ಬೆಂಗಳೂರು: ಆಶಾ ಕಾರ್ಯಕರ್ತೆಯರ 3 ದಿನಗಳ ಅಹೋರಾತ್ರಿ ಸತ್ಯಾಗ್ರಹ ಅಂತ್ಯಗೊಂಡಿದೆ. ಮಾತು ತಪ್ಪಿದ ಸರ್ಕಾರದ ವಿರುದ್ಧ ಉನ್ನತ ಹೋರಾಟಕ್ಕೆ ಪ್ರತಿಜ್ಞೆ ಮಾಡುವ ಮೂಲಕ ಆಶಾ ಕಾರ್ಯಕರ್ತೆಯರು ತಮ್ಮ ಹೋರಾಟವನ್ನು ಅಂತ್ಯಗೊಳಿಸಿದರು.
ಈ ಕುರಿತಂತೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಅಧ್ಯಕ್ಷ ಕೆ. ಸೋಮಶೇಖರ್ ಯಾದಗಿರಿ ಹಾಗೂ ರಾಜ್ಯ ಕಾರ್ಯದರ್ಶಿ ಡಿ. ನಾಗಲಕ್ಷ್ಮಿ, ತಮ್ಮ ಹೋರಾಟ ಇಲ್ಲಿಗೆ ಮುಗಿದಿಲ್ಲ, ಮಾತು ತಪ್ಪಿರುವ ಸರ್ಕಾರದ ವಿರುದ್ಧ ಉಗ್ರ ಹೋರಾಟ ನಡೆಯಲಿದೆ ಎಂದು ಘೋಷಿಸಿದ್ದಾರೆ.
ಗುರುವಾರ ರಾಜ್ಯದಾದ್ಯಂತ ಆಶಾ ಕಾರ್ಯಕರ್ತೆಯರು ಜಿಲ್ಲಾ ಕೇಂದ್ರಗಳಲ್ಲಿ ಕೈಗೊಂಡ ಮೂರು ದಿನಗಳ ಅಹೋರಾತ್ರಿ ಪ್ರತಿಭಟನಾ ಧರಣಿಯನ್ನು ಅತ್ಯಂತ ಅಭೂತಪೂರ್ವ ರೀತಿಯಲ್ಲಿ ಸಂಘಟಿಸಿ, ಸರ್ಕಾರದ ನಿರ್ಲಕ್ಷ ಖಂಡಿಸಿ ಇಂದು ಆಕ್ರೋಶದಿಂದ ರಾಜ್ಯದಾದ್ಯಂತ ಎಲ್ಲೆಡೆ ಬೀದಿಗಿಳಿದು ಪ್ರಮುಖ ರಸ್ತೆ, ಸರ್ಕಲ್ ಗಳಲ್ಲಿ ಮಾನವ ಸರಪಳಿ ರಚಿಸುವ ಮೂಲಕ ಪ್ರತಿಭಟನೆ ನಡೆಸಿ. ಹೋರಾಟವನ್ನು ಅಂತ್ಯಗೊಳಿಸಿದರು.
ಮೂರು ದಿನ ನಿರಂತರ ಸುರಿವ ಮಳೆಯಲ್ಲಿ ಚಳಿಯಲ್ಲಿ ಆನೇಕ ಅಡೆತಡೆ ನಡುವೆಯೂ ಆಶಾ ಕಾರ್ಯಕರ್ತೆಯರು ಅತ್ಯಂತ ದಿಟ್ಟವಾಗಿ ಈ ಹೋರಾಟವನ್ನು ಸಂಘಟಿಸಿರುವುದಕ್ಕೆ ಎಐಯುಟಿಯುಸಿ ಸಂಯೋಜಿತ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘವು ಸಮಸ್ತ ಆಶಾಗಳನ್ನು ಅಭಿನಂದಿಸುತ್ತದೆ ಎಂದವರು ತಿಳಿಸಿದರು.
ಈ ಸಂದರ್ಭದಲ್ಲಿ ರಾಜ್ಯದ ಉದ್ದಗಲಕ್ಕೂ ಅನೇಕ ಗಣ್ಯರು, ಪ್ರಗತಿಪರ ಸಂಘಟನೆಗಳು ರಾಜ್ಯ ಸರ್ಕಾರದ ನಿರ್ಲಿಪ್ತ, ನಿರ್ಲಕ್ಷ ಧೋರಣೆಯನ್ನು, ಸರ್ಕಾರ ಮಾತು ತಪ್ಪಿರುವುದನ್ನು ಖಂಡಿಸಿ ಈ ಹೋರಾಟವನ್ನು ಬೆಂಬಲಿಸಿರುವುದಕ್ಕೆ ಸಂಘವು ಎಲ್ಲರಿಗೂ ವಂದನೆ ಸಲ್ಲಿಸುತ್ತದೆ. ಆಶಾಗಳ ನ್ಯಾಯೋಚಿತ ಹೋರಾಟವನ್ನು ಮುಂದೆಯೂ ಸಹ ಇದೇ ರೀತಿ ಬೆಂಬಲಿಸಬೇಕೆಂದು ಅವರು ಮನವಿ ಮಾಡಿದ್ದಾರೆ.
ಈ ಹೋರಾಟದ ಪ್ರತಿಫಲವಾಗಿ ಮೊದಲನೆಯದಾಗಿ ಜನಸಂಖ್ಯೆ ಮಿತಿಯನ್ನು ಹೆಚ್ಚಿಸಿ ಆಶಾ ಕಾರ್ಯಕರ್ತೆಯರನ್ನು ವಜಾಗೊಳಿಸುವ ತೀರ್ಮಾನವನ್ನು ಕೈ ಬಿಟ್ಟಿರುವುದು, ಆಶಾ ಕಾರ್ಯಕರ್ತೆಯರ ಹೋರಾಟಕ್ಕೆ ಸಂದ ಜಯವಾಗಿದೆ. ಇಲಾಖೆ ಹೊರಡಿಸಿರುವ ಸುತ್ತೋಲೆಯಲ್ಲಿ ಗ್ರಾಮೀಣ ಭಾಗದಲ್ಲಿ ಗರಿಷ್ಠ ಒಂದು ಸಾವಿರ ಜನಸಂಖ್ಯೆಗೆ, ನಗರದಲ್ಲಿ ಗರಿಷ್ಠ 2000 ಜನಸಂಖ್ಯೆಗೆ ಒಬ್ಬ ಆಶಾ ಕೆಲಸ ಮಾಡಬೇಕೆಂಬ ಹಳೆಯ ಮಾರ್ಗ ಸೂಚಿಗೆ ಬದ್ಧವಾಗಿರುವುದು ಸ್ವಾಗತರ್ಹವಾಗಿದೆ. ಇದಕ್ಕೆ ತಕ್ಕಂತೆ ಇಲಾಖೆ ನಡೆದುಕೊಳ್ಳುವ ಬಗ್ಗೆ ಆಶಾ ಕಾರ್ಯಕರ್ತೆಯರು ಜಾಗರೂಕರಾಗಿರಬೇಕೆಂದು ಸಂಘವು ಈ ಸಂದರ್ಭದಲ್ಲಿ ಕರೆ ನೀಡಿದ್ದಾರೆ.
ಮೌಲ್ಯಮಾಪನದ ಕ್ರಮವೂ ಆಶಾ ಕಾರ್ಯ ದಕ್ಷತೆಯನ್ನು ಹೆಚ್ಚಿಸಲು ಮಾತ್ರ ಮಾಡಿದ್ದು ಕೆಲಸದಿಂದ ವಜಾಗೊಳಿಸಲಾಗುವುದು ಎಂಬ ಯಾವುದೇ ಆತಂಕ ಬೇಡ ಎಂದು ಇಲಾಖೆ ಸ್ಪಷ್ಟಿಕರಣ ನೀಡಿದೆ. ನಿಜ,ಈ ಎಲ್ಲಾ ಬೆಳವಣಿಗೆಗಳು ಆಶಾ ಹೋರಾಟಕ್ಕೆ ದೊರೆತ ಯಶಸ್ಸುಗಳಾಗಿವೆ. ಆದರೆ ಇಲಾಖೆಯ ಈ ನಡೆಗಳ ಬಗ್ಗೆಯೂ ಸದಾ ಜಾಗೃತರಾಗಿ ಇರಬೇಕಿದೆ. ಇಲಾಖೆ ಸುತ್ತೋಲೆಯಲ್ಲಿ ಪ್ರಮುಖವಾಗಿ ಕನಿಷ್ಠ 10000 ಖಾತ್ರಿಪಡಿಸುವ, ಬಜೆಟ್ ಘೋಷಣೆಯ ಒಂದು ಸಾವಿರ ಜಾರಿಗೊಳಿಸುವ, ಯಾವುದೇ ಆದೇಶಗಳು ಸ್ಪಷ್ಟವಾಗಿ ಬಂದಿಲ್ಲ. ಆದರೆ ಸಚಿವರು ಈಗಾಗಲೇ ರೂ.10,000 ಸಿಗುತ್ತಿದೆ ಎಂದು ಸುಳ್ಳನ್ನು ಹೇಳುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸುತ್ತೋಲೆಯಲ್ಲಿ ಕೇಂದ್ರಸರ್ಕಾರ ಪ್ರೋತ್ಸಾಹ ಧನವನ್ನು ಹೆಚ್ಚಿಸಿರುವ ಬಗ್ಗೆ ಪ್ರಸ್ತಾಪಿಸಲಾಗಿದೆ. ಈ ಹೆಚ್ಚಳ ಸಹ ನಮ್ಮ AIUTUC ನಾಯಕತ್ವದಲ್ಲಿ ಆಶಾ ಸಂಘವು ಇಡೀ ದೇಶದಾದ್ಯಂತ ಕೈಗೊಂಡ ಹಲವಾರು ಹೋರಾಟಗಳ ಪ್ರತಿಫಲವಾಗಿದೆ. ಆದ್ದರಿಂದ ಕೇಂದ್ರದ ಪ್ರೋತ್ಸಾಹ ಧನ ಹೆಚ್ಚಳವನ್ನು ಪ್ರತ್ಯೇಕವಾಗಿಯೇ ಜಾರಿಗೊಳಿಸಬೇಕೆಂದು ಸಂಘವು ಆಗ್ರಹಿಸುತ್ತದೆ. ಈ ಬಗ್ಗೆ ಮುಂದಿನ ಉನ್ನತ ಹಂತದ ಹೋರಾಟದ ರೂಪುರೇಯನ್ನು ನಿರ್ಧರಿಸಲು ಆಶಾ ಸಂಘದ ರಾಜ್ಯ ಸಮಿತಿಯು ತಕ್ಷಣ ಸಭೆ ಸೇರಿ ಮುಂದಿನ ಹಂತದ ಸುದೀರ್ಘ ಹೋರಾಟವನ್ನು ತೀರ್ಮಾನಿಸಲಿದೆ ಎಂದವರು ಮಾಧ್ಯಮಗಿಗೆ ಮಾಹಿತಿ ನೀಡಿದ್ದಾರೆ.