ಬೆಂಗಳೂರು: ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಸ್ಥಿತ್ವಕ್ಕೆ ಬಂದ ಮೇಲೆ ಆರ್ಯವೈಶ್ಯ ಜನಾಂಗವನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದ್ದು ಈ ಸಾಲಿನಲ್ಲಿ ಕೇವಲ 5 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಮಾಜಿ ವಿಧಾನಪರಿಷತ್ ಸದಸ್ಯ, ಆರ್ಯವೈಶ್ಯ ಅಭಿವೃದ್ಧಿ ನಿಗಮದ ಸಂಸ್ಥಾಪಕ ಅಧ್ಯಕ್ಷ ಟಿ.ಎ.ಶರವಣ ಅಸಮಾಧಾನ ಹೊರಹಾಕಿದ್ದಾರೆ.
ಈ ಕುರಿತಂತೆ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಪತ್ರ ಬರೆದಿರುವ ಟಿ ಎ ಶರವಣ, ಸಂಪೂರ್ಣ ವ್ಯಾಪಾರದಲ್ಲಿ ತೊಡಗಿಸಿಕೊಂಡಿರುವ ಆರ್ಯವೈಶ್ಯ ಜನಾಂಗ ಸರ್ಕಾರಕ್ಕೆ ಅತಿ ಹೆಚ್ಚು ತೆರಿಗೆ ಕಟ್ಟುವ ಜನಾಂಗವಾಗಿದ್ದು, ಈ ಸಮುದಾಯದ ಅಭಿವೃದ್ಧಿ ಗಾಗಿ ಕೂಡಲೇ 25 ಕೋಟಿ ಅನುದಾನ ಬಿಡುಗಡೆ ಮಾಡುವಂತೆ ಆಗ್ರಹಿಸಿದ್ದಾರೆ.
ಟಿ.ಎ.ಶರವಣ ಅವರು ಸಿಎಂಗೆ ಬರೆದಿರುವ ಪತ್ರ ಹೀಗಿವೆ.
ಕರ್ನಾಟಕದಲ್ಲಿ ಅತಿಕಡಿಮೆ ಜನಸಂಖ್ಯೆ ಇರುವ ಆರ್ಯವೈಶ್ಯ ಜನಾಂಗವು ಹಿಂದಿನಿಂದಲೂ ಶೋಷಣೆಗೊಳಪಟ್ಟಿರುತ್ತದೆ. ಈ ಜನಾಂಗದ ಅಭಿವೃದ್ಧಿ ನಿಗಮ ಸ್ಥಾಪಿಸಲು ಬಹಳ ವರ್ಷಗಳ ಕಾಲ ಹೋರಾಟ ನಡೆಸಿದ ಫಲವಾಗಿ ಎಚ್ ಡಿ ಕುಮಾರಸ್ವಾಮಿ ಸಿಎಂ ಆಗಿದ್ದ ಅವಧಿಯಲ್ಲಿ ಆರ್ಯವೈಶ್ಯ ಅಭಿವೃದ್ಧಿ ನಿಗಮ ಸ್ಥಾಪನೆ ಯಾಗಿತ್ತು. ಅದರ ಸಂಸ್ಥಾಪಕ ಅಧ್ಯಕ್ಷರಾಗಿ ಟಿ ಎ ಶರವಣ ಅವರನ್ನು ನೇಮಿಸಿ ಹನ್ನೊಂದು ಕೋಟಿ ಅನುದಾನವನ್ನು ಬಿಡುಗಡೆ ಮಾಡಲಾಗಿತ್ತು. ಸುಮಾರು ಸಾವಿರ ಮಂದಿ ಫಲಾನುಭವಿಗಳು ಇದರ ಲಾಭವನ್ನು ಪಡೆದುಕೊಂಡಿದ್ದರು. ಆದರೆ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಸ್ಥಿತ್ವಕ್ಕೆ ಬಂದ ಮೇಲೆ ಆರ್ಯವೈಶ್ಯ ಜನಾಂಗವನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದ್ದು ಈ ಸಾಲಿನಲ್ಲಿ ಕೇವಲ 5 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಆಡಳಿತಾತ್ಮಕ ವೆಚ್ಚ ಕಳೆದು ಕೇವಲ 3 ಕೋಟಿಗಳಷ್ಟೇ ಫಲಾನುಭವಿಗಳಿಗೆ ಸಿಗುತ್ತದೆ. ಈಗಾಗಲೇ ಆರ್ಯವೈಶ್ಯ ಅಭಿವೃಧ್ದಿ ನಿಗಮಕ್ಜೆ ಸಹಾಯ ಕೋರಿ 4000 ಅರ್ಜಿಗಳು ಬಂದಿರುತ್ತವೆ, ಸರ್ಕಾರ ನೀಡಿರುವ ಅನುದಾನದಲ್ಲಿ ಕೇವಲ 300 ಜನರಿಗಷ್ಟೇ ಸಹಾಯ ಮಾಡಲು ಸಾದ್ಯವಾಗುತ್ತದೆ. ಸಂಪೂರ್ಣ ವ್ಯಾಪಾರದಲ್ಲಿ ತೊಡಗಿಸಿಕೊಂಡಿರುವ ಆರ್ಯವೈಶ್ಯ ಜನಾಂಗ ಸರ್ಕಾರಕ್ಕೆ ಅತಿ ಹೆಚ್ಚು ತೆರಿಗೆ ಕಟ್ಟುವ ಜನಾಂಗವಾಗಿದ್ದು, ಈ ಸಮುದಾಯದ ಅಭಿವೃದ್ಧಿ ಗಾಗಿ ಕೂಡಲೇ 25 ಕೋಟಿ ಅನುದಾನ ಬಿಡುಗಡೆ ಮಾಡುವಂತೆ ಸರ್ಕಾರದ ಮೇಲೆ ಈ ಮೂಲಕ ಒತ್ತಡ ಹಾಕುತ್ತಿದ್ದೇನೆ.
ಟಿ.ಎ.ಶರವಣ