ಬೆಂಗಳೂರು: ಸಿಎಂ ಬಸವರಾಜ್ ಬೊಮ್ಮಾಯಿ ನಡೆ ಬಗ್ಗೆ ಆರೆಸ್ಸೆಸ್ ನಾಯಕರು ಬಲವಾದ ಆಕ್ಷೇಪ ವ್ಯಕ್ತಪಡಿಸುತ್ತಿರುವಂತೆಯೇ ಮಂಗಳೂರು ಘಟನೆಗಳ ನಂತರ ಬಿಜೆಪಿ ಕಾರ್ಯಕರ್ತರೂ ಮುನಿಸಿಕೊಂಡಿದ್ದಾರೆ. ಈ ಸನ್ನಿವೇಶಕ್ಕೆ ಸಚಿವ ಸುನಿಲ್ ಕುಮಾರ್ ಕೂಡಾ ಕಾರಣ ಎಂಬುದು ಸಂಘದ ಹಿರಿಯರ ಆಕ್ಷೇಪ. ಸಿಎಂ ಬಸವರಾಜ್ ಬೊಮ್ಮಾಯಿ ಬದಲಾವಣೆ ಬಗ್ಗೆ ವರಿಷ್ಠರು ಚಿಂತನೆ ನಡೆಸುತ್ತಿರುವಾಗ ಒಂದಿಲ್ಲೊಂದು ಅವಾಂತರಗಳು ಸೃಷ್ಟಿಯಾಗುತ್ತಿದ್ದು, ಸುನಿಲ್ ಕುಮಾರ್ ಹೋದ ಕಡೆ ವಿವಾದಗಳು ಭುಗಿಲೇಳುತ್ತಿವೆ ಎಂಬುದು ನಾಯಕರ ಆಕ್ರೋಶ. ಈ ಬಗ್ಗೆ ಹೈಕಮಾಂಡ್ ಕೂಡಾ ಒಂದಷ್ಟು ಮಾಹಿತಿ ತರಿಸಿಕೊಂಡಿದ್ದು, ಅಮಿತ್ ಶಾ ಅವರು ರಾಜ್ಯ ನಾಯಕರತ್ತ ಚಾಟಿ ಬೀಸಲು ಈ ವರದಿಯೇ ಕಾರಣವಾಗಿದ್ದು ಎನ್ನಲಾಗುತ್ತಿದೆ.
ಮಂಗಳೂರು ಘಟನೆ ಬೆನ್ನಲ್ಲೇ ಗೃಹ ಸಚಿವ ಅಮಿತ್ ಶಾ ಅವರು ಹಠಾತ್ತನೆ ರಾಜ್ಯಕ್ಕೆ ಭೇಟಿ ನೀಡಿರುವುದು ಅಚ್ಚರಿ ಹಾಗೂ ಕುತೂಹಲಕ್ಕೆ ಕಾರಣವಾಗಿದೆ. ರಾಜ್ಯ ಬಿಜೆಪಿ ನಾಯಕರನ್ನು ಹಾಗೂ ಸರ್ಕಾರ ನಡೆಸುತ್ತಿರುವ ಸಿಎಂ ಮತ್ತವರ ಹಿಂಬಾಲಕರಿಗೆ ಶಾಕ್ ಕೊಡುವುದು ಪ್ರಮುಖ ಉದ್ದೇಶವಾಗಿತ್ತು ಎನ್ನಲಾಗಿದೆ. ಸಿಎಂ ಬಸವರಾಜ್ ಬೊಮ್ಮಾಯಿ ಅವರನ್ನು ಅಧಿಕಾರದಿಂದ ಕೆಳಗಿಳಿಸಲೇಬೇಕಿದೆ ಎಂದು ಅಭಿಪ್ರಾಯಪಟ್ಟಿರುವ ಸಂಘದ ರಾಷ್ಟ್ರೀಯ ಪ್ರಮುಖರು ಪ್ರಧಾನಿ ಹಾಗೂ ಬಿಜೆಪಿ ಹೈಕಮಾಂಡ್ ನಾಯಕರನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದರು ಎಂಬುದು ಕೇಸರಿ ಪಾಳಯದ ಆತಂರಿಕ ವಲಯದಲ್ಲಿನ ಮಾತುಗಳು. ಈ ಬೆಳವಣಿಗೆಯೇ ಅಮಿತ್ ಶಾ ಅವರನ್ನೂ ಇರುಸುಮುರುಸು ಗೊಳಿಸಿದೆ ಎನ್ನಲಾಗಿದೆ.
ನಳಿನ್, ಸಿಎಂ ಬಗ್ಗೆ ಬೇಸರ..
‘ಮೋದಿ ವರ್ಚಸ್ಸು ಬಿಟ್ಟರೆ ಕರಾವಳಿ ಬಿಜೆಪಿಯಲ್ಲಿ ಏನೇನೂ ಇಲ್ಲ’ ಎಂಬ ರಹಸ್ಯ ವರದಿಯಿಂದಾಗಿಯೇ ಹೈಕಮಾಂಡ್ ನಾಯಕರು ಕೆರಳಿರುವುದು..!
ಪ್ರವೀಣ್ ಹತ್ಯಾಕಾಂಡ ಬೆನ್ನಲ್ಲೇ ಸಂಸದರೂ ಆದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ವಿರುದ್ದ ಕರಾವಳಿಯ ಬಿಜೆಪಿ ಕಾರ್ಯಕರ್ತರು ಬಂಡೆದಿದ್ದಾರೆ. ಇದೇ ವೇಳೆ, ಮೋದಿ ವರ್ಚಸ್ಸು ಬಿಟ್ಟರೆ ಕರಾವಳಿ ಬಿಜೆಪಿಯಲ್ಲಿ ಏನೇನೂ ಇಲ್ಲ ಎಂಬುದು ರಾಜ್ಯ ಬಿಜೆಪಿ ಸಂಘಟನಾ ಕಾರ್ಯದರ್ಶಿ ರಾಜೇಶ್ ಹಾಗೂ ಗೃಹ ಸಚಿವ ಅಮಿತ್ ಶಾ ಅವರಿಗೆ ತಲುಪಿರುವ ರಹಸ್ಯ ಸಂದೇಶ. ಈ ಕುರಿತಂತೆ ಬೆಂಗಳೂರು ಭೇಟಿಗೆ ಮುನ್ನ ಆರೆಸ್ಸೆಸ್ ಹಿನ್ನೆಲೆಯುಳ್ಳ ಪತ್ರಕರ್ತರಿಂದಲೂ ಮಾಹಿತಿ ಪಡೆದಿರುವ ಅಮಿತ್ ಶಾ ಅವರು ನಳಿನ್ ಕುಮಾರ್ ವಿಚಾರದಲ್ಲಿ ಅತ್ಯಂತ ಬೇಸರಗೊಂಡಿದ್ದಾರೆ. ಬಿಜೆಪಿ ಚಾಣಾಕ್ಯನ ಬೆಂಗಳೂರು ಭೇಟಿ ವೇಳೆಯೂ ಈ ವಿಚಾರ ಪ್ರತಿಧ್ವನಿಸಿದ್ದು ಮುಂದಿನ ಬೆಳವಣಿಗೆಗಳು ಕುತೂಹಲಕ್ಕೆ ಕಾರಣವಾಗಿದೆ.
ಹಗರಣಗಳ ಆರೋಪ ಹಾಗೂ ಆಡಳಿತಾತ್ಮಕ ಲೋಪ ಕುರಿತಂತೆ ಸಿಎಂ ಬಸವರಾಜ್ ಬೊಮ್ಮಾಯಿ, ಸಚಿವರಾದ ಅಶ್ವತ್ಥನಾರಾಯಣ, ಸುಧಾಕರ್ ಬಗ್ಗೆಯೂ ಅಮಿತ್ ಶಾ ಬೇಸರಗೊಂಡಿದ್ದು, ಕರಾವಳಿ ಪ್ರಕರಣ ನಿಭಾಯಿಸುವಲ್ಲಿ ವಿಫಲರಾಗಿದ್ದಕ್ಕೆ ಗೃಹ ಸಚಿವ ಅರಗ ಜ್ಞಾನೇಂದ್ರ ಅವರನ್ನೂ ತರಾಟೆಗೆ ತೆಗೆದುಕೊಂಡಿದ್ದಾರೆ.
ಎರಡು ದಿನ.. ಟಫ್ ಟಾಸ್ಕ್..!
ಹಲವಾರು ಹಗರಣಗಳು ಮಾತ್ರವಲ್ಲ ಬಿಜೆಪಿ ಕಾರ್ಯಕರ್ತರ ಕಡಗಣಿಸಿರುವ ಸಿಎಂ ಬಸವರಾಜ್ ಬೊಮ್ಮಾಯಿ ಬಗ್ಗೆ ಅಸಮಾಧಾನ ಹೊರ ಹಾಕಿರುವ ಅಮಿತ್ ಶಾ ಅವರು, ಕಾರ್ಯಕರ್ತರಿಗೆ ಅವಕಾಶ ಕೊಡಿ ಎಂದಿದ್ದೇ ಅಚ್ಚರಿಯ ಬೆಳವಣಿಗೆ. ಮಂಗಳೂರು ಘಟನೆ ಹಾಗೂ ರಾಜ್ಯದಲ್ಲಿನ ಕಹಿ ಘಟನೆಗಳಿಂದಾಗಿ ಮುಜುಗರದ ಸನ್ನಿವಶ ಎದುರಾಗಿದೆ ಎಂದು ಅಮಿತ್ ಶಾ ಅವರು ಸಿಎಂ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ನಡುವೆ ಎರಡು ದಿನಗಳಲ್ಲಿ ಒಂದು ಸ್ಪಷ್ಟತೆ ಬೇಕಿದೆ ಎಂದು ಅಮಿತ್ ಶಾ ಅವರು ಸಿಎಂ ಬೊಮ್ಮಾಯಿ ಅವರಿಗೆ ಸೂಚಿಸಿದ್ದಾರೆ ಎನ್ನಲಾಗಿರುವ ಟಾಸ್ಕ್ ಬಗ್ಗೆಯೇ ಕಾರ್ಯಕರ್ತರಿಗೆ ಕುತೂಹಲ.
ನಳಿನ್‌ಗೆ ಕಿವಿಮಾತು..
ಇತ್ತೀಚಿನ ಬೆಳವಣಿಗೆಯಿಂದ ಬಿಜೆಪಿಗೆ ರಾಷ್ಟ್ರೀಯ ಮಟ್ಟದಲ್ಲಿ ಮುಜುಗರದ ಸನ್ಬಿವೇಶ ಎದುರಾಗುವಂತಾಗಿದೆ. ಹಾಗಾಗಿ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷವನ್ನು ಸಘಟಿಸಬೇಕೆಂದು ಅಮಿತ್ ಶಾ ಅವರು ನಳಿನ್ ಕುಮಾರ್‌ಗೂ ಸಲಹೆ ಮಾಡಿದ್ದಾರೆ. ಮುಂಬರುವ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸಬೇಕು. ಈ ಸಂಬಂಧ ರೂಪುರೇಷೆ ಸಿದ್ದಪಡಿಸುವಂತೆಯೂ ಮಾರ್ಗದರ್ಶನ ನೀಡಿದ್ದಾರೆ. ವರಿಷ್ಠನ ಈ ವೈಖರಿಯು ಮುಂದಿನ ಚುನಾವಣೆವರೆಗೂ ನಳಿನ್ ಕುಮಾರ್ ಅವರನ್ನೇ ರಾಜ್ಯಾಧ್ಯಕ್ಷರನ್ನಾಗಿ ಮುಂದುವರಿಸುವ ಸುಳಿವು ನೀಡಿದಂತಿದೆ.
















































