ಭ್ರಷ್ಟ ಅಧಿಕಾರಿಗಳ, ರಾಜಕಾರಣಿಗಳ ವಿರುದ್ಧ ‘ಸೀಮಂತ್ ರಣವ್ಯೂಹ’.. ರಾಜ್ಯದ ಪೊಲೀಸ್ ಇತಿಹಾಸದಲ್ಲೇ ಅಪೂರ್ವ ‘ಅದಲು-ಬದಲು ಆಟ’ದ ಪ್ರಯೋಗ.. ‘ಚಕ್ರವ್ಯೂಹದಲ್ಲಿ ಭ್ರಷ್ಟರು, ಇಕ್ಕಟ್ಟಿನಲ್ಲಿ ಪ್ರಭುಗಳು’..!!
ಬೆಂಗಳೂರು: ರಾಜ್ಯದಲ್ಲಿ ಭ್ರಷ್ಟಾಚಾರ ನಿಗ್ರಹ ದಳ ಪರಿಪೂರ್ಣವಾಗಿ ಅಖಾಡಕ್ಕೆ ಧುಮುಕಿದೆ. ಎಡಿಜಿಪಿ ಸಿಮಂತ್ ಕುಮಾರ್ ನಿರ್ದೇಶನದಲ್ಲಿ, ಗುರುವಾರ ಬೆಳ್ಳಂಬೆಳಿಗ್ಗೆ ನಡೆದ ಕ್ಷಿಪ್ರಕಾರ್ಯಾಚರಣೆ ರಾಜ್ಯದ ಆಡಳಿತಯಂತ್ರದಲ್ಲಿ ಸಂಚಲನ ಸೃಷ್ಟಿಸಿದೆ.
ಗುರುವಾರ ನಸುಕಿನ ಜಾವವೇ ಭ್ರಷ್ಟಾ ಅಧಿಕಾರಿಗಳ ಮನೆ ಬಾಗಿಲು ತಟ್ಟಿದ್ದ ಎಸಿಬಿ ಪೊಲೀಸರು ಇಡೀ ದಿನ ಕಾರ್ಯಾಚರಣೆ ನಡೆಸಿದ್ದಾರೆ. ಏಕ ಕಾಲದಲ್ಲಿ 40ಕ್ಕೂ ಹೆಚ್ಚು ಕಡೆ ನಡೆದ ಈ ಕಾರ್ಯಾಚರಣೆಯಲ್ಲಿ ಹಲವು ಅಧಿಕಾರಿಗಳ ಬ್ರಹ್ಮಾಂಡ ಭ್ರಷ್ಟಾಚಾರ ಬಯಲಾಗಿದೆ. ಹಲವು ಅಧಿಕಾರಿಗಳ ಬಳಿ ಆರೋಪಕ್ಕೆ ಸಂಬಂಧಿಸಿದ ದಾಖಲೆಗಳು ಸಿಕ್ಕಿವೆ ಎನ್ನಲಾಗಿದೆ.
ಬ್ರಹ್ಮಾಸ್ತ್ರ ಪ್ರಯೋಗಕ್ಕೆ ಮುನ್ನ ‘ಸೀಮಂತ್ ರಣತಂತ್ರ’:
ರಾಜ್ಯದ ವಿವಿಧ ಇಲಾಖೆಗಳ ಹತ್ತಾರು ಅಧಿಕಾರಿಗಳ ವಿರುದ್ದ ಗಂಭೀರ ಭ್ರಷ್ಟಾಚಾರ ಆರೋಪಗಳು ಕೇಳಿ ಬಂದಿವೆ. ಈ ಪೈಕಿ ಗಂಭೀರ ಪ್ರಕರಣಗಳ ಬಗ್ಗೆ ಪಟ್ಟಿ ಮಾಡಿದ ಎಸಿಬಿ ದಂಡನಾಯಕ ಸೀಮಂತ್ ಕುಮಾರ್ ಸಿಂಗ್ ತಮ್ಮದೇ ರೀತಿಯಲ್ಲಿ ಮಾಹಿತಿ ಕಲೆಹಾಕಿದ್ದಾರೆ. ಇಡಿ, ಐಟಿ ಅನುಸರಿಸಿದ ರೀತಿಯಲ್ಲೇ ತಮ್ಮದ ಆದ ಇಂಟಲಿಜೆನ್ಸಿ ನೆಟ್‌ವರ್ಕ್ ರಚಿಸಿದ ಸೀಮಂತ್ ಕುಮಾರ್ ಸಿಂಗ್, ವಿಶಿಷ್ಟ ರಣತಂತ್ರವನ್ನೇ ರೂಪಿಸಬೇಕಾಯಿತು. ಭ್ರಷ್ಟಾಚಾರ ಆರೋಪ ಕೇಳಿಬಂದ ಅಧಿಕಾರಿಗಳ ಪೈಕಿ ಬಹುತೇಕ ಮಂದಿಗೆ ರಾಜಕಾರಣಿಗಳ ಶ್ರೀರಕ್ಷೆ ಇದ್ದುದು ಗೊತ್ತಾಗಿದೆ. ಈ ಹಿನ್ನೆಲೆಯಲ್ಲಿ ಅತೀ ರಹಸ್ಯ ಕಾರ್ಯಾಚರಣೆಯ ಅಗತ್ಯತೆ ಬಗ್ಗೆ ಮನಗಂಡ ಐಪಿಎಸ್ ಅಧಿಕಾರಿ ಸೀಮಂತ್ ಕುಮಾರ್ ಸಿಂಗ್, ವಿವಿಧ ಜಿಲ್ಲೆಗಳಿಂದ ಉಪಾಧೀಕ್ಷಕ ಮೇಲ್ಪಟ್ಟ ಅಧಿಕಾರಿಗಳನ್ನು ಕರೆಸಿಕೊಂಡು, ದಾಳಿ ಸಂದರ್ಭದಲ್ಲಿ ಯಾವ ಸೂತ್ರ ಅನುಸರಿಸಿದರೆ ಒಳಿತು ಎಂಬ ಬಗ್ಗೆ ಮಾರ್ಗದರ್ಶನ ನೀಡಿದ್ದಾರೆ. ಈ ಅಧಿಕಾರಿಗಳಿಗೆ ಈ ವಿಶೇಷ ಮಾರ್ಗದರ್ಶನ ಏಕೆ? ಯಾವಾಗ ಕಾರ್ಯಾಚರಣೆ? ಯಾರ ವಿರುದ್ದ ಕಾರ್ಯಾಚರಣೆ ಎಂಬ ಬಗ್ಗೆ ತಿಳಿದಿರಲಿಲ್ಲ. ಈ ಕುರಿತ ಯಾವ ಕುರುಹನ್ನೂ ಸೀಮಂತ್ ಅವರು ಬಿಟ್ಟುಕೊಟ್ಟಿಲ್ಲ. ಕೆಆರ್‌ಐಡಿಎಲ್‌ನಂತಹಾ ನಿಗಮದ ಅಧಿಕಾರಿ ವಿರುದ್ದದ ಕಾರ್ಯಾಚರಣೆ ಸಂದರ್ಭದಲ್ಲಿ ರಾಜಕೀಯ ಒತ್ತಡ ಸಹಜ. ಅಷ್ಟೇ ಅಲ್ಲ, ಪರಿಚಿತ ಅಧಿಕಾರಿಗಳಿಂದ ಮಾಹಿತಿ ಸೋರಿಕೆಯಾದಲ್ಲಿ ಆರೋಪಿ ಅಧಿಕಾರಿಗಳು ದಾಖಲೆಗಳನ್ನು ಮರೆಮಾಚುವ ಸಾಧ್ಯತೆಗಳ ಹಿನ್ನೆಲೆಯಲ್ಲಿ ಚಾಲಾಕಿ ನಡೆಯನ್ನು ಸೀಮಂತ್ ಅನುಸರಿಸಿದ್ದಾರೆ.
ಯಶಸ್ವೀ ‘ಅದಲು ಬದಲು ಆಟ’:
ಪೊಲೀಸ್ ಇಲಾಖೆಯ ‘ಫೀನಿಕ್ಸ್’ ಎಂದೇ ಗುರುತಾಗಿರುವ ಸೀಮಂತ್ ಕುಮಾರ್ ಸಿಂಗ್, ಈ ಬಾರಿ ರಾಜಕಾರಣಿಗಳ ಜೊತೆಗೂ ಕಣ್ಣಾಮುಚ್ಚಾಳೆ ಆಟದಲ್ಲಿ ಯಶಸ್ವಿಯಾಗಿದ್ದಾರೆ. ಇದಕ್ಕಾಗಿ ಅವರು ರೂಪಿಸಿದ ರಣವ್ಯೂಹ ಅಚ್ಚರಿ ಹಾಗೂ ಕುತೂಹಲಕಾರಿ. ‘ಅದಲು ಬದಲು ಆಟ’ದ ಹಾದಿ ಹಿಡಿದ ಸೀಮಂತ್ ಕುಮಾರ್, ಕರಾವಳಿ ತೀರದ ಜಿಲ್ಲೆಗಳಿಗೆ ಹೈದರಾಬಾದ್ ಕರ್ನಾಟಕ ಭಾಗದ ಪೊಲೀಸ್ ತಂಡವನ್ನು ನೇಮಿಸಿದರು, ಮೈಸೂರು ಭಾಗದ ಜಲ್ಲೆಗಳಿಗೆ ಉತ್ತರ ಕರ್ನಾಟಕದ ಸಿಬ್ಬಂದಿಯನ್ನು ಕಳುಹಿಸಿಕೊಟ್ಟರು, ಉತ್ತರ ಹಾಗೂ ಹೈಕಾ ಭಾಗದಲ್ಲಿ ದಕ್ಷಿಣದ ಜಿಲ್ಕೆಗಳ ಪೊಲೀಸ್ ತಂಡವನ್ನು ಕಾರ್ಯಾಚರಣೆಗಿಳಿಸಿದರು. ಈ ಮೂಲಕ 9 ಅಧಿಕಾರಿಗಳ ವಿರುದ್ದದ ಭ್ರಷ್ಟಾಚಾರ ಆರೋಪಗಳನ್ನು ಬೇಧಿಸಲು 300ಕ್ಕೂ ಹೆಚ್ಚು ಸಿಬ್ಬಂದಿಯನ್ನು ಬಳಸಿಕೊಳ್ಳಲಾಯಿತು. ಅಚ್ಚರಿಯ ಸಂಗತಿ ಎಂದರೆ ಈ ಕಾರ್ಯಾಚರಣೆಯ ಸುಳಿವು ಸ್ವತಃ ಸಿಮಂತ್ ಕುಮಾರ್ ಸಿಂಗ್ ಅವರ ಕಚೇರಿ ಸಿಬ್ಬಂದಿಗೂ ತಿಳಿಯದ ರೀತಿ ರಹಸ್ಯ ಕಾಯ್ದುಕೊಳ್ಳಲಾಗಿತ್ತಂತೆ.
ಕಳಂಕ ತೊಳೆಯಲು ಪ್ರಯತ್ನ:
ಭ್ರಷ್ಟಾಚಾರ ಆರೋಪ ಕುರಿತ ಪ್ರಕರಣಗಳು ಹಳ್ಳ ಹಿಡಿಯತ್ತಿದೆ ಎಂಬ ಕಳಂಕ ದೂರವಾಗಬೇಕಿದೆ ಎಂಬ ಕಾರಣಕ್ಕಾಗಿ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಸೀಮಂತ್ ಕುಮಾರ್ ಸಿಂಗ್ ಈ ಸೂತ್ರ ರೂಪಿಸಿದ್ದಾರೆ. ರಾಜ್ಯದ ಪೊಲೀಸ್ ಇಲಾಖೆಯಲ್ಲೇ ಅಪೂರ್ವ ಎಂಬಂತೆ ಈ ಬಾರಿ ಹೊಸ ಪ್ರಯೋಗವನ್ನು ನಡೆಸಿದ್ದಾರೆ. ಪ್ರಮುಖವಾಗಿ ರಾಜಕೀಯ ಪ್ರಭುಗಳ ಶ್ರೀರಕ್ಷೆ ಇರುವ ಅಧಿಕಾರಿಗಳನ್ನು ಹೇಗಾದರೂ ಮಾಡಿ ಖೆಡ್ಡಕ್ಕೆ ಬೀಳಿಸಲೇಬೇಕೆಂಬ ಹಠ ಸಾಧಿಸುವ ಹಿನ್ನೆಲೆಯಲ್ಲಿ ಎಸಿಬಿ ಈ ರಣವ್ಯೂಹವನ್ನು ಅವರು ರೂಪಿಸಿದ್ದಾರೆ. ಇದು ಭ್ರಷ್ಟ ಅಧಿಕಾರಿಗಳ ವಿರುದ್ದ ಸಮರ ಎನ್ನುವುದಕ್ಕಿಂತ ರಾಜಕಾರಣಿಗಳ ಜೊತೆಗಿನ ಕಣ್ಣಾಮುಚ್ಚಾಳೆಯೂ ಹೌದು ಎಂದೆನ್ನಬಹುದು.