ಬೆಂಗಳೂರು: ಪ್ರತಿ ಗ್ರಾಮ ಪಂಚಾಯತಿಗೆ 1.50 ಕೋಟಿ ಅನುದಾನವನ್ನು ನೇರವಾಗಿ ನೀಡಲಾಗುವುದು ಹಾಗೂ ನರೇಗಾ ಯೋಜನೆಯನ್ನು ನೇರವಾಗಿ ನೀಡಲಾಗುವುದು ಎಂದು ಆಮಿಷ ಒಡ್ಡಿರುವ ಉಪ ಮುಖ್ಯಮಂತ್ರಿ ಅಶ್ವತ್ಥ ನಾರಾಯಣ ಅವರಿಗೆ ಚುನಾವಣೆ ಘೋಷಣೆಯಾಗಿರುವ ಬಗ್ಗೆ ಕನಿಷ್ಠ ಜ್ಞಾನವಿಲ್ಲವೇ. ಈ ಕೂಡಲೇ ಈ ಹೇಳಿಕೆಯನ್ನು ವಾಪಸ್ಸು ಪಡೆಯಬೇಕು ಎಂದು ಆಮ್ ಆದ್ಮಿ ಪಕ್ಷ ಒತ್ತಾಯಿಸಿದೆ.
ಈ ಕುರಿತಂತೆ ಮಾಧ್ಯಮಗಳಿಗೆ ಹೇಳಿಕೆ ಬಿಡುಗಡೆ ಮಾಡಿರುವ ಆಮ್ ಆದ್ಮಿ, ಇಷ್ಟು ದಿನ ಗ್ರಾಮಗಳ ಬಗ್ಗೆ ಮಾತನ್ನೇ ಆಡದ ನೀವು ಈಗ “ಗ್ರಾಮ ಸ್ವರಾಜ್ಯ” ಎನ್ನುವ ಮೂಲಕ ಮಹಾತ್ಮ ಗಾಂಧೀಜಿಯವರ ಆಶಯಗಳಿಗೆ ಮಸಿ ಬಳಿಯುತ್ತಿದ್ದೀರಿ. ಚುನಾವಣೆ ಹೊತ್ತಿನಲ್ಲೇ ನಿಮಗೆ ಗ್ರಾಮಗಳ ನೆಪಪಾಗಬೇಕೆ? ಇಷ್ಟು ದಿನ ನಾಪತ್ತೆಯಾಗಿದ್ದ ನೀವು ದಿಡೀರ್ ಎಂದು ಪ್ರತ್ಯಕ್ಷವಾಗಿ ಸುಮ್ಮನೆ ಬಡಬಡಾಯಿಸುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದೆ.
ಈ ಮೊದಲು ಕರ್ನಾಟಕದಲ್ಲಿ 5 ವರ್ಷ ಸರ್ಕಾರ ನಡೆಸಿದ ನಿಮ್ಮ ಕೊಡುಗೆ ಗ್ರಾಮಗಳ ಉದ್ದಾರಕ್ಕೆ ಏನಿದೆ ಎಂಬುದನ್ನು ತಿಳಿಸಿ ಹಾಗೂ ಕಳೆದ ಒಂದು ವರ್ಷದಿಂದ ಒಂದೇ ಒಂದು ಹಳ್ಳಿಯನ್ನು ಉದ್ದಾರ ಮಾಡಿದ್ದೀರಾ ಎಂಬುದನ್ನು ತೋರಿಸಿ ಆನಂತರ ಈ ಯೋಜನೆ ಪ್ರಕಟಿಸಿ ಎಂದು ಆಮ್ ಆದ್ಮಿ ಪಕ್ಷ ನಿಮಗೆ ಸವಾಲು ಹಾಕಿದೆ.
ಜನಿಸಿದ ಹಳ್ಳಿಯನ್ನೇ ಉದ್ದಾರ ಮಾಡದ ನೀವು ಇನ್ನೂ ಕರ್ನಾಟಕದ ಸಾವಿರಾರು ಹಳ್ಳಿಗಳನ್ನು ಉದ್ದಾರ ಮಾಡುತ್ತೇನೆ ಎಂದು ಹೇಳಿರುವುದು ಹಾಸ್ಯಾಸ್ಪದ. ನಿಮ್ಮ ಜನ್ಮಸ್ಥಳವನ್ನು ಮಾದರಿ ಗ್ರಾಮವನ್ನಾಗಿ ಮಾಡಿ ಆನಂತರ ಇಡೀ ರಾಜ್ಯದ ಹಳ್ಳಿಗಳ ಅಭಿವೃದ್ಧಿ ಬಗ್ಗೆ ಮಾತನಾಡಲು ಯೋಗ್ಯತೆ ಬರುತ್ತದೆ ಎಂದು ಆಮ್ ಆದ್ಮಿ ಪಕ್ಷ ಸಲಹೆ ನೀಡಿದೆ.