ಬಜೆಟ್ ಬಗ್ಗೆ ಬಹಳಷ್ಟು ನಿರೀಕ್ಷೆ.. ಅದರಲ್ಲೂ ಕೋವಿಡ್ ಸಂದರ್ಭದಲ್ಲೂ ಪರಿಣಾಮಕಾರಿ ಸೇವೆಯಲ್ಲಿ ತೊಡಗಿರುವ ಆಶಾ ಕಾರ್ಯಕರ್ತೆಯರಿಗೂ ಈ ಬಜೆಟ್‌ನಲ್ಲಿ ಕೊಡುಗೆ ಸಿಗಬಹುದೆಂಬುದು ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ನಿರೀಕ್ಷೆ..
ಬೆಂಗಳೂರು: ಈ ಬಾರಿಯ ರಾಜ್ಯ ಬಜೆಟ್ ಹೇಗಿರುತ್ತೆ? ಸಿಎಂ ಬಿಎಸ್‌ವೈ ಅವರು ಕೃಷಿಕರಿಗೆ, ಯುವಜನರಿಗೆ, ಸ್ವಾವಲಂಭಿ ಜನರಿಗೆ ಯಾವ ಕೊಡುಗೆಗಳನ್ನು ನೀಡಬಹುದು ಎಂಬ ಲೆಕ್ಕಾಚಾರ ಸಾಗಿದೆ.
ಈ ಬಾರಿ ದೇಶದಲ್ಲೇ ಅತ್ಯುತ್ತಮ ಬಜೆಟ್ ಮಂಡಿಸಲಾಗುವುದು ಎಂದಿರುವ ಸಿಎಂ ಯಡಿಯೂರಪ್ಪ, ರೈತರಿಗೆ, ಮಹಿಳೆಯರಿಗಾಗಿ ಹೆಚ್ಚಿನ ಯೋಜನೆಗಳನ್ನು ಪ್ರಕಟಿಸುವ ಭರವಸೆ ನೀಡಿದ್ದಾರೆ.
ಈ ಮಧ್ಯೆ, ಕೋವಿಡ್ ಸಂದರ್ಭದಲ್ಲೂ ಪರಿಣಾಮಕಾರಿ ಸೇವೆಯಲ್ಲಿ ತೊಡಗಿರುವ ಆಶಾ ಕಾರ್ಯಕರ್ತರಿಗೂ ಈ ಬಜೆಟ್‌ನಲ್ಲಿ ಕೊಡುಗೆ ಸಿಗಬಹುದೆಂಬ ನಿರೀಕ್ಷೆ ಇದೆ. ಈ ಬಗ್ಗೆ ಆಶಾ ಕಾರ್ಯಕರ್ತೆಯರು ಕೂಡಾ ಬಹಳಷ್ಟು ನಿರೀಕ್ಷೆಯಲ್ಲಿದ್ದಾರೆ. ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ಮಹತ್ವದ ಪಾತ್ರವಹಿಸುತ್ತಿರುವ ಆಶಾ ಕಾರ್ಯಕರ್ತೆಯರ ಬೇಡಿಕೆಗಳಿಗೆ ಸರ್ಕಾರ ಆದ್ಯತೆ ನೀಡಬೇಕು, ಅವರ ಬಹುದಿನಗಳ ಬೇಡಿಕೆ ಈಡೇರಬೇಕಿದೆ ಎಂದು ವಿವಿಧ ಸಂಘಟನೆಗಳ ಪ್ರಮುಖರು ಸರ್ಕಾರವನ್ನು ಆಗ್ರಹಿಸಿದ್ದಾರೆ.
ಈ ಸಂಬಂಧ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ ಇತ್ತೀಚೆಗೆ ತಮ್ಮ ಸಮಸ್ಯೆ ಹಾಗೂ ಬೇಡಿಕೆಗಳ ಬಗ್ಗೆ ಸರ್ಕಾರದ ಗಮನ ಸೆಳೆದಿತ್ತು.
ರಾಷ್ಟ್ರೀಯ ಆರೋಗ್ಯ ಅಭಿಯಾನದ ನಿರ್ದೇಶಕರಾದ ಅರುಂಧತಿ ಚಂದ್ರಶೇಖರ್ ಇವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದ ರಾಜ್ಯ ಮಟ್ಟದ ಕುಂದುಕೊರತೆ ಸಭೆಯಲ್ಲಿ ಪಾಲ್ಗೊಂಡಿದ್ದ ಸಂಘದ ರಾಜ್ಯ ಅಧ್ಯಕ್ಷರಾದ ಕೆ ಸೋಮಶೇಖರ್ ಯಾದಗಿರಿ ಹಾಗೂ ರಾಜ್ಯ ಕಾರ್ಯದರ್ಶಿಗಳಾದ ಡಿ ನಾಗಲಕ್ಷ್ಮಿ ಹಾಗೂ ರಾಜ್ಯ ಮುಖಂಡರಾದ ಟಿ.ಸಿ.ರಮ ಹಾಗೂ ಮುಖಂಡರಾದ ಹನುಮೇಶ್ ಹಾಗೂ ವಿವಿಧ ಜಿಲ್ಲೆಗಳಿಂದ ಆಗಮಿಸಿದ ಹಲವಾರು ಜಿಲ್ಲಾ ಮುಖಂಡರು ತಮ್ಮ ಬಹುಕಾಲದ ಬೇಡಿಕೆಗಳತ್ತ ಬೆಳಕುಚೆಲ್ಲಿದ್ದರು. ಆಶಾ ಕಾರ್ಯಕರ್ತೆಯರು ಹಲವಾರು ಬೇಡಿಕೆಗಳನ್ನು ಇಟ್ಟಿದ್ದರೂ ಸರ್ಕಾರ ಅದನ್ನು ಪರಿಪೂರ್ಣವಾಗಿ ಈಡೇರಿಸಿಲ್ಲ ಎಂಬ ಸಂಗತಿಯತ್ತ ಗಮನಹರಿಸಿದರು. ಬೇಡಿಕೆ ಈಡೇರದಿದ್ದರೆ ಆಶಾ ಕಾರ್ಯಕರ್ತೆಯರು ಎದುರಿಸಬಹುದಾದ ಸವಾಲುಗಳ ಬಗ್ಗೆ ಸಂಘದ ರಾಜ್ಯ ಕಾರ್ಯದರ್ಶಿ ಡಿ.ನಾಗಲಕ್ಷ್ಮಿ ಅವರು ಸರ್ಕಾರದ ಗಮನ ಕೇಂದ್ರೀಕರಿಸುವಂತೆ ಮಾಡಿದ್ದರು. ಈ ಬಗ್ಗೆ ಮನವಿ ನೀಡಿ ಸಂಘ ಇಡೀ ರಾಜ್ಯದ ಗಮನಸೆಳದಿತ್ತು.
- ಕೇಂದ್ರ ಸರ್ಕಾರದ ಪ್ರೋತ್ಸಾಹ ಧನ ನೀಡುವಿಕೆಯಲ್ಲಿ ಆಶಾ ಕಾರ್ಯಕರ್ತೆಯರಿಗೆ ಅನ್ಯಾಯವಾಗುತ್ತಿದೆ. ಅದನ್ನು ಸರ್ಕಾರ ಸರಿಪಡಿಸಬೇಕಿದೆ.
- ಆರ್ ಸಿ ಎಚ್ ಪೋರ್ಟಲ್ ನಿಂದಾಗಿ ಆಶಾ ಕಾರ್ಯಕರ್ತೆಯರಿಗೆ ಸಂಪೂರ್ಣವಾಗಿ ದುಡಿದಷ್ಟು ಹಣ ಕೈ ಸೇರುತ್ತಿಲ್ಲ
- ಕೋವಿಡ್ ಸಾಂಕ್ರಾಮಿಕ ತಡೆಗಟ್ಟುವ ನಿಟ್ಟಿನಲ್ಲಿ ಆಶಾ ಕಾರ್ಯಕರ್ತೆಯರು ಪ್ರಮುಖ ಪಾತ್ರ ವಹಿಸಿರುವ ಸಂದರ್ಭದಲ್ಲಿ ಕಾರ್ಯಕರ್ತರಿಗೆ ವಿಶೇಷ ಪ್ರೋತ್ಸಾಹ ಧನ ಕೇಂದ್ರದಿಂದ ಮಾಸಿಕ 1000 ರೂ ಒಂದು ವರ್ಷದವರೆಗೆ ರಾಜ್ಯದಾದ್ಯಂತ ಎಲ್ಲಾ ಕಾರ್ಯಕರ್ತರಿಗೆ ತಲುಪಿಸಬೇಕಿದೆ.
- ಕಳೆದ ಎರಡು ವರ್ಷಗಳಿಂದ ಆಶಾ ಕಾರ್ಯಕರ್ತೆಯರು ನಿರ್ವಹಿಸಿದ ಕೆಲಸಗಳಿಗೆ ಸೂಕ್ತ ಸಂಭಾವನೆ ಬಂದಿಲ್ಲ.
- ಕೋವಿಡ್ ಅವಧಿಯಲ್ಲಿ ಆಶಾ ಕಾರ್ಯಕರ್ತೆಯರು ಸುಮಾರು ಹತ್ತಕ್ಕೂ ಹೆಚ್ಚು ಆಶಾ ಕಾರ್ಯಕರ್ತೆಯರು ಸಾವಿಗೀಡಾಗಿದ್ದು ಅವರ ಅವಲಂಬಿತರಿಗೆ ಸರ್ಕಾರದಿಂದ ಘೋಷಿಸಿರುವಂತೆ 50 ಲಕ್ಷ ರೂಪಾಯಿ ನೀಡಬೇಕು.
- ಆಶಾ ಕಾರ್ಯಕರ್ತೆಯರಿಗೆ ಕನಿಷ್ಠ ₹12000 ವೇತನ ನಿಗದಿಮಾಡಬೇಕು.
ಇದೇ ವೇಳೆ, ಆಶಾ ಕಾರ್ಯಕರ್ತೆಯರ ಈ ಬೇಡಿಕೆಗಳು ನ್ಯಾಯಯುತವಾಗಿದ್ದು ಈ ಬೇಡಿಕೆಗಳನ್ನು ಈಡೇರಿಸುವ ಮೂಲಕ ಸಾಮಾಜಿಕ ನ್ಯಾಯ ಒದಗಿಸಬೇಕೆಂದು ‘ನಮೋ ಸಮಾಜ್’ ಪ್ರಮುಖರು ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.