ಲಕ್ನೋ: ಕೇಂದ್ರ ಸಚಿವೆ ಸಾಧ್ವಿ ನಿರಂಜನ್ ಜ್ಯೋತಿ ಅವರನ್ನು ಅಪಹರಿಸುವ ಯತ್ನ ನಡೆದಿದೆ. ಈ ಪ್ರಕರಣ ಸಂಬಂಧ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.
ಸಚಿವೆ ಸಾಧ್ವಿ ಅವರು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ, ಸಚಿವರನ್ನು ಕರೆದೊಯ್ಯಲು ಹೊರಟಿದ್ದ ಕಾರನ್ನು ಅಪಹರಿಸುವ ಯತ್ನ ನಡೆದಿದೆ. ಅಪರಿಚಿತನೊಬ್ಬ ಆ ಕಾರಿನಲ್ಲಿ ಸಚಿವೆ ಇದ್ದಾರೆಂದು ಭಾವಿಸಿ, ಚಾಲಕನನ್ನು ಬೆದರಿಸಿ ಕಾರನ್ನು ಚಲಾಯಿಸಲು ಯತ್ನಿಸಿದ್ದಾನೆ. ಆದರೆ ಆಗಿನ್ನೂ ಸಚಿವೆ ಕಾರನ್ನು ಹತ್ತಿರಲಿಲ್ಲ. ಹಾಗಾಗಿ ಅಪಹರಣ ಮಾಡುವ ಕಿಡಿಗೇಡಿಗಳ ಯತ್ನ ಸಫಲವಾಗಿಲ್ಲ ಎನ್ನಲಾಗಿದೆ.
ಮಂಗಳವಾರ ಬೆಳಗ್ಗೆ 5.00 ಗಂಟೆ ಸುಮಾರಿಗೆ ಲಕ್ನೋ ವಿಮಾನ ನಿಲ್ದಾಣದಿಂದ ಸಚಿವೆಯನ್ನು ಕರೆತೆರಲು ಹೊರಟಿದ್ದ ಕಾರು ಚಾಲಕ ಬಂತಾರಾ ಸಮೀಪದ ನ್ಯೂ ಪ್ರಧಾನ್ ಧಾಬಾ ಬಳಿ ಟೀ ಕುಡಿಯಲು ನಿಲ್ಲಿಸಿದ್ದ. ಆ ವೇಳೆ ವ್ಯಕ್ತಿಯೊಬ್ಬ ಗನ್ ತೋರಿಸಿ ಕಾರಿನೊಳಗೆ ನುಗ್ಗಿ , ಚಾಲಕನನ್ನು ಕೆಳಗಿಳಿಸಿದ್ದಾನೆ. ಆ ಸಂದರ್ಭದಲ್ಲಿ ಭದ್ರತಾ ಸಿಬಂದಿ ಕಾರನ್ನು ಸುತ್ತುವರಿದು, ಯುವಕನನ್ನು ವಶಕ್ಕೆ ಪಡೆದಿದ್ದಾರೆ. ಈ ಬಗ್ಗೆ ಕಾರು ಚಾಲಕನ ದೂರನ್ನಾದರಿಸಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.



















































