ಆಶಾ ಕಾರ್ಯಕರ್ತೆಯರಿಗೆ ನಿಶ್ಚಿತ ಗೌರವಧನ ರೂ.೫,೦೦೦, ರಾಷ್ಟೀಯ ಆರೋಗ್ಯ ಅಭಿಯಾನದ ಪ್ರೋತ್ಸಾಹಧನ-ರೂ.೨,೦೦೦, ಹಾಗೂ ಟೀಮ್ ಬೇಸ್ಡ್ ಇನ್ಸೆಂಟಿವ್ ರೂ.೧,೦೦೦, ಒಟ್ಟು ರೂ.೮,೦೦೦ ಕೊಡುಗೆ..
ಬೆಂಗಳೂರು: ಆಶಾ ಕಾರ್ಯಕರ್ತೆಯರ ಬೇಡಿಕೆಗಳನ್ನು ಈಡೇರಿಸಲು ಅಗತ್ಯವಿರುವ ಅನುದಾನಕ್ಕಾಗಿ ಸರ್ಕಾರಕ್ಕೆ ಆರೋಗ್ಯ ಇಲಾಖೆಯು ಪ್ರಸ್ತಾವನೆ ಸಲ್ಲಿಸಿದೆ. ಈ ಮೂಲಕ ಆಶಾ ಕಾರ್ಯಕರ್ತೆಯರ ಬಹುವದಿನಗಳ ಬೇಡಿಕೆ ಈಡೇರಿಸುವ ಪ್ರಕ್ರಿಯೆಗೆ ಸರ್ಕಾರ ಮುನ್ನುಡಿ ಬರೆದಿದೆ. ಆರೋಗ್ಯ ಇಲಾಖೆಯ ಈ ಕ್ರಮವನ್ನು ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ, ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್ (AIUTUC) ಸ್ವಾಗತಿಸಿದೆ.
ಆಶಾ ಕಾರ್ಯಕರ್ತೆಯರ ಬೇಡಿಕೆಗಳನ್ನು ಈಡೇರಿಸಬೇಕೆಂದು AIUTUCಯ ‘ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ”ದ ವತಿಯಿಂದ ಮೇ17ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ನಡೆದ ರಾಜ್ಯ ಮಟ್ಟದ ಬೃಹತ್ ಪ್ರತಿಭಟನೆಯ ಪ್ರತಿಫಲವಾಗಿ ಆರೋಗ್ಯ ಇಲಾಖೆಯ ಅಧಿಕಾರಿಗಳು ಜೂನ್ 2ರಂದು ಸಂಘದ ಪದಾಧಿಕಾರಿಗಳೊಂದಿಗೆ ಸಭೆ ನಡೆಸಿ ಹಲವು ಬೇಡಿಕೆಗಳನ್ನು ಈಡೇರಿಸುವುದಾಗಿ ಪ್ರತಿಕ್ರಿಯಿಸಿದ್ದರು. ಆರೋಗ್ಯ ಇಲಾಖೆಯು ಇತ್ತೀಚೆಗೆ ಹೊರಡಿಸಿದ್ದ ಅಧಿಕೃತ ಜ್ಞಾಪನಾ ಪತ್ರದಲ್ಲಿ ಆಶಾ ಕಾರ್ಯಕರ್ತೆಯರದ್ದಲ್ಲದ ಹಲವು ಕೆಲಸಗಳನ್ನು, ಆರೋಗ್ಯ ಇಲಾಖೆ ಅಲ್ಲದೆ ಇತರೆ ಸಂಬಂಧ ಪಡದ ಇಲಾಖೆಗಳ ಕೆಲಸಗಳನ್ನು ಆಶಾಗಳು ಮಾಡಬೇಕೆಂದು ಆ ಪತ್ರದಲ್ಲಿ ನಿರ್ದೇಶಿಸಲಾಗಿತ್ತು. ಆ ಅಧಿಕೃತ ಜ್ಞಾಪನಾ ಪತ್ರವನ್ನು ಹಿಂಪಡೆಯಬೇಕು ಎನ್ನುವುದು ಹೋರಾಟದ ಪ್ರಮುಖ ಬೇಡಿಕೆಗಳಲ್ಲೊಂದಾಗಿತ್ತು. ಸಭೆಯಲ್ಲಿ ಒಪ್ಪಿಕೊಂಡಂತೆ ಆರೋಗ್ಯ ಇಲಾಖೆ ಆಯುಕ್ತರು ಆ ಪತ್ರವನ್ನು ಹಿಂಪಡೆದಿದ್ದಾರೆ ಎಂದು ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಅಧ್ಯಕ್ಷರಾದ ಡಿ. ನಾಗಲಕ್ಷ್ಮಿ ಹಾಗೂ ಕಾರ್ಯದರ್ಶಿ ಕೆ.ಸೋಮಶೇಖರ್ ಯಾದಗಿರಿ ಸಂತಸ ಹಂಚಿಕೊಂಡಿದ್ದಾರೆ.
ಈ ಕುರಿತಂತೆ ಮಾಧ್ಯಮಗಳಿಗೆ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಆಶಾ ಕಾರ್ಯಕರ್ತೆಯರ ಬೇಡಿಕೆಗಳನ್ನು ತಾತ್ವಿಕವಾಗಿ ಒಪ್ಪಿಕೊಂಡು ಅದನ್ನು ಅನುಷ್ಠಾನ ಗೊಳಿಸಲು ಅಗತ್ಯವಿರುವ ೪೮ ಕೋಟಿ ರೂ.ಗಳ ಅನುದಾನ ಬಿಡುಗಡೆ ಮಾಡುವಂತೆ ಆರೋಗ್ಯ ಇಲಾಖೆ ವತಿಯಿಂದ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದಿದ್ದಾರೆ.
ಪ್ರಮುಖ ಕ್ರಮಗಳ ವಿವರ ಹೀಗಿದೆ:
- ನಗರ ಪ್ರದೇಶದ ಜನಸಂಖ್ಯೆ ಮತ್ತು ಜೀವನ ವೆಚ್ಚವನ್ನು ಪರಿಗಣಿಸಿ ರೂ.೨,೦೦೦ ಹೆಚ್ಚುವರಿ ಪ್ರೋತ್ಸಾಹಧನವನ್ನು ನೀಡಲು ಪ್ರಸ್ತಾವನೆ ಸಲ್ಲಿಸಲಾಗಿದೆ.
- ಆಶಾ ಸುಗಮಕಾರರು ಮತ್ತು ಆಶಾ ಕಾರ್ಯಕರ್ತೆಯರ ಜವಾಬ್ದಾರಿಗಳನ್ನು ಪ್ರತ್ಯೇಕಗೊಳಿಸಿ ರಾಜ್ಯ ಸರ್ಕಾರದಿಂದ ಹೆಚ್ಚುವರಿಯಾಗಿ ಮಾಸಿಕ ನಿಶ್ಚಿತ ಗೌರವಧನವನ್ನು ನೀಡಲು ಪ್ರಸ್ತಾವನೆ ಸಲ್ಲಿಸಲಾಗಿದೆ.
- ಗಂಭೀರ ಖಾಯಿಲೆಗಳಿಂದ ಬಳಲುತ್ತಿರುವ ಆಶಾ ಕಾರ್ಯಕರ್ತೆಯರಿಗೆ ಚೇತರಿಕೆ ಅವಧಿಯಲ್ಲಿ (ಮೂರು ತಿಂಗಳ ಅವಧಿಗೆ) ಮಾಸಿಕ ನಿಶ್ಚಿತ ಗೌರವಧನವನ್ನು ಪಾವತಿ ಮಾಡಲು ಅಗತ್ಯವಿರುವ ಅನುದಾನಕ್ಕಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ.
- ರಾಜ್ಯ ಸರ್ಕಾರದಿಂದ ಕೋವಿಡ್-೧೯ ವಿಶೇಷ ಪ್ರೋತ್ಸಾಹಧನವನ್ನು ಮಾರ್ಚ್ ೨೦೨೨ ರವರೆಗೆ ಮಾತ್ರ ನೀಡಲಾಗಿದ್ದು, ಏಪ್ರಿಲ್ ೨೦೨೨ ರ ನಂತರವೂ ಕೋವಿಡ್-೧೯ ಲಸಿಕಾಕರಣ ಚಟುವಟಿಕೆಳಲ್ಲಿ ಆಶಾ ಕಾರ್ಯಕರ್ತೆಯರು ಸಕ್ರಿಯವಾಗಿ ಭಾಗಿಯಾಗಿರುತ್ತಾರೆ. ಈ ನಿಟ್ಟಿನಲ್ಲಿ ಏಪ್ರಿಲ್ ೨೦೨೨ ರಿಂದ ಸೆಪ್ಟೆಂಬರ್ ೨೦೨೨ ರವರೆಗೆ ಕೋವಿಡ್-೧೯ ವಿಶೇಷ ಪ್ರೋತ್ಸಾಹಧನದ ಮಂಜೂರಾತಿಗೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ.
- ರಾಜ್ಯ ಸರ್ಕಾರದ ಮಾಸಿಕ ನಿಶ್ಚಿತ ಗೌರವಧನ ರೂ.೫,೦೦೦/- ಜೊತೆಗೆ ರಾಷ್ಟಿçÃಯ ಆರೋಗ್ಯ ಅಭಿಯಾನದ ಆವರ್ತಕ ಮತ್ತು ನಿಯಮಿತ ಚಟುವಟಿಕೆಗಳ ಪ್ರೋತ್ಸಾಹಧನ-ರೂ.೨,೦೦೦/- ಹಾಗೂ ಟೀಮ್ ಬೇಸ್ಡ್ ಇನ್ಸೆಂಟಿವ್ ರೂ.೧,೦೦೦/-ನ್ನು ಒಟ್ಟುಗೂಡಿಸಿ ರೂ.೮,೦೦೦/-ಗಳನ್ನು ಭೌತಿಕವಾಗಿ ಒಟ್ಟಿಗೆ ನೀಡುವ ಬೇಡಿಕೆಯನ್ನು ಸಹ ತಾತ್ವಿಕವಾಗಿ ಒಪ್ಪಿಕೊಂಡು ಅದನ್ನು ಸಹ ರಾಜ್ಯ ಸರ್ಕಾರದ ಅನುಮೋದನೆಗಾಗಿ ಆರೋಗ್ಯ ಇಲಾಖೆ ವತಿಯಿಂದ ಪ್ರಸ್ತಾವನೆ ಸಲ್ಲಿಸಲಾಗುತ್ತಿದೆ.
ಇದೇ ವೇಳೆ, ಈ ಎಲ್ಲಾ ಪ್ರಸ್ತಾವನೆಗಳನ್ನು ಅನುಮೋದಿಸಿ ಅಗತ್ಯ ಅನುದಾನವನ್ನು ಬಿಡುಗಡೆ ಮಾಡಬೇಕೆಂದು AIUTUC “ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಅಧ್ಯಕ್ಷರಾದ ಡಿ. ನಾಗಲಕ್ಷ್ಮಿ ಹಾಗೂ ಕಾರ್ಯದರ್ಶಿ ಕೆ.ಸೋಮಶೇಖರ್ ಯಾದಗಿರಿ ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.


















































