ದೆಹಲಿ: ಇತ್ತೀಚೆಗೆ ಬೃಹತ್ ಬಂಗಲೆ ಮೇಲಿನ ಇಡಿ ಅಧಿಕಾರಿಗಳು ದಾಳಿ ನಡೆಸಿದ ನಂತರ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಕೆಪವು ಸಮಯ ಆತಂಕದಲ್ಲಿದ್ದರು. ಆದಾಯಕ್ಕಿಂತ ಹೆಚ್ಚಿನ ಆಸ್ತಿ, ಅಕ್ರಮ ಹಣ ವರ್ಗಾವಣೆ ಆರೋಪ ದಾಖಲಿಸಿ ತನ್ನನ್ನು ಬಂಧಿಸುವ ಸಾಧ್ಯತೆಗಳ ಬಗ್ಗೆ ಅವರು ಆತಂಕಗೊಂಡಿದ್ದರು. ಆದರೆ ಇದೀಗ ಅದ್ಯಾವ ಆತಂಕವೂ ಇಲ್ಲ ಎನ್ನುತ್ತಿದ್ದಾರೆ ಜಮೀರ್.
ಈ ನಡುವೆ ಇಡಿ ದಾಳಿ ನಂತರ ಅದೃಷ್ಟ ಒಲಿಯುತ್ತೆ ಎಂಬ ಕಾಂಗ್ರೆಸ್ನವರ ನಂಬಿಕೆ ನಿಜವಾಗುತ್ತೆ ಎಂಬುದಕ್ಕೆ ಜಮೀರ್ ವಿಚಾರವೂ ನಿದರ್ಶನವಾಗುವಂತಿದೆ. ಹಿಂದೆ ಇ.ಡಿ.ಯಿಂದ ಬಂಧನಕ್ಕೊಳಗಾದ ಡಿಕೆಶಿಗೆ ಕೆಪಿಸಿಸಿ ಅಧ್ಯಕ್ಷ ಗದ್ದುಗೆ ಸಿಕ್ಕಿದೆ. ಇದೀಗ ಇ.ಡಿ.ದಾಳಿಯ ಸುಳಿಯಲ್ಲಿ ಸಿಲುಕಿದ ಜಮೀರ್ಗೂ ಉನ್ನತ ಜವಾಬ್ಧಾರಿ ಸಿಗಲಿದೆ ಎಂಬ ಮಾತುಗಳು ಎಐಸಿಸಿ ಅಂಗಳದಲ್ಲಿ ಪ್ರತಿಧ್ವನಿಸಿದೆ.
ಅಚ್ಚರಿಯ ತೀರ್ಮಾನವೊಂದರಲ್ಲಿ ಜಮೀರ್ ಅಹ್ಮದ್ ಅವರಿಗೆ ರಾಷ್ಟ್ರೀಯ ಮಟ್ಟದಲ್ಲಿ ಗಮನಸೆಳೆಯುವ ಉನ್ನತ ಜವಾಬ್ಧಾರಿಯೊಂದನ್ನು ಎಐಸಿಸಿ ಹೈಕಮಾಂಡ್ ವಹಿಸುವ ನಿರೀಕ್ಷೆ ಇದೆ.
ಪ್ರಸ್ತುತ ದೆಹಲಿಯಲ್ಲಿರುವ ಶಾಸಕ ಜಮೀರ್ ಅಹ್ಮದ್ ಖಾನ್ ಅವರಿಗೆ ಎಐಸಿಸಿ ನಾಯಕಿ ಪ್ರಿಯಾಂಕ ಗಾಂಧಿ ಅವರ ಕಚೇರಿಯಿಂದ ಜಮೀರ್ ಅಹ್ಮದ್ ಖಾನ್ ಅವರಿಗೆ ಫೋನ್ ಕರೆಯೊಂದು ಬಂದಿದ್ದು, ನಾಯಕಿಯ ಭೇಟಿಗೆ ಸಂದೇಶ ನೀಡಲಾಗಿದೆಯಂತೆ. ಇದೀಗ ಮೋದಿ ಹಾಗೂ ಯೋಗಿ ವಿರುದ್ದ ಸಮರ ನಿರತರಾಗಿರುವ ಪ್ರಿಯಾಂಕಾ ಗಾಂಧಿ ಮುಂಬರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಜಮೀರ್ ಅಹ್ಮದ್ ಅವರಿಗೆ ಹೊಣೆ ವಹಿಸುವ ಚಿಂತನೆ ನಡೆಸಿದ್ದಾರೆನ್ನಲಾಗಿದೆ.
ಈ ಸಂಬಂಧ ಜಮೀರ್ ಜೊತೆ ಮಾತುಕತೆ ನಡೆಸುವ ನಿರೀಕ್ಷೆ ಇದೆ ಎನ್ನಲಾಗುತ್ತಿದೆ. ಯೋಗಿಯ ರಾಜ್ಯದಲ್ಲಿ ಮುಸ್ಲಿಂ ಮತಗಳ ಪ್ರಾಬಲ್ಯ ಇರುವ ಪ್ರದೇಶಗಳ ಹೊಣೆ ಜಮೀರ್ ತೆಕ್ಕೆಗೆ ಸಿಗುವ ಸಾಧ್ಯತೆಗಳಿವೆ ಎನ್ನುವುದು ಎಐಸಿಸಿ ಮೂಲಗಳ ಮಾತುಗಳು.
ಫಲಿಸಿತೇ ಸಿದ್ದು ಸ್ಕೆಚ್..?
ಕೆಲವು ದಿನಗಳ ಹಿಂದಷ್ಟೇ ದೆಹಲಿಗೆ ತೆರಳಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಎಐಸಿಸಿ ಅಧಿನಾಯಕಿ ಸೋನಿಯಾ ಗಾಂಧಿಯವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು. ಆ ಸಂದರ್ಭದಲ್ಲಿ ತಮ್ಮ ಶಿಷ್ಯ ಜಮೀರ್ ಅಹ್ಮದ್ ಅವರಿಗೆ ಉತ್ತರಪ್ರದೇಶ ಚುನಾವಣೆಯಲ್ಲಿ ಜವಾಬ್ಧಾರಿ ವಹಿಸಿಕೊಡುವಂತೆ ಸಲಹೆ ಮಾಡಿದ್ದಾರೆನ್ನಲಾಗಿದೆ. ಒಂದು ವೇಳೆ ಜಮೀರ್ ಅಹ್ಮದ್ ಅವರು ಪಕ್ಷದ ವರಿಷ್ಠರಿಗೆ ಹತ್ತಿರವಾದರೆ ಮುಂದೆ ಸಿಎಂ ಸ್ಪರ್ಧೆಯ ವೇಳೆ ತಮಗೆ ಅನುಕೂಲವಾಗಬಹುದು ಎಂಬುದು ಸಿದ್ದರಾಮಯ್ಯ ಲೆಕ್ಕಾಚಾರ ಎನ್ನಲಾಗುತ್ತಿದೆ.