ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮೂಡಾ) ಹಗರಣ ಕುರಿತಂತೆ ಸಿಎಂ ಸಿದ್ದರಾಮಯ್ಯ ವಿರುದ್ದ ಬಿಜೆಪಿ ಆರೋಪ ಮಾಡುತ್ತಿದ್ದಂತೆಯೇ, ಇದೀಗ ಕಾಂಗ್ರೆಸ್ ಅದೇ ಅಸ್ತ್ರವನ್ನು ಬಿಜೆಪಿ-ಜೆಡಿಎಸ್‌ನತ್ತ ಪ್ರಯೋಗಿಸಿದೆ. ಕುಮಾರಸ್ವಾಮಿ ಅವರಿಂದ ಮುಡಾ ಅಕ್ರಮವಾಗಿದೆ ಎಂದು ಯಡಿಯೂರಪ್ಪ ಅವರು ದಾಖಲೆ ಬಿಡುಗಡೆ ಮಾಡಿದ್ದ ಸಂಗತಿಯನ್ನು ಕೆಪಿಸಿಸಿ ಸಂವಹನ ವಿಭಾಗದ ಅಧ್ಯಕ್ಷ ರಮೇಶ್ ಬಾಬು ನೆನಪಿಸಿ ಹಗರದ ಆರೋಪ-ಪ್ರತ್ಯಾರೋಪಕ್ಕೆ ಹೊಸ ತಿರುವು ನೀಡಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ನಡೆದ ಮಾಧ್ಯಮಗಳಿಗೆ ಈ ಕುರಿತು ಮಾಹಿತಿ ಹಂಚಿಕೊಂಡ ರಮೇಶ್ ಬಾಬು ಬಿಜೆಪಿ-ಜೆಡಿಎಸ್ ನಾಯಕರನ್ನು ತರಾಟೆಗೆ ತೆಗೆದುಕೊಂಡರು.
ಯಡಿಯೂರಪ್ಪ ಅವರು 2011ರ ಮಾರ್ಚ್ 17ರಂದು ಮುಡಾ ಬಗ್ಗೆ ಗಂಭೀರವಾದ ವಿಚಾರಗಳನ್ನು ಪ್ರಸ್ತಾಪ ಮಾಡಿದ್ದರು. ಅಗ ಮೋಟಮ್ಮ ಅವರು ವಿಧಾನ ಪರಿಷತ್ತಿನ ನಾಯಕರಾಗಿದರು. ಮುಡಾದಲ್ಲಿ ಒಂದೇ ಕುಟುಂಬದವರು 48 ಸೈಟುಗಳನ್ನು ತೆಗೆದುಕೊಂಡಿದ್ದು, ಇದರಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರು 300/200 ಚದರ ಅಡಿ ಸೈಟ್ ನಂಬರ್ 17 (ಬಿ), ಸವಿತಾ ಎನ್ನುವವರಿಗೆ ಸೈಟ್ 17 (ಬಿ 1) 75/201 ಚದರ ಅಡಿ ಅನ್ನು ದೇವೇಗೌಡರ ಕಾಲದಲ್ಲಿ ನೀಡಲಾಗಿದೆ ಎಂದು ಯಡಿಯೂರಪ್ಪ ಅವರು ಹೇಳಿದ್ದರು. ಸವಿತಾ ಕೋ ಬೀರೇಗೌಡ ಅವರಿಗೆ 130/ 100, 110/ 80 ಅಡಿ ನಿವೇಶನಗಳನ್ನು ಸೇರಿದಂತೆ ದೇವೇಗೌಡರು ಸೊಸೆಯಂದಿರಿಗೆ 48 ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ ಎಂದು ಆರೋಪ ಮಾಡಿದ್ದರು. ಇದನ್ನು ಹಗಲು ದರೋಡೆ ಎಂದು ಯಡಿಯೂರಪ್ಪ ಅವರು ಸದನದಲ್ಲಿ ಚರ್ಚೆ ಆಗ್ರಹಿಸಿದ್ದರು. 60 ಸಾವಿರ ಅಡಿ ನಿವೇಶನ ಅಂದರೆ 1.5 ಎಕರೆ ಜಮೀನನ್ನು ಕುಮಾರಸ್ವಾಮಿ ಅವರಿಗೆ ಮಂಜೂರು ಮಾಡಲಾಗಿದೆ. ಯಡಿಯೂರಪ್ಪ ಅವರು ಈ ಅಕ್ರಮದ ಬಗ್ಗೆ ದಾಖಲೆ ಕೊಡುತ್ತಿದ್ದೇನೆ ಚರ್ಚೆ ನಡೆಯಬೇಕು ಎಂದು ಆಗ್ರಹಿಸಿದ್ದರು ಎಂದು ರಮೇಶ್ ಬಾಬು ಬೆಳಕು ಚೆಲ್ಲಿದರು.
ಬಿ.ಎಸ್.ಯಡಿಯೂರಪ್ಪ ಅವರು ವಿಧಾನಪರಿಷತ್‌ನ ಮುಡಾ ಬಗ್ಗೆ ಸಭಾಪತಿಗಳಿಗೆ ದಾಖಲೆಗಳನ್ನು ಸಲ್ಲಿಸಲಾಗುತ್ತದೆ. ಈ ದಾಖಲೆಗಳ ಮೇಲೆ ತನಿಖೆಯಾಗಬೇಕು ಎಂದು ಆಗ್ರಹಿಸಿದ್ದರು. ವಿಧಾನಪರಿಷತ್ತಿನ ನಡಾವಳಿಗಳ ಪ್ರಕಾರ ಯಾವುದೇ ಅಕ್ರಮದ ಬಗ್ಗೆ ಪ್ರಸ್ತಾಪ ಮಾಡಿದರೆ ತನಿಖೆ ನಡೆಸಬೇಕು ಎನ್ನುವ ನಿಯಮ ಮಾಡಿಕೊಳ್ಳಲಾಗಿದೆ. ಆದರೆ ಬಿಜೆಪಿಯವರು ಬಾಯಿಯೇ ಬಿಡುತ್ತಿಲ್ಲಬೆಂದು ರಮೇಶ್ ಬಾಬು ತರಾಟೆಗೆ ತೆಗೆದುಕೊಂಡರು.
ಬಿಜೆಪಿಯವರೇ ನೀವು ಏಕೆ ತಟಸ್ಥವಾಗಿ ಇದ್ದೀರಾ? 2011 ರಲ್ಲಿ ನೀವೆ ಕೊಟ್ಟಿರುವ ದಾಖಲೆಗಳ ಮೇಲೆ ಮಾತಾನಾಡಿ. ನಿಮ್ಮದೇ ಮುಖ್ಯಮಂತ್ರಿ, ಸಭಾಪತಿಗಳು ಇದ್ದರು ಏಕೆ ತನಿಖೆ ಮಾಡಲಿಲ್ಲ. ಸಣ್ಣ, ಸಣ್ಣ ವಿಚಾರಕ್ಕೂ ಶೋಭಕ್ಕ, ರವಿಕುಮಾರ್, ಸಿ.ಟಿ.ರವಿ ಅವರು ರಾಜ್ಯಪಾಲರ ಮನೆ ಬಾಗಿಲು ತಟ್ಟುತ್ತಾರೆ. ರಾಜ್ಯಪಾಲರ ಮನೆಯನ್ನು ಮಾವನ ಮನೆ ಮಾಡಿಕೊಂಡಿದ್ದಾರೆ ಎಂದು ರಮೇಶ್ ಬಾಬು ಟೀಕಿಸಿದರು.
ಕಾಂಗ್ರೆಸ್ ಪಕ್ಷದಿಂದ 09.07.24 ರಂದು ರಾಜ್ಯಪಾಲರಿಗೆ ಪತ್ರ ಬರೆದಿದ್ದು. 48 ಸೈಟು ಹಂಚಿಕೆಗಳ ಬಗ್ಗೆ ತನಿಖೆ ಮಾಡಬೇಕು ಎಂದು ಆಗ್ರಹಿಸಲಾಗಿದೆ. ಮುಖ್ಯಮಂತ್ರಿಗಳು ದಾಖಲೆ ಸಲ್ಲಿಕೆ ಮಾಡಿದರೆ ತನಿಖೆ ನಡೆಸಲೇ ಬೇಕು ಎನ್ನುವ ನಿಯಮವಿದೆ. ಯಡಿಯೂರಪ್ಪ ಅವರು 2011 ರಲ್ಲಿ ಇದರ ಬಗ್ಗೆ ದಾಖಲೆಗಳನ್ನು ನೀಡಿದ್ದಾರೆ. ಅದಕ್ಕೆ ನಾವು ಸಹ ತನಿಖೆ ನಡೆಯಬೇಕು ಎಂದು ಪತ್ರ ಬರೆದಿದ್ದೇವೆ ಎಂದು ತಿಳಿಸಿದರು.