ಮಂಗಳೂರು: ‘ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು’ ಸಿನಿಮಾ ಮೂಲಕ ಮಲೆಯಾಲಂ ಪ್ರಾಬಲ್ಯದ ಗಡಿ ಜಿಲ್ಲೆ ಕಾಸರಗೋಡು ಪ್ರದೇಶದಲ್ಲಿ ಕನ್ನಡ ಪ್ರೇಮದ ಸಂಚಲನ ಸೃಷ್ಟಿಸಿದ್ದರೆ, ಅದೇ ಚಿತ್ರತಙಡದ ಬಳಗದಲ್ಲಿ ಗುರುತಿಸಿರುವ ನಟ ರಕ್ಷಿತ್ ಶೆಟ್ಟಿ ಇದೀಗ ‘ಜೈ ತುಳುನಾಡ್’ ವಿಚಾರದಲ್ಲೂ ಕರಾವಳಿಯ ಹೀರೋ ಅನ್ನಿಸಿಕೊಳ್ಳುತ್ತಿದ್ದಾರೆ. ಅವರ ನಾಯಕತ್ವಕ್ಕೆ ಕಾರಣವಾದದ್ದು ಒಂದು ಟ್ವೀಟ್..
ಪಂಚ ದ್ರಾವಿಡ ಭಾಷೆಗಳಲ್ಲಿ ಒಂದಾಗಿರುವ ‘ತುಳು’ಗೆ ಸೂಕ್ತ ಸ್ಥಾನಮಾನ ಸಿಕ್ಕಿದಂತಿಲ್ಲ. ತುಳುನಾಡು ಮೂರು ಜಿಲ್ಲೆಗಳಿಗೆ ಹಂಚಿ ಹೋಗಿವೆಯಾದರೂ ಕರ್ನಾಟಕದ ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಹಾಸನ, ಕೊಡಗು ಜಿಲ್ಲೆಗಳಲ್ಲಿ ತುಳು ಭಾಷಿಗರು ಪ್ರಾಬಲ್ಯ ಹೊಂದಿದ್ದಾರೆ. ಅದರಲ್ಲೂ ದಕ್ಷಿಣ ಕನ್ನಡ, ಉಡುಪಿ ಕಾಸರಗೋಡು ಜಿಲ್ಲೆಗಳನ್ನೊಳಗೊಂಡ ಪ್ರದೇಶ ‘ತುಳುನಾಡು’ ಎಂದೇ ಪ್ರತೀತಿ. ಲಿಪಿ ಸಹಿತ ತನ್ನದೇ ಆದ ಸಾಹಿತ್ಯ, ಕಲೆ, ಸಂಸ್ಕೃತಿಯ ಸಿರಿವಂತಿಕೆ ಹೊಂದಿದ್ದರೂ ತುಳು ಭಾಷೆಯು ಸರ್ಕಾರದ ಕ್ರಮದಿಂದ ದೂರ ಇದೆ. ಸಂಪೂರ್ಣ ನಿರ್ಲಕ್ಷ್ಯಕ್ಕೊಳಗಾಗಿದೆ ಎಂಬುದು ಹಲವರ ಆರೋಪ.
ಪಂಚ ದ್ರಾವಿಡ ಭಾಷೆಗಳ ಪೈಕಿ ತುಳು ಭಾಷೆಗೂ ಪ್ರಾಧಾನ್ಯತೆ ಸಿಗಬೇಕೆಂಬ ಹೋರಾಟ ಹಲವಾರು ವರ್ಷಗಳಿಂದಲೇ ನಡೆಯತ್ತಾ ಬಂದಿದ್ದು ಇದೀಗ ಈ ಭಾಷಾ ಹೋರಾಟವು ಅಭಿಯಾನದ ರೂಪದಲ್ಲಿ ತೀವ್ರಗೊಂಡಿದೆ. ‘ಕಿರಿಕ್ ಪಾರ್ಟಿ’ ಸಿನಿಮಾ ಖ್ಯಾತಿಯ ನಟ ರಕ್ಷಿತ್ ಶೆಟ್ಟಿ ಅವರು ಈ ತುಳು ಭಾಷಾ ಹೋರಾಟಕ್ಕೆ ಕಿಚ್ಚು ಹಚ್ಚಿದ್ದಾರೆ.
Tulu is the only one among the five popular Dravidian languages which hasn’t got its due. Request @CMofKarnataka to have a look in to this campaign and do the needful #TuluTo8thSchedule #TuluOfficialinKA_KL
— Rakshit Shetty (@rakshitshetty) June 13, 2021
ಪಂಚ ದ್ರಾವಿಡ ಭಾಷೆಗಳಲ್ಲಿ ಪ್ರಮುಖವಾಗಿರುವ ತುಳು ಭಾಷೆಗೆ ಲಭಿಸಬೇಕಾದದ್ದು ಸಿಕ್ಕಿಲ್ಲ. ಈ ಕುರಿತ ಅಭಿಯಾನದತ್ತ ಚಿತ್ತ ಹರಿಸಿ ಸೂಕ್ತ ಕ್ರಮವಿಡುವಂತೆ ರಕ್ಷಿತ್ ಶೆಟ್ಟಿ ಅವರು ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಟ್ವೀಟ್ ಮೂಲಕ ಒತ್ತಾಯಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸುತ್ತಾ ತುಳು ಭಾಷಾ ಪ್ರೇಮಿಗಳು ಟ್ವಿಟ್ಟರ್‌ನಲ್ಲಿ ರೊಚ್ಚಿಗೆದ್ದಿದ್ದಾರೆ. ತುಳು ಭಾಷೆಯನ್ನು ನಿರ್ಲಕ್ಷಿಸಿರುವ ಬಗ್ಗೆ ಅಸಮಾಧಾನ ಹಲವರದ್ದಾಗಿದ್ದರೆ, ‘ಜೈ ತುಳುನಾಡ್’ಗೆ ಬೆಂಬಲ ಸೂಚಿಸಿರುವ ರಕ್ಷಿತ್ ಶೆಟ್ಟಿ ಬಗ್ಗೆ ಶಹಬ್ಬಾಸ್‌ಗಿರಿ ವ್ಯಕ್ತಪಡಿಸಲಾಗಿದೆ.
ಈ ನಡುವೆ, ತುಳುನಾಡನ್ನು ಪ್ರತಿನಿಧಿಸುವ ಸಂಸದರು, ಶಾಸಕರು ತುಳು ಭಾಷೆಯ ಬಗ್ಗೆ ಆದ್ಯತೆ ನೀಡುತ್ತಿಲ್ಲ ಎಂಬ ಮಾತುಗಳೂ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಅಷ್ಟೇ ಅಲ್ಲ, ಸಂಸದ ನಳಿನ್ ಕುಮಾರ್ ಶೆಟ್ಟಿ ಅವರನ್ನು ಎಚ್ಚೆತ್ರುಕೊಳ್ಳುವಂತೆ ಮಾಡಲು ನಟ ‘ರಕ್ಷಿತ್ ಶೆಟ್ಟಿ’ ಮುಂದಾಗಿದ್ದಾರೆ ಎಂಬ ಅಭಿಪ್ರಾಯಗಳೂ ಕೇಳಿ ಬರುತ್ತಿವೆ. ಇನ್ನೊಂದೆಡೆ ಸಿನಿಮಾ ವರ್ಚಸ್ಸು ಹಿನ್ನೆಲೆಯಿಂದಾಗಿ ತುಳುನಾಡಿನಿಂದ ರಾಜಕಾರಣ ಆರಂಭಿಸಲು ಕಿರಿಕ್ ಹೀರೋ ಮುಂದಾಗಿದ್ದಾರೆಯೇ ಎಂಬ ಚರ್ಚೆಯೂ ಆರಂಭಗೊಂಡಿದೆ.