ಕರುನಾಡು ಕಂಡ ಭೀಕರ ಅಪಘಾತ;
ನಸುಕಿನ ಜಾವ ಲಾರಿಗೆ ಟಿಟಿ ಡಿಕ್ಕಿ
ಮಕ್ಕಳು ಸೇರಿ 13 ಮಂದಿ ಸಾವು
ಮೃತರೆಲ್ಲರೂ ಸಂಬಂಧಿಕರೇ..
ಹಾವೇರಿ: ಕರುನಾಡು ಇಂದು ಭೀಕರ ದುರ್ಘಟನೆಗೆ ಸಾಕ್ಷಿಯಾಯಿತು. ಹೆದ್ದಾರಿಯಲ್ಲಿ ನಿಂತಿದ್ದ ಲಾರಿಗೆ ಟಿಟಿ ವಾಹನ ಡಿಕ್ಕಿ ಹೊಡೆದು ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ಮಕ್ಕಳು ಸೇರಿದಂತೆ 13 ಮಂದಿ ದುರ್ಮರಣಕ್ಕೀಡಾಗಿದ್ದಾರೆ.
ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಗುಂಡೇನಹಳ್ಳಿ ಕ್ರಾಸ್ ಬಳಿ ಪೂನಾ- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂದು ಬೆಳ್ಳಂಬೆಳಿಗ್ಗೆ ಅಪಘಾತ ಸಂಭವಿಸಿದೆ. ನಿಂತಿದ್ದ ಲಾರಿಗೆ ಹಿಂಬದಿಯಿಂದ ಟಿಟಿ ಡಿಕ್ಕಿಯಾಗಿದ್ದು, ಈ ಟಿಟಿ ವಾಹನದಲ್ಲಿ 15 ಜನರು ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ಇಬ್ಬರು ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಚಿಚೊಳ್ಳಿ ಮಾಯಮ್ಮ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ ತಮ್ಮೂರಿಗೆ ಟಿಟಿಯಲ್ಲಿ ವಾಪಸಾಗಿದ್ದ ಸಂದರ್ಭದಲ್ಲಿ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಮೃತರು ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಎಮ್ಮಿಹಟ್ಟಿ ಗ್ರಾಮದವರು ಎನ್ನಲಾಗಿದ್ದು, ಒಂದೇ ಪರಿವಾರದವರು ಎಂದು ಹೇಳಲಾಗುತ್ತಿದೆ.
ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ರಕ್ಷಣಾ ಪರಿಹಾರ ಕೈಗೊಂಡು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.




























































