ಬೆಂಗಳೂರು: ಮಾತು ಮರೆತ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಸಿಡಿದೆದ್ದಿರುವ ಆಶಾ ಕಾರ್ಯಕರ್ತೆಯರು ಈ ಬಾರಿ ಸರ್ಜಿಕಲ್ ಸ್ಟ್ರೈಕ್ ನಡೆಸಲು ಮುಂದಾಗಿದ್ದಾರೆ. ಈವರೆಗೂ ಭರವಸೆ ನೀಡುತ್ತಾ ಕೈತೊಳೆಯುತ್ತಿದ್ದ ಸರ್ಕಾರದ ಮುಂದೆ ಈ ಬಾರಿ ನಾರೀ’ಶಕ್ತಿ’ ಪ್ರದರ್ಶಿಸಲು ಆಶಾ ಕಾರ್ಯಕರ್ತೆಯರು ಸಜ್ಜಾಗಿದ್ದಾರೆ.
ಈ ಸಂಬಂಧ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ(ಎಐಯುಟಿಯುಸಿ) ರಾಜ್ಯ ಕಾರ್ಯದರ್ಶಿ ಡಿ.ನಾಗಲಕ್ಷ್ಮಿ ಅವರು ರಾಜ್ಯ ಸರ್ಕಾರಕ್ಕೆ ನೀಡಿರುವ ಎಚ್ಚರಿಕೆಯ ಸಂದೇಶ ಗಮನಸೆಳೆದಿದೆ. ಬೆಂಗಳೂರಿನಲ್ಲಿ ಸಂಘದ ರಾಜ್ಯ ಉಪಾಧ್ಯಕ್ಷರಾದ ರಮಾ ಟಿ ಸಿ ಜಿಲ್ಲಾ ಕಾರ್ಯದರ್ಶಿ ಫರಾಹನಾ ಉಪಸ್ಥಿತಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಡಿ.ನಾಗಲಕ್ಷ್ಮಿ, ಜನವರಿ 7ರಿಂದ 10 ರವರೆಗೆ ಬೆಂಗಳೂರಿನ ಫ್ರೀಡಂ ಪಾರ್ಕ್’ನಲ್ಲಿ ಆಶಾ ಕಾರ್ಯಕರ್ತೆಯರ ರಾಜ್ಯ ಮಟ್ಟದ ಅನಿರ್ದಿಷ್ಟ ಹೋರಾಟ ನಡೆಯಲಿದೆ ಎಂದು ತಿಳಿಸಿದರು.
ಆಶಾ ಕಾರ್ಯಕರ್ತೆಯರು ಗ್ರಾಮೀಣ ಮತ್ತು ನಗರ ಕೊಳಚೆ ಪ್ರದೇಶದ ಆರೋಗ್ಯದ ಆಶಾಕಿರಣ. ಆರೋಗ್ಯ ಸೇವೆಗಳನ್ನು ಪಡೆಯಲು ಕಷ್ಟಪಡುವ ಗ್ರಾಮೀಣ ಜನತೆಯ, ವಿಶೇಷವಾಗಿ ಮಹಿಳೆಯರು ಮತ್ತು ಮಕ್ಕಳ ಯಾವುದೇ ಆರೋಗ್ಯ ಸಂಬಂಧಿತ ಬೇಡಿಕೆಗಳಿಗೆ ಆಶಾ ಮೊದಲ ಕರೆ ಕೇಂದ್ರವಾಗಿದೆ. ಜನತೆಯ ಮತ್ತು ಸರ್ಕಾರದ ನಿರೀಕ್ಷೆಯಂತೆ ಆಶಾ ತನ್ನ ಸೇವೆಯಿಂದ ಕಟ್ಟಕಡೆಯ ಜನರನ್ನೂ ಆರೋಗ್ಯವಂತರನ್ನಾಗಿಡಲು ಹಗಲು-ರಾತ್ರಿ ಶ್ರಮಿಸುತ್ತಿರುವರು. ಇವರ ಸೇವೆಗೆ ಸಮುದಾಯದಿಂದ ಸಿಗುವ ಗೌರವಾದರಗಳು ಸಂತಸ ನೀಡಿವೆಯಾದರೂ, ಸೇವೆ ಪಡೆದುಕೊಳ್ಳುವ ನಮ್ಮ ಸರ್ಕಾರಗಳು ಇವರ ಸೇವೆಗೆ ತಕ್ಕ ಪ್ರತಿಫಲ ನೀಡದೆ ನಿರಾಸೆಯಲ್ಲಿರುವಂತೆ ಮಾಡಿವೆ. ಹಾಗಾಗಿ ಮಾತುತಪ್ಪಿದ ಸರ್ಕಾರದ ವಿರುದ್ಧ ಹೋರಾಟ ಅನಿವಾರ್ಯವಾಗಿದೆ ಎಂದು ತಿಳಿಸಿದರು.
ಮುಖ್ಯಮಂತ್ರಿಗಳು ಕಳೆದ 7 ತಿಂಗಳ ಹಿಂದೆ ತೀರ್ಮಾನಿಸಿ, ಘೋಷಿಸಿದ ಆದೇಶಗಳನ್ನು ಕೂಡಲೇ ಮಾಡಬೇಕೆಂದು ಮತ್ತು ವಿವಿಧ ಹಕ್ಕೊತ್ತಾಯಗಳ ಈಡೇರಿಕೆಗೆ ಆಗ್ರಹಿಸಿ, ಎಲ್ಲಾ ಜಿಲ್ಲೆಗಳಲ್ಲಿ ಈಗಾಗಲೇ ಆಶಾ ಕಾರ್ಯಕರ್ತೆಯರು ಪ್ರತಿಭಟನೆ ನಡೆಡಿದ್ದು, ಇದೀಗ ಈ ತಿಂಗಳ 12,13,14 ರಂದು ರಾಜ್ಯವ್ಯಾಪಿ ಜಿಲ್ಲಾ ಮಟ್ಟದ ಅಹೋರಾತ್ರಿ ಪ್ರತಿಭಟನಾ ಧರಣಿ ನಡೆಸಲಾಗುವುದು ಎಂದು ಡಿ.ನಾಗಲಕ್ಷ್ಮಿ ತಿಳಿಸಿದರು. ಸರ್ಕಾರ ‘ಮಾತುಕೊಟ್ಟಂತೆ ನಡೆದುಕೊಳ್ಳಬೇಕು’ ಎಂದು ಆಗ್ರಹಿಸುವ ಮೂಲಕ ಆಶಾ ಕಾರ್ಯಕರ್ತೆಯರು ಒಗ್ಗಟ್ಟು ಪ್ರದರ್ಶಿಸಲಿದ್ದಾರೆ ಎಂದು ಅವರು ತಿಳಿಸಿದರು.
ಆಶಾ ಕಾರ್ಯಕರ್ತೆಯರಿಗೆ ರೂ.15000 ನಿಶ್ಚಿತ ಗೌರವಧನಕ್ಕಾಗಿ ಆಗ್ರಹಿಸಿ ನಡೆಸಿದ ಈ ಹಿಂದಿನ ಹೋರಾಟದಲ್ಲಿ ರಾಜ್ಯದ ಸುಮಾರು 42000 ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು. ಇದೀಗ ಮತ್ತೆ ನಮ್ಮ ಶಕ್ತಿ ಪ್ರದರ್ಶನ ಮಾಡುತ್ತೇವೆ ಎಂದಿರುವ ನಾಗಲಕ್ಷ್ಮಿ, ಜನವರಿ 10 ರಂದು ಆಶಾ ಕಾರ್ಯಕರ್ತೆಯರ ಬೇಡಿಕೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ, ಮಾನ್ಯ ಮುಖ್ಯಮಂತ್ರಿಗಳು ಸಂಘದ ಪದಾಧಿಕಾರಿಗಳನ್ನು ಕರೆದು ಸಭೆ ಮಾಡಿರುತ್ತಾರೆ. ಈ ಸಭೆಯಲ್ಲಿ ನಮ್ಮೊಂದಿಗೆ ಮಾನ್ಯ ಆರೋಗ್ಯ ಮಂತ್ರಿಗಳು, ಆರೋಗ್ಯ ಇಲಾಖೆಯ ಉನ್ನತ ಅಧಿಕಾರಿಗಳು ಉಪಸ್ಥಿತರಿದ್ದರು.
ಏಪ್ರಿಲ್ 2025ರಿಂದ ಪ್ರತಿ ತಿಂಗಳು ಎಲ್ಲಾ ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹಧನ ಸೇರಿಸಿ ಕನಿಷ್ಟ ರೂ.10000ಗಳ ಗೌರವಧನವನ್ನು ನೀಡಲಾಗುವುದು. ರೂ.10000 ಹೊರತುಪಡಿಸಿ, ಕಾಂಪೋನೆAಟ್‌ಗಳ ಹೆಚ್ಚುವರಿ ಕೆಲಸದ ಆಧಾರದ ಮೇಲೆ ಹೆಚ್ಚುವರಿ ಇನ್ಸೆಂಟಿವ್ ಕೂಡ ನೀಡಲಾಗುವುದು. ಒಂದು ವೇಳೆ ಯಾರಿಗಾದರೂ ಕಾಂಪೋನೆಂಟ್ ಕಡಿಮೆ ಮೊತ್ತದ ಪ್ರೋತ್ಸಾಹಧನ ಬಂದಿದ್ದಲ್ಲಿ, ಅಂತಹ ಆಶಾ ಕಾರ್ಯಕರ್ತೆಯರಿಗೆ, ಸರ್ಕಾರವೇ ವ್ಯತ್ಯಾಸದ ಹಣವನ್ನು ಪಾವತಿಸಿ, ರೂ. 10000 ಗ್ಯಾರಂಟಿಯಾಗಿ ದೊರೆಯುವಂತೆ ಕ್ರಮಕೈಗೊಳ್ಳಲಾಗುವುದು. ಈ ಕುರಿತು ಕೂಡಲೇ ಸರ್ಕಾರದಿಂದ ಆದೇಶಿಸಬೇಕು ಎಂದು ಆ ಸಭೆಯಲ್ಲಿ ತೀರ್ಮಾನವಾಗಿತ್ತು. ಆದರೆ ಸರ್ಕಾರ ಈ ತೀರ್ಮಾನದಂತೆ ನಡೆದುಕೊಂಡಿಲ್ಲ ಎಂದವರು ಆಕ್ರೋಶ ಹೊರಹಾಕಿದರು.
ಈ ವರ್ಷದ ಬಜೆಟ್‌ನಲ್ಲಿ ಎಲ್ಲಾ ಅಂಗನವಾಡಿ, ಬಿಸಿಯೂಟ ಕಾರ್ಯಕರ್ತೆಯರಿಗೆ ಹೆಚ್ಚಿಸಿದಂತೆ ಆಶಾ ಕಾರ್ಯಕರ್ತೆಯರಿಗೆ ಹೆಚ್ಚಳ ಮಾಡಲಾಗುವುದು ಎಂದು ಭರವಸೆ ನೀಡಲಾಗಿತ್ತು. ಅಂಗನವಾಡಿ, ಬಿಸಿಯೂಟ ಕಾರ್ಯಕರ್ತೆಯರಿಗೆ ರೂ.1000 ಹೆಚ್ಚಿಸಿದಂತೆ 42000 ಆಶಾ ಕಾರ್ಯಕರ್ತೆಯರಿಗೆ ರೂ.1000 ಹೆಚ್ಚಳ ಮಾಡಬೇಕು. ಆದರೆ ಈ ಬಜೆಟ್‌ನಲ್ಲಿ ಕೇವಲ 15004 ಆಶಾಗಳಿಗೆ ಕಡಿಮೆ ಇದ್ದ ತಂಡ ಆಧಾರಿತ ಪ್ರೋತ್ಸಾಹಧನ ರೂ.1000 ಮಾತ್ರ ನೀಡಲಾಗಿದೆ ಎಂದೂ ನಾಗಲಕ್ಷ್ಮಿ ಗಮನಸೆಳೆದರು.
ಈ ತೀರ್ಮಾನಗಳನ್ನು ಆರೋಗ್ಯ ಇಲಾಖೆಯ ಆಯುಕ್ತರು ಸರ್ಕಾರದ ಪರವಾಗಿ ಪ್ರತಿಭಟನಾ ಸ್ಥಳ ಫ್ರೀಡಂ ಪಾರ್ಕ್ಗೆ ಆಗಮಿಸಿ ಸಾವಿರಾರು ಆಶಾಗಳ ಮುಂದೆ ಬಂದು ಘೋಷಣೆ ಮಾಡಿದ್ದರು. ನಂತರ ಹೋರಾಟ ಹಿಂತೆಗೆದುಕೊಳ್ಳಲಾಯಿತು. ಮಾಧ್ಯಮಗಳಲ್ಲೂ ಕೂಡ ಅಧಿಕೃತವಾಗಿ ಮುಖ್ಯಮಂತ್ರಿಗಳು ಘೋಷಿಸಿರುತ್ತಾರೆ. ಆಡಳಿತ ಪಕ್ಷದ ಹಲವಾರು ಸಚಿವರುಗಳು, ಶಾಸಕರು ಈ ಬಗ್ಗೆ ಪೋಸ್ಟ್’ಗಳನ್ನೂ ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಆದರೆ ನೋವಿನ ವಿಷಯವೆಂದರೆ ಇಲ್ಲಿಯವರಗೆ 7 ತಿಂಗಳು ಕಳೆದರೂ ಈ ಕುರಿತು ಸ್ಪಷ್ಟ ಆದೇಶ ಹೊರಬಿದ್ದಿಲ್ಲ ಎಂದು ನಾಗಲಕ್ಷ್ಮಿ ತಿಳಿಸಿದರು.
ಈ ನಡುವೆ, ಆಶಾ ಕಾರ್ಯಕರ್ತೆಯರಿಗೆ ಇತ್ತೀಚಿಗೆ ಇಲಾಖೆಯಿಂದ ಆತಂಕ ಮೂಡಿಸುವ ಆದೇಶಗಳನ್ನುಮಾಡಲಾಗಿದೆ, ಆದರೆ ಸೂಕ್ತ ಪರಿಹಾರ ನೀಡಿಲ್ಲ. ಆಶಾಗಳಲ್ಲಿಯೇ ಒಬ್ಬರನ್ನು ಕಳೆದ 10 ವರ್ಷಗಳಿಂದ 20ಆಶಾಗಳಿಗೆ ಒಬ್ಬರಂತೆ ಸುಮರು 2000 ಸುಗಮಕಾರರಾಗಿ ಕೆಲಸಕ್ಕೆ ಪಡೆದುಕೊಂಡು ಧಿಡೀರನೆ ತೆಗೆದು ಹಾಕಲಾಗಿದೆ. 60 ವರ್ಷ ವಯಸ್ಸಿನ ಆಶಾ ಕಾರ್ಯಕರ್ತೆಯರಿಗೆ ಧಿಡೀರನೆ ತೆಗೆದು ನಿವೃತ್ತಿ ಮಾಡಿರುತ್ತಾರೆ. 17 ವರ್ಷದಿಂದ ಸೇವೆ ಮಾಡಿದ ಈ ಆಶಾಗೆ ಯಾವುದೇ ಪರಿಹಾರ ನೀಡದೆ ಸರ್ಕಾರ ಬೀದಿಗೆ ತಳ್ಳಿದೆ. ಈಗ ಕಾರ್ಯ ನಿರ್ವಹಿಸುವ ಸುಮಾರು 41000 ಆಶಾಗಳಿಗೆ ಅವರ ಕೆಲಸದ ಮೌಲ್ಯಮಾಪನ ಮಾಡುವ ಆದೇಶ ಹೊರಡಿಸಿ ವಿವಿಧ ರೀತಿಯಲ್ಲಿ ಮೌಲ್ಯಮಾಪನ ಮಾಡಿಸುತ್ತಿದ್ದಾರೆ. ಈ ಅವೈಜ್ಞಾನಿಕ ವಿಧಾನದಿಂದಾಗಿ ಕೆಲಸ ಕಳೆದುಕೊಳ್ಳುವ ಆತಂಕವನ್ನು ಅನುಭವಿಸುತ್ತಿರುವುದರಿಂದಾಗಿ ಮೌಲ್ಯಮಾಪನದ ಮಾದರಿಯನ್ನು ಸಂಘವು ವಿರೋಧಿಸುತ್ತಿದೆ ಎಂದವರು ತಿಳಿಸಿದರು.
ಜನಸಂಖ್ಯೆ ವಿಂಗಡಣೆಯನ್ನು ಈಗಾಗಲೇ ಅಲ್ಲಿಯ ಭೌಗೋಳಿಕರಣಕ್ಕೆ ತಕ್ಕಂತೆ ವಿಂಗಡಿಸಿದ್ದಾರೆ. ಮತ್ತಷ್ಟು ಜನಸಂಖ್ಯೆ ಹೆಚ್ಚಿಸಿದಲ್ಲಿ ಆಶಾಗಳಿಗೆ ಕಾರ್ಯನಿರ್ವಹಿಸಲು ತೊಂದರೆ ಆಗುತ್ತದೆ. 3-4 ಹಳ್ಳಿಗಳು ಬಂದರೆ ಕಾರ್ಯನಿರ್ವಹಿಸಲು ಕಷ್ಟವಾಗುತ್ತದೆ. ಇದರಿಂದ ಆಶಾಗಳಿಗೆ ಆತಂಕ ಸೃಷ್ಟಿಯಾಗಿದೆ ಎಂದವರು ಗಮನಸೆಳೆದರು.
ಹಕ್ಕೊತ್ತಾಯಗಳು:
- ಮುಖ್ಯಮಂತ್ರಿ ಘೋಷಿಸಿದ ರಾಜ್ಯದ ಗೌರವಧನ ಮತ್ತು ಕೇಂದ್ರದ ಭಾಗಶಃ ಪ್ರೋತ್ಸಾಹ ಧನ ಸೇರಿಸಿ ಮಾಸಿಕ ಕನಿಷ್ಠ ರೂ.10 ಸಾವಿರ ಗ್ಯಾರಂಟಿಯನ್ನು ಈ ಏಪ್ರಿಲ್ ತಿಂಗಳಿನಿಂದ ಅನ್ವಯವಾಗುವಂತೆ ಆದೇಶ ಹೊರಡಿಸಬೇಕು.
- 2025 ಮಾರ್ಚ್ ರಾಜ್ಯ ಬಜೆಟ್‌ನಲ್ಲಿ ಎಲ್ಲಾ ಅಂಗನವಾಡಿ ಮತ್ತು ಬಿಸಿಯೂಟ ಕಾರ್ಯಕರ್ತೆಯರಿಗೆ ರೂ. 1000 ಪ್ರೋತ್ಸಾಹಧನ ಹೆಚ್ಚಳ ಮಾಡಿದಂತೆಯೇ ಎಲ್ಲಾ ಆಶಾ ಕಾರ್ಯಕರ್ತೆಯರಿಗೂ ಸಹ ಹೆಚ್ಚಳ ಮಾಡಬೇಕು.
- ತರ್ಕಬದ್ದಗೊಳಿಸುವ ಹೆಸರಿನಲ್ಲಿ ಆಶಾ ಕಾರ್ಯಕರ್ತೆಯರು ಕಾರ್ಯನಿರ್ವಹಿಸುವ ಜನಸಂಖ್ಯೆಯ ಮಿತಿಯನ್ನು ಹೆಚ್ಚಿಸುವುದನ್ನು ಕೈಬಿಡಿ. ಈ ಹೆಸರಲ್ಲಿ ಯಾವುದೇ ಆಶಾ ಕಾರ್ಯಕರ್ತೆಯರನ್ನು ಕೆಲಸದಿಂದ ತೆಗೆಯಬಾರದು.
- ಅವೈಜ್ಞಾನಿಕ ಆಶಾ ಕಾರ್ಯಕರ್ತೆಯರ ಕಾರ್ಯನಿರ್ವಹಣಾ ಮೌಲ್ಯಮಾಪನ ಕೈಬಿಡಬೇಕು.
- ಆಶಾ ಸುಗಮಕಾರರನ್ನು ಸೂಕ್ತ ವೇತನದೊಂದಿಗೆ ಮುಂದುವರೆಸಬೇಕು.
- ನಿವೃತ್ತ ಆಶಾಗಳಿಗೆ ಪಶ್ಚಿಮ ಬಂಗಾಳ ಮಾದರಿಯಲ್ಲಿ ಇಡಿಗಂಟು ನೀಡಬೇಕು.
- ನಗರ ಆಶಾಗಳಿಗೆ ರೂ.2000 ಗೌರವಧನ ಹೆಚ್ಚಿಸಬೇಕು.
- 2025 ಜೂನ್-ಜುಲೈನಲ್ಲಿ ಕೇಂದ್ರ ಸರ್ಕಾರ ಹೆಚ್ಚಿಸಿದ ಪ್ರೋತ್ಸಾಹ ಧನವನ್ನು ರಾಜ್ಯದಲ್ಲಿ ಜಾರಿಗೊಳಿಸಬೇಕು.