ನವದೆಹಲಿ: ಭಾರತದಲ್ಲಿ 2015ರಿಂದ ಕ್ಷಯರೋಗದಿಂದ ಸಂಭವಿಸುತ್ತಿರುವ ಸಾವಿನ ಪ್ರಮಾಣ ಶೇ.38ರಷ್ಟು ಇಳಿಕೆಯಾಗಿದೆ. ಔಷಧ-ಸಂವೇದನಾಶೀಲ ಕ್ಷಯರೋಗ ಚಿಕಿತ್ಸೆಯಲ್ಲಿ ಶೇ.94ರಷ್ಟು ಯಶಸ್ಸು ದಾಖಲಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ (WHO) ಜಾಗತಿಕ ಕ್ಷಯರೋಗ ವರದಿ-2026 ತಿಳಿಸಿದೆ.
ನವೆಂಬರ್ 12ರಂದು ಬಿಡುಗಡೆಯಾದ ವರದಿಯ ಪ್ರಕಾರ, ಜಾಗತಿಕವಾಗಿ ಕ್ಷಯರೋಗ ಸಾವು ಪ್ರಮಾಣ ಶೇ.35ರಷ್ಟು ಇಳಿಕೆಯಾಗಿದ್ದರೆ, ಭಾರತದಲ್ಲಿ ಶೇ.38ರಷ್ಟು ಇಳಿಕೆ ಕಂಡುಬಂದಿದೆ.
ಕೇಂದ್ರ ಸರ್ಕಾರದ ‘ಟಿಬಿ ಮುಕ್ತ ಭಾರತ ಅಭಿಯಾನ’ದಡಿ 25 ಕೋಟಿಗೂ ಹೆಚ್ಚು ಜನರನ್ನು ತಪಾಸಣೆಗೆ ಒಳಪಡಿಸಲಾಗಿದೆ. 2024ರ ಡಿಸೆಂಬರ್ನಿಂದ 2026ರ ನವೆಂಬರ್ 8ರವರೆಗೆ 11 ಕೋಟಿಗೂ ಹೆಚ್ಚು ಎದೆಯ ಎಕ್ಸ್ರೇ ಹಾಗೂ 3 ಕೋಟಿ ಆಣ್ವಿಕ ಪರೀಕ್ಷೆಗಳನ್ನು ನಡೆಸಲಾಗಿದೆ. ಈ ಮೂಲಕ 48.64 ಲಕ್ಷ ಪ್ರಕರಣಗಳು ಪತ್ತೆಯಾಗಿದ್ದು, 14.97 ಲಕ್ಷ ಮಂದಿಯಲ್ಲಿ ರೋಗಲಕ್ಷಣಗಳಿಲ್ಲದಿದ್ದರೂ ಕ್ಷಯರೋಗ ಗುರುತಿಸಲಾಗಿದೆ.

2015ರಲ್ಲಿ ಪ್ರತಿ ಲಕ್ಷ ಜನಸಂಖ್ಯೆಗೆ 28ರಷ್ಟಿದ್ದ ಕ್ಷಯರೋಗ ಮರಣ ಪ್ರಮಾಣ 2025ರಲ್ಲಿ 18ಕ್ಕೆ ಇಳಿದಿದೆ.
ರೋಗ ಪತ್ತೆಗಾಗಿ ಕೃತಕ ಬುದ್ಧಿಮತ್ತೆ ಆಧಾರಿತ ಎಕ್ಸ್ರೇ ತಂತ್ರಜ್ಞಾನ, ತ್ವರಿತ ಪರೀಕ್ಷಾ ವಿಧಾನ ಹಾಗೂ ನಿ-ಕ್ಷಯ ಡಿಜಿಟಲ್ ವೇದಿಕೆಯನ್ನು ವಿಸ್ತರಿಸಲಾಗಿದೆ. ನಿ-ಕ್ಷಯ ಪೋಷಣ್ ಯೋಜನೆಯಡಿ ಪೌಷ್ಟಿಕಾಂಶ ನೆರವು ಮತ್ತು ನಿ-ಕ್ಷಯ ಮಿತ್ರ ಉಪಕ್ರಮದಡಿ ಸಮುದಾಯದ ಸಹಕಾರ ನೀಡಲಾಗುತ್ತಿದೆ.
2025ರಲ್ಲಿ 67,933 ಪಂಚಾಯತ್ಗಳನ್ನು ಕ್ಷಯರೋಗ ಮುಕ್ತ ಎಂದು ಘೋಷಿಸಲಾಗಿದೆ. ದೇಶದ ಕ್ಷಯರೋಗ ನಿಯಂತ್ರಣ ಕಾರ್ಯಕ್ರಮದ ಶೇ.96ರಷ್ಟು ವೆಚ್ಚವನ್ನು ದೇಶೀಯ ಸಂಪನ್ಮೂಲಗಳಿಂದಲೇ ಭರಿಸಲಾಗುತ್ತಿದೆ ಎಂದು ವರದಿ ತಿಳಿಸಿದೆ.














































































