ನವದೆಹಲಿ: ಪುಲ್ವಾಮಾ ಉಗ್ರ ದಾಳಿಯ ಬಳಿಕ ಉಭಯ ದೇಶಗಳ ಗಡಿ ಭಾಗದಲ್ಲಿ ಉಂಟಾಗಿದ್ದ ಯುದ್ಧ ಭೀತಿಯ ಸಂದರ್ಭದಲ್ಲಿ ಪಾಕಿಸ್ತಾನದ ಎಫ್-16 ಯುದ್ಧ ವಿಮಾನವನ್ನು ಹೊಡೆದುರುಳಿಸಿ ಸಾಹಸ ಮೆರೆದಿದ್ದ ಪೈಲಟ್ ಅಭಿನಂದನ್ ವರ್ಧಮಾನ್ರಿಗೆ ವೀರ ಚಕ್ರ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಶತ್ರು ರಾಷ್ಟ್ರದ ಬಲಿಷ್ಠ ಯುದ್ಧ ವಿಮಾನ ನೆಲಕ್ಕುರುಳಿಸಿ ನಂತರದಲ್ಲಿ ಆ ರಾಷ್ಟ್ರಕ್ಕೆ ಅಚಾನಕ್ಕಾಗಿ ಪ್ರವೇಶಿಸಿ ಅಲ್ಲಿ ಕೆಲ ದಿನ ಬಂಧಿಯಾಗಿದ್ದರು. ಆದರೂ ಭಾರತದ ಯಾವುದೇ ರಹಸ್ಯ ಮಾಹಿತಿಯನ್ನು ಬಿಟ್ಟುಕೊಡದೆ ದಿಟ್ಟತನ ಮೆರೆದಿದ್ದರು. ಶತ್ರು ರಾಷ್ಟ್ರದಲ್ಲೂ ವೀರತ್ವ ಪ್ರದರ್ಶಿಸಿದ ಅಭಿನಂದನ್ 73 ಸ್ವಾತಂತ್ರ್ಯ ದಿನವಾದ ನಾಳೆ ವೀರ ಚಕ್ರ ಪ್ರಶಸ್ತಿ ಸ್ವೀಕರಿಸಲಿದ್ದಾರೆ.
ಮಿಲಿಟರಿ ಗೌರವದಲ್ಲಿ ವೀರ ಚಕ್ರ ಮೂರನೇ ಅತ್ಯುನ್ನತ ಗೌರವವಾಗಿದ್ದು, ಪರಮ ವೀರ ಚಕ್ರ ಹಾಗೂ ಮಹಾ ವೀರ ಚಕ್ರ ಮೊದಲೆರಡು ಅತ್ಯುನ್ನತ ಗೌರವಗಳಾಗಿವೆ.
ವಾಯುಸೇನೆಯ ಸ್ಕ್ವಾಡ್ರನ್ ಲೀಡರ್ ಮಿಂಟಿ ಅಗರ್ವಾಲ್ಗೆ ಯುದ್ಧ ಸೇವಾ ಪದಕ ನೀಡಲಾಗಿದ್ದು, ಫೆ.27ರಂದು ಭಾರತದ ವಾಯುದಾಳಿಯಲ್ಲಿ ಮಿಂಟಿ, ಫೈಟರ್ ಕಂಟ್ರೋಲರ್ ಆಗಿ ಕಾರ್ಯ ನಿರ್ವಹಿಸಿದ್ದರು.