ಮೂಡಾ ಸೈಟ್ ಹಗರಣದಲ್ಲಿ ಮತ್ತಷ್ಟು ಪ್ರಭಾವಿ ನಾಯಕರು? ಬಿಜೆಪಿ-ಜೆಡಿಎಸ್ ನಾಯಕರೂ ಅಕ್ರಮ ಫಲಾನುಭವಿಗಳು? ಸಿದ್ದು ಸರ್ಕಾರದ ವಿರುದ್ದ ರಣಕಹಳೆ ಮೊಳಗಿಸಿದ ಪ್ರತಿಪಕ್ಷಗಳ ವಿರುದ್ದವೇ ಕೈ ನಾಯಕರ ರಣವ್ಯೂಹ..!
ಬೆಂಗಳೂರು: ಮೂಡಾ ಹಗರಣ ಮುಂದಿಟ್ಟು ಸರ್ಕಾರದ ವಿರುದ್ದ ಪ್ರತಿಪಕ್ಷಗಳನ್ನು ಕಟ್ಟಿಹಾಕಲು ಕಾಂಗ್ರೆಸ್ ನಾಯಕ ರಮೇಶ್ ಬಾಬು ನಡೆಸಿರುವ ಪ್ರಯತ್ನ ಗಮನಸೆಳೆದಿದೆ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮೂಡಾ) ಸೈಟ್ ಹಂಚಿಕೆ ಅಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಕುಟುಂಬದ ನಂಟಿನ ಬಗ್ಗೆ ಬಿಜೆಪಿ-ಜೆಡಿಎಸ್ ಆರೋಪ ಮಾಡುತ್ತಿದ್ದು, ವಿಧಾನಮಂಡಲ ಅಧಿವೇಶನದಲ್ಲಿ ಸರ್ಕಾರದ ವಿರುದ್ದ ಸಮರಕ್ಕೆ ಸಿದ್ದತೆ ನಡೆಸಿವೆ.
ಈ ನಡುವೆ, ಜೆಡಿಎಸ್ ವರಿಷ್ಠ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಕುಟುಂಬಕ್ಕೂ ಮೂಡಾ ಮೂಲಕ ಅಕ್ರಮವಾಗಿ ಸೈಟ್‌ಗಳನ್ನು ಹಂಚಿಕೆ ಮಾಡಲಾಗಿದೆ ಎಂಬ ಸಂಗತಿಯನ್ನು ಕೆಪಿಸಿಸಿ ಸಂವಹನ ವಿಭಾಗದ ಅಧ್ಯಕ್ಷ ರಮೇಶ್ ಬಾಬು ಬಯಲುಮಾಡಿದ್ದಾರೆ. ದೇವೇಗೌಡ ಕುಟುಂಬದ ಈ ಅಕ್ರಮಗಳ ಬತ ಬಿಜೆಪಿ ನಾಯಕ ಬಿ.ಎಸ್.ಯಡಿಯೂರಪ್ಪ ಅವರೇ ಆರೋಪ ಮಾಡಿದ್ದರು. ಆ ಆರೋಪ ಬಗ್ಗೆ ಹೋರಾಟ ಮುಂದುವರಿಸಬೇಕೆಂದು ಬಿಎಸ್‌ವೈ ಪುತ್ರರೂ ಆದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರನ್ನು ರಮೇಶ್ ಬಾಬು ಒತ್ತಾಯಿಸಿದ್ದಾರೆ.
ಶನಿವಾರ ಸುದ್ದಿಗೋಷ್ಟಿ ನಡೆಸಿ ದೇವೇಗೌಡ ಕುಟುಂಬದ ಸೈಟ್ ಅಕ್ರಮಗಳನ್ನು ಬಹಿರಂಗಪಡಿಸಿದ್ದ ವಕೀಲರೂ ಆದ ರಮೇಶ್ ಬಾಬು, ಭಾನುವಾರ ಬಿ.ವೈ.ವಿಜಯೇಂದ್ರ ಅವರ ನಿವಾಸಕ್ಕೆ ತೆರಳಿ ಕೋಲಾಹಲದ ಸನ್ನಿವೇಶಕ್ಕೆ ಸಾಕ್ಷಿಯಾದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್.ಮನೋಹರ್ ಸಹಿತ ಕಾಂಗ್ರೆಸ್ ಪಕ್ಷದ ನಾಯಕರೊಂದಿಗೆ ನಿಯೋಗ ತೆರಳಿದ ರಮೇಶ್ ಬಾಬು ನೇತೃತ್ವದ ತಂಡವನ್ನು ಪೊಲೀಸರು ವಿಜಯೇಂದ್ರ ನಿವಾಸದ ಬಳಿ ತಡೆದರು. ‘ವಿಜಯೇಂದ್ರ ಅವರು ಮನೆಯಲ್ಲಿಲ್ಲ, ವಾಪಸ್ ಹೋಗಿ’ ಎಂದು ಪೊಲೀಸರು ರಮೇಶ್ ಬಾಬು ಅವರ ಮನವೊಲಿಕೆ ಮಾಡಿದರು. ಬಳಿಕ ಪೊಲೀಸರ ಮೂಲಕವೇ ವಿಜಯೇಂದ್ರ ಅವರಿಗೆ ದಾಖಲೆಗಳನ್ನು ಕಳುಹಿಸಿಕೊಟ್ಟರು.
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಮೇಶ್ ಬಾಬು, ಮೂಡಾದಲ್ಲಿ ಮಾಜಿ ಪ್ರಧಾನಿ ದೇವೆಗೌಡರ ಕುಟುಂಬಕ್ಕೆ ಅಕ್ರಮವಾಗಿ 48 ನಿವೇಶನಗಳು ಹಂಚಿಕೆಯಾಗಿದ್ದು ಈ ಸಂಬಂಧ ತನಿಖೆ ಮಾಡುವಂತೆ ಕೋರಿ ಯಡಿಯೂರಪ್ಪ ಅವರು 17.03.2011ರಲ್ಲಿ ಸಭಾಪತಿಗಳಿಗೆ ದಾಖಲೆಗಳನ್ನ ಸಲ್ಲಿಸಿದ್ದರು. ಯಡಿಯೂರಪ್ಪನವರ ಆಗಿನ ಮನವಿಗೆ ಪೂರಕವಾಗಿ ವಿಧಾನಸಭೆಯಲ್ಲಿ ಈಗ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜೇಂದ್ರ ಅವರು ಚರ್ಚೆ ಮಾಡಬೇಕಿದೆ. ಈ ಬಗ್ಗೆ ಒತ್ತಾಯಿಸಲು ವಿಜಯೇಂದ್ರ ನಿವಾಸದತ್ತ ಆಗಮಿಸಿದ್ದೇವೆ ಎಂದರು.
ಮೂಡಾ ಮೂಲಕ ಅನೇಕ ಬಿಜೆಪಿ ಪ್ರಭಾವಿ ನಾಯಕರೂ ಸೈಟ್‌ಗಳನ್ನು ಪಡೆದಿದ್ದಾರೆ. ಹೀಗಿರುವಾಗ ದೇವೇಗೌಡರ ವಿರುದ್ದ ಹಿಂದೆ ಮಾಡಿದ್ದ ಆರೋಪಗಳ ಬಗ್ಗೆ ಈಗ ಧ್ವನಿ ಎತ್ತಲು ಯಡಿಯೂರಪ್ಪ ಪುತ್ರ ವಿಜಯೇಂದ್ರ ಸಿದ್ದರಿದ್ದಾರ ಎಂದು ರಮೇಶ್ ಬಾಬು ತರಾಟೆಗೆ ತೆಗೆದುಕೊಂಡರು.