ಮಂಗಳೂರು: ರಾಜ್ಯದ ನ್ಯಾಯಾಂಗ ಇತಿಹಾಸದಲ್ಲೇ ಅತೀ ಕಿರಿಯ ನ್ಯಾಯಾಧೀಶರಾಗಿ ಕರಾವಳಿಯ ಕುವರ ಆಯ್ಕೆಯಾಗಿದ್ದಾರೆ. ಅನಿಲ್ ಜಾನ್ ಸಿಕ್ವೇರಾ ( Anil John Sequeira Borimar) ಅವರು 25ನೇ ವಯಸ್ಸಿನಲ್ಲಿ ಕರ್ನಾಟಕದ ಅತ್ಯಂತ ಕಿರಿಯ ಸಿವಿಲ್ ನ್ಯಾಯಾಧೀಶರಾಗಿ ನೇಮಕಗೊಂಡಿದ್ದಾರೆ.
ಬಂಟ್ವಾಳ ತಾಲೂಕಿನ ಬೋರಿಮಾರ್ ಮೂಲದ ಅನಿಲ್ ಜಾನ್ ಸಿಕ್ವೇರಾ ಅವರು 2023 ರ ಕರ್ನಾಟಕ ಸಿವಿಲ್ ನ್ಯಾಯಾಧೀಶರ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಿದ್ದಾರೆ. ಪ್ರಿಲಿಮ್ಸ್, ಮೇನ್ಸ್ ಮತ್ತು ಸಂದರ್ಶನದಲ್ಲಿ 25ನೇ ವಯಸ್ಸಿನಲ್ಲಿ ತೇರ್ಗಡೆಯಾಗಿ ಕಿರಿಯ ಸಿವಿಲ್ ನ್ಯಾಯಾಧೀಶರಾಗಿ (ನ್ಯಾಯಾಂಗ ಮ್ಯಾಜಿಸ್ಟ್ರೇಟ್) ಆಯ್ಕೆಯಾಗಿದ್ದಾರೆ.
ತಮ್ಮ ಶೈಕ್ಷಣಿಕ ಪಯಣದುದ್ದಕ್ಕೂ ಅನಿಲ್ ಅವರು ಶಹಬ್ಬಾಸ್ ಗಿರಿ ಗಿಟ್ಟಿಸ್ಕೊಂಡೆ ಬಂದಿದ್ದಾರೆ. ಬೋರಿಮಾರ್ನಲ್ಲಿರುವ ಸೇಂಟ್ ಜೋಸೆಫ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಣ ಪ್ರಾರಂಭಿಸಿದ ಅವರು ಮಾಣಿಯ ಕರ್ನಾಟಕ ಹೈಸ್ಕೂಲ್’ನಲ್ಲಿ ಪ್ರೌಢ ಶಿಕ್ಷಣ, ಪುತ್ತೂರಿನ ಸೇಂಟ್ ಫಿಲೋಮಿನಾ ಪಿಯು ಕಾಲೇಜಿನಲ್ಲಿ ಪದವಿ ಪೂರ್ವ ಶಿಕ್ಷಣ ಪಡೆದು, ಮಂಗಳೂರಿನ ಎಸ್ಡಿಎಂ ಕಾನೂನು ಕಾಲೇಜಿನಲ್ಲಿ ಬಿಬಿಎ, ಎಲ್ಎಲ್ಬಿ ಪದವೀಧರರಾಗಿರುವ ಅನಿಲ್, ಮಂಗಳೂರು ವಕೀಲರ ಸಂಘದ ಸಕ್ರಿಯ ಸದಸ್ಯರಾಗಿದ್ದಾರೆ. ನ್ಯಾಯವಾದಿಗಳಾದ ದೀಪಕ್ ಡಿಸೋಜಾ ಮತ್ತು ನವೀನ್ ಎಸ್.ಪೈಸ್ ಅವರು ಸಿವಿಲ್ ವಕೀಲರಾಗಿ ಅನಿಲ್ ಅವರಿಗೆ ಮಾರ್ಗದರ್ಶನ ಮಾಡಿದ್ದಾರೆ.
ಹೈಸ್ಕೂಲ್ ಸಂದರ್ಭದಲ್ಲೇ ಶಾಲಾ ಪೀಪಲ್ ಲೀಡರ್ ಆಗಿ ನಾಯಕತ್ವದ ಗುಣಗಳನ್ನು ರೂಢಿಸಿಕೊಂಡಿದ್ದ ಅನಿಲ್ ಜಾನ್ ಸಿಕ್ವೇರಾ, SDM ಕಾನೂನು ಕಾಲೇಜಿನನಲ್ಲೂ ವಿದ್ಯಾರ್ಥಿ ನಾಯಕನಾಗಿ ವಿವಿಧ ಸಮಿತಿಗಳ ಪ್ರಮುಖರಾಗಿಯೂ ಗುರುತಾಗಿದ್ದರು. 2022 ರಲ್ಲಿ ಮಂಗಳೂರು ಧರ್ಮಪ್ರಾಂತ್ಯದ ಐಸಿವೈಎಂ (ಇಂಡಿಯನ್ ಕ್ಯಾಥೋಲಿಕ್ ಯೂತ್ ಮೂವ್ಮೆಂಟ್) ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.
25ನೇ ವಯಸ್ಸಿನಲ್ಲಿ ಎರಡನೇ ಪ್ರಯತ್ನದಲ್ಲಿ ಕರ್ನಾಟಕ ಸಿವಿಲ್ ನ್ಯಾಯಾಧೀಶರ ಪರೀಕ್ಷೆಯಲ್ಲಿ ಉತ್ತೀರ್ಣರಾಗುವಲ್ಲಿ ಅನಿಲ್ ಯಶಸ್ವಿಯಾಗಿದ್ದು, ಇವರ ಸಾಧನೆಗೆ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದೆ.