ ಅಭಿವೃದ್ಧಿಯೇ?
-
ಹಿಂದೆಂದೂ ಕಂಡು ಕೇಳದ ಪ್ರವಾಹ ಬರುವಂತೆ ನಗರದ ಮೂಲಸೌಕರ್ಯ ಹಾಳು ಮಾಡಿರುವುದೇ ಅಭಿವೃದ್ಧಿಯೇ?
-
ಮತ ಕಳ್ಳತನ ಮಾಡಿ ಐಎಎಸ್ ಅಧಿಕಾರಿಗಳ ತಲೆ ತಂಡ ಆಗಿರುವುದು ನಿಮ್ಮ ಅಭಿವೃದ್ಧಿಯೇ?
-
ರಾತ್ರೋರಾತ್ರಿ 10 ಸಾವಿರ ಕೋಟಿ ಬಿಬಿಎಂಪಿ ಬಜೆಟ್ ಘೋಷಣೆ ಮಾಡಿ, ಯಾವ ಕಾರ್ಯಕ್ರಮ ಜಾರಿ ಆಗಿದೆ?
-
ನಿಮ್ಮ ಸರ್ಕಾರದ ಪ್ರಚಾರದ ಗಿಮಿಕ್ ಆಗಿರುವ ನಮ್ಮ ಕ್ಲಿನಿಕ್ ಯೋಜನೆ ವಿಫಲವಾಗಿರುವುದು ನಿಮ್ಮ ಸಾಧನೆಯೇ?
-
ಬಿಜೆಪಿ ಶಾಸಕರ ಕ್ಷೇತ್ರಗಳಿಗೆ ಹೆಚ್ಚಿನ ಅನುದಾನ ನೀಡಿ, ಬೇರೆ ಪಕ್ಷದ ಶಾಸಕರ ಕ್ಷೇತ್ರಕ್ಕೆ ಅನುದಾನ ತಾರತಮ್ಯ ನಿಮ್ಮ ಅಭಿವೃದ್ಧಿಯೇ? ಬಿಜೆಪಿಯ 15 ಜನ ಶಾಸಕರುಗಳಿಗೆ 9500 ಕೋಟಿ ಅನುದಾನ ನೀಡಿದರೆ, ಕಾಂಗ್ರೆಸ್ ಶಾಸಕರ ಕ್ಷೇತ್ರಕ್ಕೆ 2100 ಕೋಟಿ ಮಾತ್ರ.
-
ಬಿಜೆಪಿ ಶಾಸಕರ ಕ್ಷೇತ್ರ ಅಭಿವೃದ್ಧಿ ಆದರೆ ಇಡೀ ಬೆಂಗಳೂರು ಅಭಿವೃದ್ಧಿಯೇ? 28 ಕ್ಷೇತ್ರಗಳ ಅಭಿವೃದ್ಧಿ ಆದರೆ ಮಾತ್ರ ಬೆಂಗಳೂರು ಅಭಿವೃದ್ಧಿಯಾಗುತ್ತದೆ.
-
ಸಬ್ ಅರ್ಬನ್ ರೈಲು, ಫೆರಿ ಫೆರಲ್ ರಿಂಗ್ ರಸ್ತೆ ಯೋಜನೆ ಕುಂಠಿತ ವಾಗಿರುವುದು ನೀವು ಹೇಳುವ ಸಾಧನೆ ಅಲ್ಲವೇ?
-
ನೀವು ಹೇಳುವ ಅಭಿವೃದ್ಧಿಯಲ್ಲಿ ಒಂದು ರಸ್ತೆ, ಫ್ಲೈ ಓವರ್ ನಿರ್ಮಾಣ ಮಾಡಿರುವುದನ್ನು ಹೇಳಬಲ್ಲಿರಾ? ಈ ಸರ್ಕಾರ ಉದ್ಘಾಟನೆ ಮಾಡುತ್ತಿರುವ ರಸ್ತೆ, ಫ್ಲೈ ಓವರ್ ಗಳು ನಮ್ಮ ಅವಧಿಯಲ್ಲಿ ಆರಂಭವಾಗಿರುವ ಯೋಜನೆಗಳು.
-
ಬೆಂಗಳೂರು ಅಭಿವೃದ್ಧಿ ಎಂದರೆ ಮೂಲ ಸೌಕರ್ಯಗಳ ಅಭಿವೃದ್ಧಿ, ಜನ ಜೀವನ ಸುಧಾರಣೆಯೇ ಹೊರತು ಕೇವಲ ಬಿಜೆಪಿ ಶಾಸಕರ ಕ್ಷೇತ್ರಗಳ ಅಭಿವೃದ್ಧಿಯಲ್ಲ.’
ಇದೇ ವೇಳೆ, ನಿಮ್ಮ ಶಾಸಕರುಗಳು ಟಿವಿ, ಕುಕ್ಕರ್ ನೀಡುತ್ತಿದ್ದರೆ, ನೀವು ಕೂಡ ಕುಕ್ಕರ್ ನೀಡುತ್ತಿರುವುದಾಗಿ ಮಾಹಿತಿ ಬಂದಿವೆ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ರಾಮಲಿಂಗಾ ರೆಡ್ಡಿ, ‘ನಮ್ಮ ಕ್ಷೇತ್ರದಲ್ಲಿ ಪ್ರತಿ ವರ್ಷ ಸಂಕ್ರಾಂತಿ ಹಬ್ಬವನ್ನು ಆಚರಿಸುತ್ತಿದ್ದೇವೆ. ಈ ಸಂದರ್ಭದಲ್ಲಿ ಗೆದ್ದವರಿಗೆ ಪ್ರಶಸ್ತಿ ನೀಡುತ್ತಿದ್ದೇವೆ. ಈಗಲೂ ನೀಡುತ್ತೇವೆ. ಮುಂದೆಯೂ ನೀಡುತ್ತೇವೆ. ನಮ್ಮ ಕಾರ್ಯಕ್ರಮ 14ನೇ ತಾರಿಕಿನವರೆಗೂ ನಡೆಯಲಿದೆ. ಅದಕ್ಕೆ ಮಾಧ್ಯಮಗಳು ಕೂಡ ಆಗಮಿಸಲಿ. ನಾವು ಗೆದ್ದವರಿಗೆ ಪ್ರಶಸ್ತಿಯಾಗಿ ಬಹುಮಾನ ನೀಡುತ್ತಿದ್ದೇವೆಯೇ ಹೊರತು ಚುನಾವಣೆಯ ಮತಕ್ಕಾಗಿ ಆಮಿಷ ನೀಡುತ್ತಿಲ್ಲ. ಇದರ ಬಗ್ಗೆ ಮಾತನಾಡುವವರು ನಾವು ಕೋವಿಡ್ ಸಮಯದಲ್ಲಿ 2020ರಲ್ಲಿ ಪ್ರತಿ ನಿತ್ಯ 52 ಸಾವಿರ ಜನರಿಗೆ ಪ್ರತಿನಿತ್ಯ ಊಟ ನೀಡುತ್ತಿದ್ದೆವು ಹಾಗೂ ಹಾಗೂ 60 ಸಾವಿರ ಆಹಾರ ಕಿಟ್ ನೀಡಿದ್ದೆವು., 2021ರಲ್ಲಿ ಪ್ರತಿನಿತ್ಯ 35 ಸಾವಿರ ಜನರಿಗೆ ಊಟ ನೀಡುತ್ತಿದ್ದೆವು. 60 ಸಾವಿರ ಆಹಾರ ಕಿಟ್ ನೀಡಿದ್ದೆವು. 2018ರಲ್ಲಿ ಕೊಡಗು ಭಾಗದಲ್ಲಿ ಪ್ರವಾಹ ಬಂದಾಗ ಬಿಟಿಎಂ ಹಾಗೂ ಜಯನಗರ ಕ್ಷೇತ್ರದಲ್ಲಿ 1 ಕೋಟಿಗೂ ಹೆಚ್ಚು ಮೊತ್ತದ ವಸ್ತುಗಳನ್ನು ನೀಡಿದ್ದೇವೆ. 2019ರಲ್ಲಿ ಉತ್ತರ ಕರ್ನಾಟಕದಲ್ಲಿ ಸುಮಾರು 16 ವಾಹನಗಳಷ್ಟು 1 ಕೋಟಿ ಮೌಲ್ಯಕ್ಕೂ ಹೆಚ್ಚು ಆಹಾರ ಹಾಗೂ ಅಗತ್ಯ ವಸ್ತುಗಳನ್ನು ಪ್ರವಾಹ ಸಂತ್ರಸ್ತರಿಗೆ ನೀಡಿದ್ದೇವೆ. ನಾವು ನಿರಂತರವಾಗಿ ಈ ರೀತಿ ಜನಪರ ಕಾರ್ಯಕ್ರಮ ಮಾಡಿಕೊಂಡು ಬಂದಿದ್ದೇವೆ. ಇದರಲ್ಲಿ ಯಾವುದೇ ರಾಜಕಾರಣ ಇಲ್ಲ. ಕೋವಿಡ್ ಸಮಯದಲ್ಲಿ ಬಿಜೆಪಿ ನಾಯಕರು ಮನೆಯಲ್ಲಿ ಮಲಗಿದ್ದರು. ಈಗ ನಮ್ಮ ವಿರುದ್ಧ ಟೀಕೆ ಟಿಪ್ಪಣ್ಣಿ ಮಾಡುತ್ತಿದ್ದಾರೆ. ರಾಜಕೀಯದಲ್ಲಿ ಇದೆಲ್ಲವೂ ಸಹಜ. ನಾನು ಮಾಧ್ಯಮಗಳನ್ನು ಆಹ್ವಾನಿಸುತ್ತೇನೆ. ನೀವು ಕೂಡ ಭಾಗವಹಿಸಬಹುದು’ ಎಂದು ಸ್ಪಷ್ಟನೆ ನೀಡಿದರು.