ಬೆಂಗಳೂರು: ಸಿದ್ದರಾಮಯ್ಯ ಅವರ ವಿಚಾರವಾಗಿ ಸಚಿವ ಅಶ್ವತ್ಥ್ ನಾರಾಯಣ ಅವರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿರುವ ಪ್ರದೇಶ ಕಾಂಗ್ರೆಸ್ ಉಸ್ತುವಾರಿ ನಾಯಕ ರಣದೀಪ್ ಸುರ್ಜಿವಾಲ, ‘ಇವರು ಮಹಾತ್ಮಾ ಗಾಂಧಿಯನ್ನು ಕೊಂದರು, ಇಂತಹುದೇ ಹಿಂಸಾತ್ಮಕ ಮನಸ್ಥಿತಿ ಇಂದಿರಾ ಗಾಂಧಿ ಅವರನ್ನು ಹಾಗೂ ರಾಜೀವ್ ಗಾಂಧಿ ಅವರನ್ನು ಹತ್ಯೆ ಮಾಡಿದೆ. ಇದೇ ಹಿಂಸಾತ್ಮಕ ಮನಸ್ಥಿತಿಯು ನಮ್ಮ ನಾಯಕರಾಗಿದ್ದ ವಿದ್ಯಾಚರಣ ಶುಕ್ಲಾ ಅವರನ್ನು ಹತ್ಯೆ ಮಾಡಿತ್ತು. ಇವರ ಮನಸ್ಥಿತಿ ಹೀಗೆ ಮುಂದುವರಿದಿದೆ ಎಂದು ವಿಶ್ಲೇಷಿಸಿದ್ದಾರೆ.
ಪ್ರದೇಶ ಕಾಂಗ್ರೆಸ್ ನಾಯಕರೊಂದಿಗೆ ಜಂಟಿ ಸುದ್ದಿಗೋಷ್ಟಿ ನಡೆಸಿದ ಸುರ್ಜಿವಾಲ, ಸಚಿವ ಅಶ್ವಥ್ ನಾರಾಯಣ ಹೇಳಿಕೆ ಬಗ್ಗೆ ಖಾರವಾಗಿ ಪ್ರತಿಕ್ರಿಯಿಸಿದರು. ನಳೀನ್ ಕುಮಾರ್ ಕಟೀಲ್ ಹಾಗೂ ಅಶ್ವತ್ಥ್ ನಾರಾಯಣ ಅವರ ಹೇಳಿಕೆಗಳು ಬಿಜೆಪಿ ರಾಜ್ಯದಲ್ಲಿ ಮುಂದೆ ಎದುರಾಗುತ್ತಿರುವ ಸೋಲಿನ ಭೀತಿಯಿಂದ ದಿಗ್ಬ್ರಾಂತರಾಗಿರುವುದಕ್ಕೆ ಸಾಕ್ಷಿ. ಇದು ಅವರ ಮಾನಸಿಕ ಸ್ಥಿತಿ ಹಾಗೂ ಭ್ರಷ್ಟಾಚಾರ, ದುರಾಡಳಿತದ, ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಯೋಜನೆಗಳ ವಿಚಾರವಾಗಿ ಜನರ ಗಮನ ಬೇರೆಡೆ ಸೆಳೆಯುವ ಪ್ರಯತ್ನಕ್ಕೆ ಸಾಕ್ಷಿಯಾಗಿದೆ. ದೇವರು ಅವರಿಗೆ ಕ್ಷಮೆ ನೀಡಿ ಅವರಿಗೆ ಉತ್ತಮ ಬುದ್ಧಿ ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದರು.
ಅವರು ನಮಗೆ ಜೀವ ಬೆದರಿಕೆ ಹಾಕಿದರೂ ನಾವು ಅವರಿಗೆ ನಮ್ಮ ಪ್ರೀತಿ ವಿಶ್ವಾಸ ನೀಡುತ್ತೇವೆ. ನಮ್ಮ ಗಮನ ಏನಿದ್ದರೂ ರಾಜ್ಯ ಹಾಗೂ ಜನರ ಭವಿಷ್ಯ ಕಾಪಾಡುವುದಾಗಿದೆಯೇ ಹೊರತು, ವಾಗ್ವಾದ ನಡೆಸುವುದಲ್ಲ. ಈ ವಿಚಾರವಾಗಿ ಕಾನೂನು ಸುವ್ಯವಸ್ಥೆ ಕಾಪಾಡಬೇಕಾದ ಮುಖ್ಯಮಂತ್ರಿಗಳು, ಗೃಹಸಚಿವರು ಈ ಬಗ್ಗೆ ಕ್ರಮ ಕೈಗೊಳ್ಳಬೇಕು. ಯಾರಾದರೂ ಕೊಲೆ ಮಾಡಿದರೆ ಪೊಲೀಸರು ಕ್ರಮ ಕೈಗೊಳ್ಳಬೇಕಲ್ಲವೇ? ಅದು ಸರ್ಕಾರದ ಜವಾಬ್ದಾರಿ’ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಕೂಡಾ ಸಚಿವ ಅಶ್ವಥ್ ನಾರಾಯಣ ಅವರ ಹೇಳಿಕೆ ಬಗ್ಗೆ ಖಾರವಾಗಿ ಪ್ರತಿಕ್ರಿಯಿಸಿದರು. ‘ಬಿಜೆಪಿ ವಾಟ್ಸಪ್ ಯುನಿವರ್ಸಿಟಿಯಲ್ಲಿ ಒಬ್ಬರಿಗಿಂತ ಒಬ್ಬರು ರ್ಯಾಂಕ್ ಪಡೆಯುತ್ತಿದ್ದಾರೆ. ಸಿ.ಟಿ ರವಿ ಅವರು ರಾಜ್ಯಪಾಲರ ಭಾಷಣದ ಮೇಲೆ ಮಾತನಾಡಿದ ನಂತರ ಅವರಿಗಿಂತ ನಾನು ಹಿಂದೆ ಬೀಳಬಾರದು ಎಂದು ಅಶ್ವತ್ಥ್ ನಾರಾಯಣ ಅವರು ಮಾತನಾಡುತ್ತಿದ್ದಾರೆ. ಅವರು ಹೇಳುವಂತೆ ಉರಿಗೌಡ ಹಾಗೂ ನಂಜೇಗೌಡ ಅವರು ಯಾರು? ಇವರು ಟಿಪ್ಪು ಸುಲ್ತಾನ್ ಅವರನ್ನು ಕೊಂದಿದ್ದಾರೆ ಎಂದು ಯಾವ ಇತಿಹಾಸದಲ್ಲಿ ದಾಖಲೆ ಇದೆ? ಈ ಬಗ್ಗೆ ಉತ್ತರಿಸಲಿ ಎಂದು ಪ್ರಿಯಾಂಕ್ ಸವಾಲು ಹಾಕಿದರು.
ಬಿಜೆಪಿಯವರ ಮಾತುಗಳು ಸೋಲಿನ ಭೀತಿಯಿಂದಾಗಿ ಹೊರಬರುತ್ತಿವೆ. ಪಕ್ಷ ಸೋತರೂ ನನ್ನ ಕೆಲಸ ನಾನು ಮಾಡಿದ್ದೇನೆ ಎಂದು ಹೇಳಿಕೊಳ್ಳಲು ಈ ಹೇಳಿಕೆ ನೀಡುತ್ತಿದ್ದಾರೆ ಎಂದು ಟೀಕಿಸಿದ ಅವರು, ಬಿಜೆಪಿಯವರು ಇತಿಹಾಸದ ಭಾಗವಾಗಿಲ್ಲ. ಹೀಗಾಗಿ ಸಾರ್ವಕರ್ ಅವರಿಗೆ ವೀರ್ ಎಂಬ ಬಿರುದು ಬಂದಂತೆ ಈಗ ಉರಿಗೌಡ, ನಂಜೇಗೌಡರ ವಿಚಾರ ಅಸ್ಥಿತ್ವಕ್ಕೆ ಬಂದಿದೆ. ಈ ವಿಚಾರವಾಗಿ ನಾವು ವಿಧಾನಸಭೆಯಲ್ಲಿ ಪ್ರಸ್ತಾಪಿಸುತ್ತೇವೆ’ ಎಂದು ತಿಳಿಸಿದರು.