ಒಡಿಶಾ: ಒಡಿಶಾದ ಪುರಾಣ ಪ್ರಸಿದ್ದ ಪುರಿ ಶ್ರೀ ಜಗನ್ನಾಥ ದೇವಾಲಯದ ಎಲ್ಲಾ ನಾಲ್ಕು ದ್ವಾರಗಳನ್ನು ಭಕ್ತರ ಪ್ರವೇಶಕ್ಕಾಗಿ ಮುಕ್ತಗೊಳಿಸಲಾಗಿದೆ. ಚುನಾವಣಾ ಪೂರ್ವದಲ್ಲಿ ಬಿಜೆಪಿ ನೀಡಿದ ಮೊದಲ ಭರವಸೆಯಂತೆ ಈ ಕ್ರಮ ಕೈಗೊಳ್ಳಲಾಗಿದೆ.
ಬುಧವಾರ ನಡೆದ ಮೊದಲ ಸಂಪುಟ ಸಭೆಯಲ್ಲಿ ಈ ಕುರಿತಂತೆ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದ್ದು, ಒಡಿಶಾ ಸರ್ಕಾರದ ಅಧಿಕಾರಿಗಳ ಸೂಚನೆಯಂತೆ ದೇವಸ್ಥಾನದ ಎಲ್ಲಾ ನಾಲ್ಕು ಬಾಗಿಲುಗಳನ್ನು ಗುರುವಾರ ತೆರೆಯಲಾಗಿದೆ. ಇಂದು ಬೆಳಿಗ್ಗೆ 6:30ರ ಸುಮಾರಿಗೆ ಸ್ಥಳೀಯ ಶಾಸಕರು, ಸಂಸದರ ಜೊತೆ ದೇವಾಲಯಕ್ಕೆ ಭೇಟಿ ನೀಡಿದ ಸಿಎಂ ಮೋಹನ್ ಚರಣ್ ಮಾಝಿ, ‘ಮಂಗಲ ಆರತಿ’ಪೂಜೆಯಲ್ಲಿ ಭಾಗಿಯಾದರು. ಸಂದರ್ಭದಲ್ಲಿ ದೇವಳದ ನಾಲ್ಕು ಬಾಗಿಲು ತೆರೆಯುವ ಪ್ರಕ್ರಿಯೆ ನಡೆದಿದೆ.
ସୁପ୍ରଭାତ! Today’s Patitapaban Darshan At Shree Jagannatha Temple, #Puri. pic.twitter.com/k5NHXP3Ipi
— Shree Jagannatha Temple, Puri (@JagannathaDhaam) June 13, 2024
ಚುನಾವಣೆಗೆ ಮುನ್ನ ಬಿಜೆಪಿ ಪಕ್ಷ ಪುರಿ ಜಗನ್ನಾಥನ ಭಕ್ತರ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿತ್ತು. ಅದರಂತೆ ಒಡಿಶಾ ರಾಜ್ಯದಲ್ಲಿ ಹೊಸದಾಗಿ ಚುನಾಯಿತವಾದ ಬಿಜೆಪಿ ಸರ್ಕಾರವು ಪುರಿಯ ದೇವಾಲಯದ ಎಲ್ಲಾ ನಾಲ್ಕು ದ್ವಾರಗಳನ್ನು ಪುನಃ ತೆರೆಯುವ ಪ್ರಸ್ತಾವನೆಗೆ ಬುಧವಾರ ಅನುಮೋದನೆ ನೀಡಿದೆ. ಅದರಂತೆ ದೇವಾಲಯದಲ್ಲಿ ಈ ಪ್ರಕ್ರಿಯೆ ನಡೆದಿದೆ ಎಂದು ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ ಮಾಹಿತಿ ಹಂಚಿಕೊಂಡಿದ್ದಾರೆ.