ವಿಮಾನ ನಿಲ್ದಾಣದಲ್ಲಿ ಹಳೇ ರನ್ ವೇ ಪುನರ್ ನಿರ್ಮಾಣ ಕಾಮಗಾರಿ ಪರಿಶೀಲನೆ ನಡೆಸಿದ ಉಪಮುಖ್ಯಮಂತ್ರಿ
ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಹಳೇ (ಮೊದಲಿನ) ರನ್ ವೇ ಪುನರ್ ನಿರ್ಮಾಣದ ಕಾಮಗಾರಿ ಈ ತಿಂಗಳಾಂತ್ಯಕ್ಕೆ ಮುಗಿಯಲಿದೆ ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ತಿಳಿಸಿದ್ದಾರೆ.
ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿ ಕಾಮಗಾರಿಯನ್ನು ಪರಿಶೀಲನೆ ನಡೆಸಿದ ಅವರು; ಪ್ರಸ್ತುತ ಕಾಮಗಾರಿ ಬಹುತೇಕ ಮುಗಿಯುತ್ತಾ ಬಂದಿದ್ದು, ಅಂತಿಮ ಹಂತದ ಕೆಲಸಗಳು ನಡೆಯುತ್ತಿವೆ ಎಂದರು.
ಸದ್ಯ ಹೊಸ ರನ್ ವೇನಲ್ಲಿಯೇ ವಿಮಾನಗಳ ಸಂಚಾರ ನಡೆಯುತ್ತಿದ್ದು, ಮುಂದಿನ ತಿಂಗಳ ಅಂತ್ಯದಿಂದ ಪುನರ್ ನಿರ್ಮಾಣವಾದ ಹಳೆಯ ರನ್ ವೇನಲ್ಲೂ ವಿಮಾನ ಸಂಚಾರ ಆರಂಭವಾಗಲಿದೆ. ಮುಂಬೈನ ಎಐಸಿ ಇನ್‌ಫ್ರಾಸ್ಟ್ರಕ್ಚರ್ ಸಂಸ್ಥೆ ಈ ಯೋಜನೆಯನ್ನು 260 ಕೋಟಿ ರೂ. ವೆಚ್ಚದಲ್ಲಿ ದಾಖಲೆಯ ಕಡಿಮೆ ಅವಧಿಯಲ್ಲಿ ನಿರ್ಮಿಸಿದೆ ಎಂದು ಡಿಸಿಎಂ ಮಾಹಿತಿ ನೀಡಿದರು.
ರನ್ ವೇ ಉದ್ದ 4 ಕಿ.ಮೀ ದೂರವಿದ್ದು, ರನ್ ವೇ ಮಧ್ಯದಲ್ಲೂ ಈಗ ಲೈಟ್‌ಗಳನ್ನು ಅಳವಡಿಸಲಾಗಿದೆ. ಇದರಿಂದ ವಿಮಾನಗಳ ಸಂಚಾರಕ್ಕೆ ಹೆಚ್ಚು ಅನುಕೂಲ ಆಗುತ್ತದೆ. ಜತೆಗೆ, ಟ್ಯಾಕ್ಸಿ ವೇಯನ್ನು ಹಾಗೂ ಒಳಚರಂಡಿ, ಏರ್‌ಫೀಲ್ಡ್ ಬೆಳಕಿನ ವ್ಯವಸ್ಥೆಯನ್ನೂ ಮಾಡಲಾಗಿದೆ ಎಂದು ಅವರು ಹೇಳಿದರು.
ಈ ರನ್ ವೇ ಕಾರ್ಯಾರಂಭವಾದ ಮೇಲೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಒಟ್ಟು ಎರಡೂ ರನ್ ವೇಗಳ ಮೂಲಕ ವರ್ಷಕ್ಕೆ 60 ರಿಂದ 75 ದಶಲಕ್ಷ ಪ್ರಯಾಣಿಕರನ್ನು ನಿಭಾಯಿಸಬಲ್ಲದು. ಇದರಿಂದ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ ಉತ್ತಮ ಲಾಭವಾಗಲಿದೆ ಎಂದು ಉಪ ಮುಖ್ಯಮಂತ್ರಿ ತಿಳಿಸಿದರು.
ಕೋವಿಡ್ ಸಂಕಷ್ಟವು ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ ಅಪಾರ ನಷ್ಟವನ್ನೇ ಉಂಟು ಮಾಡಿದೆ. ಕೋವಿಡ್‌ಗೂ ಮೊದಲು ವಾರ್ಷಿಕ 33 ದಶಲಕ್ಷ ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಬಳಿಕ ಆ ಪ್ರಮಾಣ 12 ದಶಲಕ್ಷಕ್ಕೆ ಇಳಿದಿದೆ. ಮುಂದಿನ ದಿನಗಳಲ್ಲಿ ಪ್ರಯಾಣಿಕರ ಹೆಚ್ಚಳವನ್ನು ನಿರೀಕ್ಷೆ ಮಾಡಬಹುದಾಗಿದೆ ಎಂದರು.