ಬೆಂಗಳೂರು: ವಂಚನೆ ಸಂಬಂಧದ ಸಚಿವರ ಆಪ್ತನ ವಿರುದ್ಧದ ಪೊಲೀಸ್ ತನಿಖೆ ಒಂದೆಡೆ ಸಾಗಿದ್ದರೆ, ಮತ್ತೊಂದೆಡೆ ಭ್ರಷ್ಟಾಚಾರ ವಿರೋಧಿ ಕಾರ್ಯಕರ್ತರು ಸಚಿವ ಶ್ರೀರಾಮುಲು ಅವರತ್ತ ಅಸ್ತ್ರ ಪ್ರಯೋಗಿಸಲು ಸಜ್ಜಾಗಿದ್ದಾರೆ. ಈ ಸನ್ನಿವೇಶಕ್ಕೆ ಬೆಂಗಳೂರಿನಲ್ಲಿ ನಡೆದ ಆಮ್ ಆದ್ಮಿ ಕಾರ್ಯಕರ್ತರ ಪ್ರತಿಭಟನೆ ಸಾಕ್ಷಿಯಾಯಿತು.
ಮಂತ್ರಿ ಶ್ರೀರಾಮುಲು ಪಿಎ ರಾಜಣ್ಣ ವಿರುದ್ದದ ವಂಚನೆ ಪ್ರಕರಣ ರಾಜ್ಯದ ಆಡಳಿತಾರೂಢ ಬಿಜೆಪಿಗೆ ಮುಜುಗರದ ಪ್ರಸಂಗವನ್ನು ತಂದೊಡ್ಡಿದೆ. ಈ ವಿಚಾರವನ್ನೇ ಮುಂದಿಟ್ಟು ಆಪ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಭ್ರಷ್ಟಾಚಾರ ಆರೋಪ ಹೊತ್ತಿರುವ ರಾಜಣ್ಣರನ್ನು ಬಂಧಿಸದಂತೆ ಶ್ರೀರಾಮುಲು ಅವರು ಸಿಸಿಬಿ ಮೇಲೆ ಒತ್ತಡ ಹೇರಿದ್ದಾರೆ ಎಂದು ಸಿಸಿಬಿ ಕಚೇರಿ ಬಳಿ ಪ್ರತಿಭಟನೆ ನಡೆಸಲಾಯಿತು. ರಾಮುಲು ಅವರ ಒತ್ತಡಕ್ಕೆ ಮಣಿದು ಪೊಲೀಸರು ಆರೋಪಿಯನ್ನು ಬಂಧಿಸದೆ ಬಿಟ್ಟು ಕಳುಹಿಸಿದ್ದಾರೆಂದು ಪ್ರತಿಭಟನಾಕಾರರು ಆಕ್ರೋಶ ಹೊರಹಾಕಿದರು.
ಚಾಮರಾಜಪೇಟೆ ಸಿಸಿಬಿ ಕಚೇರಿಗೆ ಪ್ರತಿಭಟನಾಕಾರರು ಮುತ್ತಿಗೆ ಹಾಕಲು ಯತ್ನಿಸಿದರು. ಈ ಸಂದರ್ಭದಲ್ಲಿ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟರು. ಈ ಸಂದರ್ಭದಲ್ಲಿ ಘೋಷಣೆ ಕೂಗಿದ ಪ್ರತಿಭಟನಾಕಾರರು, ಶ್ರೀರಾಮುಲು ಪಿಎ ರಾಜಣ್ಣರನ್ನು ಬಂಧಿಸಬೇಕು ಹಾಗೂ ವಿಜಯೇಂದ್ರ ಅವರನ್ನು ತನಿಖೆಗೆ ಒಳಪಡಿಸುವಂತೆ ಒತ್ತಾಯಿಸಿದರು.
ಈ ವೇಳೆ, ಸ್ಥಳದಿಂದ ತೆರಳುವಂತೆ ಪೊಲೀಸರು ಮನವಿ ಮಾಡಿದರೂ ಆಪ್ ಕಾರ್ಯಕರ್ತರು ಪ್ರತಿಭಟನೆಯನ್ನು ಮುಂದುವರಿಸಿದರು. ಈ ವೇಳೆ ಕಾರ್ಯಪ್ರವೃತ್ತರಾದ ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದು, ಕೆಎಸ್ಆರ್‌ಪಿ ಬಸ್‌ನಲ್ಲಿ ಪಡೆದು ಕರೆದೊಯ್ದರು.