ಬೆಂಗಳೂರು: ಅನ್ನದಾತನ ಮನೆ ಬಾಗಿಲಿಗೇ ತೆರಳಿದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ, ರೈತ ದಿನದ ಶುಭಾಶಯ ಕೋರಿ ಅಭಿವಂದನೆ ಸಲ್ಲಿಸಿದರಲ್ಲದೆ, ರಾಜ್ಯ ಮತ್ತು ಕೇಂದ್ರ ಸರಕಾರಗಳು ಜಾರಿಗೆ ತಂದಿರುವ ಕೃಷಿ ಕಾಯ್ದೆಗಳ ಬಗ್ಗೆ ರೈತರಲ್ಲಿರುವ ಅನುಮಾನಗಳನ್ನು ನಿವಾರಿಸಿದರು.
ಮಾಗಡಿ ತಾಲ್ಲೂಕಿನ ಉಕ್ಕಡ-ಗುಡ್ಡಹಳ್ಳಿ ಗ್ರಾಮಕ್ಕೆ ಬುಧವಾರ ಭೇಟಿ ನೀಡಿದ ಡಿಸಿಎಂ, ಅಲ್ಲಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ರೈತರಲ್ಲಿಗೆ ತೆರಳಿ ಶುಭಾಶಯ ಕೋರಿ ಶಿರಬಾಗಿ ನಮಿಸಿ ಅಭಿವಂದನೆ ಸಲ್ಲಿಸಿದರು. ರೈತರಾದ ನಾರಾಯಣಪ್ಪ, ನಾಗರಾಜ ಮತ್ತು ನರಸಿಂಹಯ್ಯ ಅವರಿಗೆ ಹೂವಿನ ಹಾರ ಹಾಕಿ ಗೌರವಿಸಿದರು.
ಯಾವ ಮುನ್ಸೂಚನೆಯೂ ಇಲ್ಲದೆ ಸ್ವತಃ ಉಪ ಮುಖ್ಯಮಂತ್ರಿಗಳೇ ರಸ್ತೆಯಲ್ಲಿ ಕಾರು ನಿಲ್ಲಿಸಿ ನಡೆದುಬಂದು ಹೂಮಾಲೆ ಹಾಕಿ ಶುಭ ಕೋರಿದ್ದನ್ನು ಕಂಡು ರೈತರು, ಆ ಊರಿನ ಜನರೆಲ್ಲರೂ ಚಕಿತರಾದರು. ಕ್ಷಣ ಮಾತ್ರದಲ್ಲಿ ಇಡೀ ಊರಿನ ರೈತಾಪಿ ಜನರು, ಹಿರಿಯರು, ಮಹಿಳೆಯರು, ಯುವಕರು ಅಲ್ಲಿ ಸೇರಿಕೊಂಡರಲ್ಲದೆ, ಡಿಸಿಎಂ ಸರಳತೆ ಬಗ್ಗೆ ಅಗಾಧ ಮೆಚ್ಚುಗೆ ವ್ಯಕ್ತಪಡಿಸಿದರು.