ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಪ್ರಚಾರಕರು ಮತ್ತು ವಿಶ್ವ ಹಿಂದೂ ಪರಿಷತ್‍ನ ರಾಷ್ಟ್ರೀಯ ನಾಯಕರಾದ ಬಾಬುರಾವ್ ದೇಸಾಯಿಯವರ ನಿಧನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ಅವರು ತೀವ್ರ ಸಂತಾಪ ಸೂಚಿಸಿದ್ದಾರೆ.
ಬಾಬುರಾವ್ ದೇಸಾಯಿಯವರು ರಾಷ್ಟ್ರಸೇವೆಗೆ ತಮ್ಮನ್ನು ತೊಡಗಿಸಿಕೊಂಡಿದ್ದವರು. ತಮ್ಮ ಜೀವಿತದ ಅಂತಿಮ ದಿನದವರೆಗೂ ಅವರು ಸಂಘದ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದ ಮಹಾನ್ ವ್ಯಕ್ತಿಯಾಗಿದ್ದರು. ಕಾರ್ಯಕರ್ತರ ಜೊತೆಗಿನ ವಾತ್ಸಲ್ಯಪೂರ್ಣ ಸಂಬಂಧ, ಅಪರಿಮಿತ ಜೀವನೋತ್ಸಾಹ, ಪ್ರಚಲಿತ ವಿಚಾರಗಳ ಸೂಕ್ಷ್ಮ ವಿಶ್ಲೇಷಣಾ ಪ್ರವೃತ್ತಿ ಮತ್ತು ಜನಸಂಘಟನಾ ಕೌಶಲ್ಯವು ಅನುಕರಣಾರ್ಹ ಎಂದು ನಳಿನ್ ಕುಮಾರ್ ಕಟೀಲ್ ಅವರು ಹೇಳಿದ್ದಾರೆ.