ಮುಂಬೈ: ಬಹುನಿರೀಕ್ಷಿತ ಸೈಕಲಾಜಿಕಲ್ ಹಾರರ್ ಸಿನಿಮಾ ‘ಕಾಲಿ ಖೇತಿ’ಯ ಟ್ರೇಲರ್ ಬಿಡುಗಡೆಯಾಗಿದೆ. ಜಾಕಿ ಶ್ರಾಫ್ ಮತ್ತು ಶರದ್ ಕೆಲ್ಕರ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಚಿತ್ರವು ಗ್ರಾಮೀಣ ಹಿನ್ನೆಲೆಯ ವಿಭಿನ್ನ ಭಯಾನಕ ಕಥೆಯೊಂದಿಗೆ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ.
ಚಿತ್ರದ ಟ್ರೇಲರ್ನಲ್ಲಿ ಕೃಷಿಭೂಮಿ, ಗ್ರಾಮೀಣ ಜನಪದ ನಂಬಿಕೆಗಳು ಹಾಗೂ ಅಲೌಕಿಕ ಶಕ್ತಿಗಳ ಸುತ್ತ ಹೆಣೆದ ನಿಗೂಢ ಕಥೆಯನ್ನು ಪರಿಚಯಿಸಲಾಗಿದೆ. ಜನರ ಬದುಕಿಗೆ ಆಧಾರವಾಗಿರುವ ಭೂಮಿಯೇ ಭಯಾನಕ ರಹಸ್ಯಗಳ ಕೇಂದ್ರವಾಗಿರುವುದು ಚಿತ್ರದ ಕುತೂಹಲ ಹೆಚ್ಚಿಸಿದೆ.

ಹ್ಯಾರಿಸ್ ಇಮ್ತಿಯಾಜ್ ಖಾನ್ ಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರವನ್ನು ಸನಾ ಖಾನ್ ನಿರ್ಮಿಸಿದ್ದಾರೆ. ನೇಹಾ ಸರ್ಗಮ್, ವೀರೇಂದ್ರ ಸಕ್ಸೇನಾ ಮತ್ತು ಶಾಜಿ ಚೌಧರಿ ಕೂಡ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಬ್ಲ್ಯಾಕ್ ಕ್ಯಾನ್ವಾಸ್ ಸ್ಟುಡಿಯೋ ಬ್ಯಾನರ್ ಅಡಿಯಲ್ಲಿ ಸಿನಿಮಾ ನಿರ್ಮಾಣಗೊಂಡಿದೆ. ನವೆಂಬರ್ 20ರಂದು ಚಿತ್ರಮಂದಿರಗಳಲ್ಲಿ ‘ಕಾಲಿ ಖೇತಿ’ ಬಿಡುಗಡೆಯಾಗಲಿದೆ.















































































