ಬೆಂಗಳೂರು: ವಿಧಾನಾಭಾ ಚುನಾವಣಾ ಅಖಾಡ ಕ್ಲೈಮ್ಯಾಕ್ಸ್ ಘಟ್ಟದಲ್ಲಿದ್ದು ಮತದಾನಕ್ಕೆ ಜೆಲವೇ ಗಂಟೆಗಳು ಬಾಕಿ ಇರುವಾಗಲೇ ರಾಜ್ಯ ರಾಜಕಾರಣ ದಿಢೀರ್ ಬೆಳವಣಿಗೆಗೆ ಕಾರಣವಾಗಿದೆ. ರಾಜ್ಯ ಬಿಜೆಪಿ ಸರ್ಕಾರದ ಬಲ ದೊಡ್ಡ ಹಗರಣವೊಂದು ಸ್ಫೋಟವಾಗಿದ್ದು, ಬರೋಬ್ಬರಿ 1200 ಕೋಟಿ ರೂಪಾಯಿ ಕರ್ಮಕಾಂಡ ಕುರಿತ ದೂರೊಂದು ಲೋಕಾಯುಕ್ತಕ್ಕೆ ಸಲ್ಲಿಕೆಯಾಗಿದೆ. ಆರೋಗ್ಯ ಇಲಾಖೆಯಲ್ಲಿ ನಡೆದಿದೆ ಎನ್ನಲಾದ ಈ ಹಗರಣ ಆರೋಪ ಕುರಿತಂತೆ ಸಮಗ್ರ ತನಿಖೆ ನಡೆಸುವಂತೆ ಕೋರಿ ಕೆಪಿಸಿಸಿ ವಕ್ತಾರ ರಮೇಶ್ ಬಾಬು ಅವರು ಕಾಂಗ್ರೆಸ್ ಪರವಾಗಿ ಈ ದೂರು ನೀಡಿದ್ದಾರೆ.
ಇದನ್ನೂ ಓದಿ.. ಯಾರಿಗೆ ಯಾವ ಖಾತೆ ? ಸಿದ್ದರಾಮಯ್ಯ…
ಕರ್ನಾಟಕ ರಾಜ್ಯ ಸರ್ಕಾರದ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಡಿಯಲ್ಲಿ ಸಾರ್ವಜನಿಕ ಸೇವೆಯ ಹಿನ್ನೆಲೆಯಲ್ಲಿ ತುರ್ತು ಆಂಬುಲೆನ್ಸ್ ಸೇವೆಯನ್ನು ನೀಡಲಾಗುತ್ತಿದೆ. ಈ ಸೇವೆಯನ್ನು ಗುತ್ತಿಗೆ ಆಧಾರದಲ್ಲಿ ಖಾಸಗಿ ಕಂಪನಿಗೆ ವಹಿಸಿರುವ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದ್ದು ಭಾರೀ ಅವ್ಯವಹಾರ ನಡೆದಿದೆ ಎಂದು ಹಿರಿಯ ವಕೀಲರೂ ಆದ ಮಾಜಿ ಶಾಸಕ ರಮೇಶ್ ಬಾಬು ಅವರು ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದಾರೆ.
ರಾಜ್ಯದಲ್ಲಿ ಆಂಬುಲೆನ್ಸ್ ಸೇವೆಯ ಗುತ್ತಿಗೆಯನ್ನು ಖಾಸಗಿಯವರಿಗೆ ನೀಡಲಾಗಿತ್ತು. ಕರ್ನಾಟಕ ಹೈ ಕೋರ್ಟ್ ನಲ್ಲಿ 11-01-2023 ರಂದು ಸಾರ್ವಜನಿಕ ಹಿತಾಸಕ್ತಿಯ ಮೊಕದ್ದಮೆ ವಿಲೇವಾರಿ ಮಾಡಿದ್ದು, ಸದರಿ ಪ್ರಕರಣದಲ್ಲಿ ರಾಜ್ಯ ಸರ್ಕಾರ ಆಂಬುಲೆನ್ಸ್ ತುರ್ತು ಸೇವೆಗೆ ಸಂಬಂಧಪಟ್ಟಂತೆ ಹೊಸ ಟೆಂಡರ್ ಕರೆಯಲಾಗಿದ್ದು ಇದರ ಸಲ್ಲಿಕೆಗೆ 30-01-2023 ಕೊನೆಯ ದಿನವಾಗಿತ್ತು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಇಡೀ ರಾಜ್ಯದಲ್ಲಿ ಸಾರ್ವಜನಿಕ ಉಪಯೋಗಕ್ಕಾಗಿ “108 – ಆರೋಗ್ಯ ಕವಚ ಆಂಬುಲೆನ್ಸ್ ಯೋಜನೆ ” ಅಡಿಯಲ್ಲಿ ತುರ್ತು ಆರೋಗ್ಯ ಸೇವೆಯನ್ನು ನೀಡುತ್ತಿದೆ. ಐದು ವರ್ಷದ ಅವಧಿಗೆ ಸದರಿ ಇಲಾಖೆ ಟೆಂಡರ್ ಪ್ರಕ್ರಿಯೆ ನಡೆಸುತ್ತಿದ್ದು, 1260 ಕೋಟಿ ಮೊತ್ತದ ಟೆಂಡರ್ ಈ ಯೋಜನೆಯ ಅಡಿಯಲ್ಲಿ ಕರೆಯಲಾಗುತ್ತದೆ. ಕರ್ನಾಟಕದಲ್ಲಿ ಜನಸಂಖ್ಯೆಗೆ ಅನುಗುಣವಾಗಿ ರಾಷ್ಟ್ರೀಯ ಆರೋಗ್ಯ ಅಭಿಯಾನದ ಮಾರ್ಗಸೂಚಿಗಳ ಅನ್ವಯ ಆಂಬುಲೆನ್ಸ್ ಸೇವೆಗಳನ್ನು ಒದಗಿಸಬೇಕಾಗಿರುತ್ತದೆ. ಆರೋಗ್ಯ ಇಲಾಖೆ ಆರ್ಥಿಕ ಇಲಾಖೆಯ ಅನುಮೋದನೆಯ ಮೂಲಕ ಐದು ವರ್ಷಗಳ ಅವಧಿಗೆ ಟೆಂಡರ್ ಕರೆದಿರುತ್ತದೆ. ಕರ್ನಾಟಕದ 2023 ರ ವಿಧಾನಸಭೆಯ ಚುನಾವಣೆಯ ನಿಮಿತ್ತ ಕೇಂದ್ರ ಚುನಾವಣಾ ಆಯೋಗವು 29-03-2023 ರಂದು ಅಧಿಸೂಚನೆಯನ್ನು ಹೊರಡಿಸಿದ್ದು, ಕರ್ನಾಟಕದಲ್ಲಿ ಅಂದಿನಿಂದ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ. ಚುನಾವಣಾ ಸಂದರ್ಭದಲ್ಲಿ ಅತಿ ದೊಡ್ಡ ಮಟ್ಟದ ಟೆಂಡರ್ ಪ್ರಕ್ರಿಯೆಯನ್ನು ಯಾವುದೊ ಒಂದು ಸಂಸ್ಥೆಗೆ ನೀಡುವ ಉದ್ದೇಶದಿಂದ ನಿಯಮಗಳನ್ನು ಮೀರಿ ಮಾಡಲಾಗಿರುತ್ತದೆ ಎಂದು ರಮೇಶ್ ಬಾಬು ಅವರು ಈ ದೂರಿನಲ್ಲಿ ಗಮನಸೆಳೆದಿದ್ದಾರೆ.
ಕರ್ನಾಟಕ ರಾಜ್ಯ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಆರೋಗ್ಯ ಸಚಿವರು, ಈ ಇಲಾಖೆಯಲ್ಲಿ ಪ್ರಧಾನ ಕಾರ್ಯದರ್ಶಿಗಳು, ಆರೋಗ್ಯ ಇಲಾಖೆಯ ಆಯುಕ್ತರು, ನ್ಯಾಷನಲ್ ಆರೋಗ್ಯ ಮಿಷನ್ ನಿರ್ದೇಶಕರು ಮತ್ತು ಇತರ ಅಧಿಕಾರಿಗಳು ಇಲಾಖೆಯ ಯಾವುದೇ ಆರ್ಥಿಕ ವಿಷಯಗಳ ತೀರ್ಮಾನದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಾರೆ. ಕರ್ನಾಟಕದಲ್ಲಿ 10 ಕೋಟಿ ರೂಪಾಯಿಗಳಿಗಿಂತ ಹೆಚ್ಚು ಮೊತ್ತದ ಟೆಂಡರ್ ಅಂಗೀಕಾರ ಆಗಬೇಕಾದಲ್ಲಿ ಅದು ಸಂಪುಟ ಸಭೆಯ ಮೂಲಕ ಅನುಮೋದನೆ ಆಗಬೇಕು. ಜೊತೆಗೆ ಕರ್ನಾಟಕ ಪಾರದರ್ಶಕ ಕಾಯಿದೆ ಅನ್ವಯ ಬಿಡ್ ದಾರರ ಟೆಂಡರ್ ಗಳು ತಾಂತ್ರಿಕ ಮತ್ತು ಆರ್ಥಿಕ ಅನುಮೋದನೆಯನ್ನು ಪಡೆಯಬೇಕಾಗುತ್ತದೆ. ರಾಜ್ಯ ಸರ್ಕಾರದ ಹೊಸ ನೀತಿಗೆ ಅನುಗುಣವಾಗಿ ಟೆಂಡರ್ ಅನುಮೋದನೆ ಸಮಿತಿಯಿಂದಲೂ ಅನುಮೋದನೆ ಪಡೆಯಬೇಕಾಗುತ್ತದೆ. ಆದರೆ ಈ ಟೆಂಡರ್ ಪ್ರಕ್ರಿಯೆಯಲ್ಲಿ ನಿಯಮಾವಳಿಗಳನ್ನು ಗಾಳಿಗೆ ತೋರಿ ಚುನಾವಣಾ ಪೂರ್ವದಲ್ಲಿ ಟೆಂಡರ್ ಅನುಮೋದನೆ ಮಾಡಿರುವುದು ಹಲವಾರು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ ಎಂದಿರುವ ರಮೇಶ್ ಬಾಬು, ಈ ಟೆಂಡರ್ ಪ್ರಕ್ರಿಯೆಯಲ್ಲಿ ಅಕ್ರಮಗಳು ನಡೆದಿದ್ದು, ಮುಖ್ಯಮಂತ್ರಿಗಳು, ಆರೋಗ್ಯ ಇಲಾಖೆಯ ಸಚಿವರು ಮತ್ತು ಇಲಾಖೆಯ ಅಧಿಕಾರಿಗಳು ಶಾಮೀಲಾಗಿರುವ ಸಾಧ್ಯತೆಗಳಿರುತ್ತವೆ ಎಂದು ಲೋಕಾಯುಕ್ತದ ಗಮನಸೆಳೆದಿದ್ದಾರೆ.
ಆರೋಗ್ಯ ಸೇವೆಗಳ ಹಿನ್ನೆಲೆಯಿಲ್ಲದ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಖಾಸಗಿ ಸಂಸ್ಥೆ ಒಂದಕ್ಕೆ ನಿಯಮಾವಳಿಗಳನ್ನು ಮೀರಿ ಈ ಟೆಂಡರ್ ನೀಡಲಾಗಿರುತ್ತದೆ. ಇವರಿಗೆ ಅನುಕೂಲ ಮಾಡಿಕೊಡುವ ಕಾರಣಕ್ಕಾಗಿ ತಾಂತ್ರಿಕ ಅನುಮೋದನೆ, ಆರ್ಥಿಕ ಅನುಮೋದನೆ ಮತ್ತು ಸಂಸ್ಥೆಯ ಟೆಂಡರ್ ಟ್ರ್ಯಾಕ್ ಗಳನ್ನೂ ಉಲ್ಲಂಘನೆ ಮಾಡಿ ಇವರಿಗೆ ಹಣ ಪಡೆದು ಟೆಂಡರ್ ನೀಡಿರುವ ಸಾಧ್ಯತೆಗಳಿರುತ್ತದೆ ಎಂದು ಅವರು ಬೊಟ್ಟು ಮಾಡಿದ್ದಾರೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ನ್ಯಾಷನಲ್ ಹೆಲ್ತ್ ಮಿಷನ್ ಶಾಖೆಯ ಉಪನಿರ್ದೇಶಕ ಡಾ.ಆರ್.ನಾರಾಯಣ್ ಎಂಬವರು ಈ ಹಗರಣದಲ್ಲಿ ಮಧ್ಯವರ್ತಿಗಳಾಗಿ ವರ್ತಿಸಿರುವುದಾಗಿ ಸರ್ಕಾರಕ್ಕೆ ದೂರುಗಳು ಸಲ್ಲಿಕೆಯಾಗಿದೆ. ಟೆಂಡರ್ ಪ್ರಕ್ರಿಯೆ ಪಾರದರ್ಶಕವಾಗಿ ನಡೆದಿರುವುದಿಲ್ಲ, ಚುನಾವಣಾ ಸಮಯದಲ್ಲಿ ಆತುರ ಆತುರವಾಗಿ ನಿಯಮಗಳ ಉಲ್ಲಂಘನೆ ಮಾಡಿ ಟೆಂಡರ್ ಹಂಚಿಕೆ ಮಾಡಿರುವ ಕ್ರಮದ ಹಿಂದೆ ಭ್ರಷ್ಟಾಚಾರದ ವಾಸನೆ ಬಡೆಯುತ್ತಿದೆ.
ಸಚಿವರೊಬ್ಬರ ಪರವಾಗಿ ಈ ಟೆಂಡರ್ ಗೆ ಸಂಬಂಧಪಟ್ಟಂತೆ ಆರೋಗ್ಯ ಇಲಾಖೆಯ ಉಪನಿರ್ದೇಶಕರು ಹಣ ಪಡೆದಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ ಮತ್ತು ಸುದ್ದಿಯಾಗಿರುತ್ತದೆ ಎಂದು ದೂರಿದ್ದಾರೆ.
ಈ ಹಗರಣಕ್ಕೆ ಸಂಬಂಧಪಟ್ಟಂತೆ ಮಧ್ಯವರ್ತಿಯಾಗಿ ಸಚಿವರ ಪರವಾಗಿ ಅವರ ಮನೆಯಲ್ಲೇ ಹಣ ಪಡೆದಿರುವ ಅನುಮಾನಗಳಿರುತ್ತವೆ. ಕರ್ನಾಟಕ ರಾಜ್ಯ ಸರ್ಕಾರದ ಪೊಲೀಸ್ ಇಲಾಖೆಯ ಬೆಂಗಳೂರಿನ ಕ್ರೈಂ ಬ್ರಾಂಚ್ ನವರಿಗೂ ಈ ಹಗರಣ ಸಂಬಂಧ ಮಾಹಿತಿ ಇರುವುದಾಗಿ ತಿಳಿದುಬಂದಿರುತ್ತದೆ. ಆದರೆ ಇಲ್ಲಿಯವರೆಗೆ ಪ್ರಕರಣದ ಆರೋಪಿತರ ಮೇಲೆ ಯಾವುದೇ ಕ್ರಮ ಜರುಗಿರುವುದಿಲ್ಲ ಎಂದು ಅಧಿಕಾರಿಗಳ ಲೋಪಗಳಬಗ್ಗೆಯೂ ದೂರಿನಲ್ಲಿ ಉಲ್ಲೇಖಿಸಿರುವ ಮಾಜಿ ಶಾಸಕರು, ಈ ಟೆಂಡರ್ ಹಗರಣದಲ್ಲಿ ಕರ್ನಾಟಕ ರಾಜ್ಯ ಸರ್ಕಾರದ ಮುಖ್ಯಮಂತ್ರಿಗಳು ಮತ್ತು ಸಚಿವರು ಬಾಗಿಯಾಗಿರುವ ಆರೋಪದ ಸಂಬಂಧ ಮತ್ತು ಟೆಂಡರ್ ಪ್ರಕ್ರಿಯೆಯಲ್ಲಿ ನಿಯಮಾವಳಿಗಳನ್ನು ಮೀರಿ ಟೆಂಡರ್ ಹಂಚಿಕೆಯಾಗಿರುವ ಸಂಬಂಧ ಲೋಕಾಯುಕ್ತರು ಸಾರ್ವಜನಿಕ ಹಿತದೃಷ್ಟಿಯಿಂದ ತನಿಖೆಯನ್ನು ಮಾಡಬೇಕಾಗಿರುತ್ತದೆ. ರಾಜ್ಯದ ಹಿತದೃಷ್ಟಿಯಿಂದ ಮತ್ತು ಅಗತ್ಯ ಸೇವೆಯಾದ ಆರೋಗ್ಯ ಇಲಾಖೆಯ ಆಂಬುಲೆನ್ಸ್ ಸೇವೆಯನ್ನು ಯಾವುದೇ ಹಗರಣಗಳಿಗೆ ಆಸ್ಪದ ನೀಡದಂತೆ ಜನರಿಗೆ ನೀಡುವ ಕಾರಣಕ್ಕಾಗಿ ಲೋಕಾಯುಕ್ತರು ಪಾರದರ್ಶಕ ತನಿಖೆ ನಡೆಸಬೇಕೆಂದು ಲೋಕಾಯುಕ್ತರನ್ನು ಒತ್ತಾಯಿಸಿದ್ದಾರೆ.